
ಯಾದಗಿರಿ ನಗರದ ಎಪಿಎಂಸಿ ಆವರಣದಲ್ಲಿ ಮಂಗಳವಾರ ಶೇಂಗಾ ದರ ಕುಸಿತದಿಂದ ಆತಂಕದಲ್ಲಿ ಜಮಾಯಿಸಿದ್ದ ಬೆಳೆಗಾರರು
ಯಾದಗಿರಿ: ಕೆರೆ, ಕೊಳವೆ ಬಾವಿ ಆಶ್ರಿತ ಪ್ರದೇಶದಲ್ಲಿ ಬೆಳೆದ ಶೇಂಗಾ ಕಟಾವು ಎಲ್ಲೆಡೆ ಭರದಿಂದ ಸಾಗಿದೆ. ಧಾರಣೆಯಲ್ಲಿ ಹಠಾತ್ ಕುಸಿತದಿಂದ ಬೆಳೆಗಾರರು ಆತಂಕಗೊಂಡಿದ್ದಾರೆ.
ವಾರದ ಹಿಂದೆಯಷ್ಟೇ ಆಶಾದಾಯಕವಾಗಿದ್ದ ಶೇಂಗಾ ಧಾರಣೆಯು ಏಕಾಏಕಿ ಕುಸಿದಿದ್ದರಿಂದ ಮಂಗಳವಾರ ನಗರದ ಎಪಿಎಂಸಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ವಾರದ ಹಿಂದೆಯಷ್ಟೇ (ಜ.27) ಒಂದು ಕ್ವಿಂಟಲ್‌ಗೆ ಮಾದರಿ ದರ ₹ 10,456ರವರೆಗೆ ಇತ್ತು. ಮಂಗಳವಾರ ಅದು ₹ 6,841ಕ್ಕೆ ತಲುಪಿದ್ದು, ₹ 3,615 ಕುಸಿತವಾಗಿದೆ. ಉತ್ತಮ ಬೆಲೆ ನಿರೀಕ್ಷೆಯಲ್ಲಿ ಒಂದೇ ದಿನ 12,138 ಕ್ವಿಂಟಲ್ ತಂದಿದ್ದ ಶೇಂಗಾ ರಾಶಿ, ಚೀಲುಗಳು ಎಪಿಎಂಸಿ ಆವರಣದಲ್ಲಿ ಆವರಿಸಿಕೊಂಡಿವೆ.
ಜ.27ರಂದು ಒಂದು ಕ್ವಿಂಟಲ್‌ಗೆ ಕನಿಷ್ಠ ದರ ₹ 7,101, ಗರಿಷ್ಠ ₹11,809 ಹಾಗೂ ಮಾದರಿ ಬೆಲೆ ₹ 10,456 ಇತ್ತು. ವಾರದ ಬಳಿಕ ಕನಿಷ್ಠ ದರ ₹4,559, ಗರಿಷ್ಠ ₹ 8,429 ಹಾಗೂ ಮಾದರಿ ಧಾರಣೆ ₹ 6,841ಕ್ಕೆ ಇಳಿದಿದೆ. ಕಳೆದ ಮೂರು ದಿನಗಳಲ್ಲಿ 36 ಸಾವಿರಕ್ಕೂ ಹೆಚ್ಚು ಕ್ವಿಂಟಲ್ ಶೇಂಗಾ ಆವಕ ಆಗಿದ್ದು, ಬೆಲೆ ಮಾತ್ರ ಪಾತಾಳ ಕಂಡಿದೆ.
ಯಾದಗಿರಿ ತಾಲ್ಲೂಕಿನ ಅಬ್ಬೆ ತುಮಕೂರು, ಯರಗೋಳ, ಮುದ್ನಾಳ, ಹಳಿಗೇರಾ, ಹತ್ತಿಕುಣಿ, ಹೊನಗೇರಾ, ಮೈಲಾಪುರ, ರಾಮಸಮುದ್ರ ಸೇರಿ ಇತರೆ ಗ್ರಾಮಗಳು ಹಾಗೂ ಗುರುಮಠಕಲ್‌ನ ಕೆಲ ಗ್ರಾಮಗಳಲ್ಲಿ ಬೆಳೆ ಶೇಂಗಾ ನಿತ್ಯ ಸಾವಿರಾರು ಕ್ವಿಂಟಲ್ ಮೂಟೆಗಳು ಎಪಿಎಂಸಿಗೆ ಬಂದಿದೆ.
‘ಈಚೆಗೆ ಬಜೆಟ್ ಮಂಡನೆಯಾಗಿದ್ದು, ಹಣ ದುಬ್ಬರ ನಿಯಂತ್ರಣ ಮಾಡಲು ರಫ್ತು ತಡೆಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ, ದರ ಕುಸಿತ ಆಗಿರಬಹುದು’ ಎನ್ನುತ್ತಾರೆ ಎಪಿಎಂಸಿ ಅಧಿಕಾರಿಯೊಬ್ಬರು.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಯಾದಗಿರಿ ಎಪಿಎಂಸಿ ಕಾರ್ಯದರ್ಶಿ ಶಿವಕುಮಾರ ದೇಸಾಯಿ, ‘ದರ ತುಂಬ ಮೇಲ್ಮುಖವಾಗಿ ಏರಿದ್ದರಿಂದ ಬೆಳೆಗಾರರು ಶೇಂಗಾ ಬೆಳೆ ಇನ್ನೂ ಹಸಿಯಾಗಿ ಇರುವಾಗಲೇ ಕೆಲವರು ಕಿತ್ತುಕೊಂಡು ಮಾರುಕಟ್ಟೆಗೆ ತಂದಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿನ ಆವಕ ಹಾಗೂ ಗುಣಮಟ್ಟದ ಕಾರಣಕ್ಕೂ ಕುಸಿತ ಆಗಿರಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.