ADVERTISEMENT

ಯಾದಗಿರಿ: ಸರ್ಕಾರಿ ಶಾಲೆ ಉಳಿಸಲು ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 6:33 IST
Last Updated 8 ಡಿಸೆಂಬರ್ 2025, 6:33 IST
ಯಾದಗಿರಿ ಗೋಟಗಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಂಭಾಗದಲ್ಲಿ ಶನಿವಾರ ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಪೋಷಕರು ಪ್ರತಿಭಟನೆ ನಡೆಸಿದರು 
ಯಾದಗಿರಿ ಗೋಟಗಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಂಭಾಗದಲ್ಲಿ ಶನಿವಾರ ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಪೋಷಕರು ಪ್ರತಿಭಟನೆ ನಡೆಸಿದರು    

ಯಾದಗಿರಿ: ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲು ಗೋಟಗಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಹಲವು ಶಾಲೆಗಳನ್ನು ಮುಚ್ಚುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು. 

ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಹಲವು ವರ್ಷಗಳಿಂದ ಮಕ್ಕಳಿಗೆ ಶಿಕ್ಷಣದ ಆಧಾರ ಸ್ತಂಭವಾಗಿದೆ. ಹೀಗಾಗಿ, ಗ್ರಾಮದ ಶಾಲೆಯನ್ನು ಯಾವುದೇ ಕಾರಣಕ್ಕೂ ಬೇರೊಂದು ಶಾಲೆಯೊಂದಿಗೆ ವಿಲೀನಗೊಳಿಸುವುದನ್ನು ಒಪ್ಪುವುದಿಲ್ಲ. ಸರ್ಕಾರ ಕೂಡಲೇ ವಿಲೀನದ ನಿರ್ಧಾರವನ್ನು ಕೈಗಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಎಐಡಿಎಸ್‌ಒ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ ಮಾತನಾಡಿ, ‘ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ರಾಜ್ಯದಾದ್ಯಂತ 40 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆ. ಈ ಯೋಜನೆಯ ಭಾಗವನ್ನಾಗಿ ಹಲವು ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಯನ್ನಾಗಿ ಮಾಡಿ, ಗೋಟಗಿ ಗ್ರಾಮದ ಶಾಲೆ ಸೇರಿದಂತೆ ಸುತ್ತಲಿ ಹಲವು ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಗಳಿಗೆ ಸೇರಿಸಲು ನಿರ್ಧರಿಸಿದೆ’ ಎಂದು ಆರೋಪಿಸಿದರು.

ADVERTISEMENT

‘ಸರ್ಕಾರದ ಆದೇಶದ ಪ್ರಕಾರ ಈ ಶಾಲೆಗಳ ನಿರ್ವಹಣೆಯು ಹೊರಗುತ್ತಿಗೆಯಿಂದ ನಡೆಯಬೇಕು. ತಮ್ಮ ಆದಾಯವನ್ನು ತಾನೇ ಸೃಷ್ಟಿಸಿಕೊಳ್ಳಬೇಕು ಎಂದಿದೆ. ಮಂಡ್ಯದಲ್ಲಿರುವ ಕೆಪಿಎಸ್ ಶಾಲೆಗೆ ಬರುವ ಮಕ್ಕಳು ತಿಂಗಳಿಗೆ ₹4,800 ಕೊಟ್ಟು ಬಸ್‌ಗಳಲ್ಲಿ ಶಾಲೆಗೆ ಬರಬೇಕು. ಗೋಟಗಿ ಶಾಲೆಗೂ ಅದೇ ಗತಿ ಬರಲಿದೆ. ಸರ್ಕಾರಿ ಶಾಲೆಗಳು ನಮ್ಮ ಹಕ್ಕು, ಅವುಗಳನ್ನು ಮುಚ್ಚಬಾರದು’ ಎಂದು ಆಗ್ರಹಿಸಿದರು.

ಗೋಟಗಿ ಗ್ರಾಮದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಮನೋಹರ್ ಮಾತನಾಡಿ, ‘ನಮಗೆ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಬೇಡ. ಅದು ಬಡವರ ವಿರೋಧಿ ಯೋಜನೆಯಾಗಿದೆ. ಏನೇ ಆದರೂ ನಮ್ಮೂರ ಸರ್ಕಾರಿ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ’ ಎಂದರು.

ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಸದಸ್ಯೆ ಸೋನುಬಾಯಿ ಮಾತನಾಡಿ, ‘ಬಡವರು ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ನಮ್ಮ ತೆರಿಗೆಯ ಹಣದಲ್ಲಿ ಸರ್ಕಾರ ಶಾಲೆಗಳನ್ನು ನಡೆಸಲಿ. ನಾವು ಒಂದೇ ಒಂದು ರೂಪಾಯಿ ಸಹ ಕೊಡುವುದಿಲ್ಲ’ ಎಂದು ಹೇಳಿದರು.

ಪ್ರತಿಭಟನೆ ಎಐಡಿಎಸ್‌ಒ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ನಾಗರಾಜ್, ಕುಮಾರ್, ದಿನೇಶ್, ಆಕಾಶ್, ಸುಭಾಷ್, ಅರುಣ್, ಚೆನ್ನಪ್ಪ, ಕಾರ್ತಿಕ್, ನಂದಿನಿ, ರವೀನಾ, ಶಿವಾನಿ ಸೇರಿದಂತೆ ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.