ADVERTISEMENT

ಗುರುಮಠಕಲ್: ವಸತಿ ನಿಲಯದ ಅವ್ಯವಸ್ಥೆ ಸರಿಪಡಿಸಿ

ಗುರುಮಠಕಲ್: ವಿದ್ಯಾರ್ಥಿಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 6:27 IST
Last Updated 9 ಫೆಬ್ರುವರಿ 2023, 6:27 IST
ಗುರುಮಠಕಲ್ ಪಟ್ಟಣದ ಹಳೇ ತಹಶೀಲ್ದಾರ್ ಕಚೇರಿಯ ಎದುರು ಬುಧವಾರ ಹಾಸ್ಟೆಲ್ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಸಮಾಜ ಕಲ್ಯಾಣ ಇಲಾಖೆಯ ಚನ್ನಬಸವ ಅವರಿಗೆ ಮನವಿ ಪತ್ರ ನೀಡಿದರು
ಗುರುಮಠಕಲ್ ಪಟ್ಟಣದ ಹಳೇ ತಹಶೀಲ್ದಾರ್ ಕಚೇರಿಯ ಎದುರು ಬುಧವಾರ ಹಾಸ್ಟೆಲ್ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಸಮಾಜ ಕಲ್ಯಾಣ ಇಲಾಖೆಯ ಚನ್ನಬಸವ ಅವರಿಗೆ ಮನವಿ ಪತ್ರ ನೀಡಿದರು   

ಗುರುಮಠಕಲ್: ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ (ಎಸ್ಸಿ) ಅವ್ಯವಸ್ಥೆಯ ಆಗರವಾಗಿದೆ, ಸಮಯಕ್ಕೆ ಮೆನು ಪ್ರಕಾರ ಊಟವಿಲ್ಲ, ಊಟಮಾಡುವ ತಟ್ಟೆಗಳಿಲ್ಲ, ಸ್ವಚ್ಛತೆಯಿಲ್ಲ, ನೀರು ಶುದ್ಧೀಕರಣ ಘಟಕ ಸರಿಯಿಲ್ಲ, ವಿದ್ಯುತ್ ಸಮಸ್ಯೆ ಸೇರಿದಂತೆ ಮೂಲ ಸೌಕರ್ಯಗಳೂ ಸರಿಯಾಗಿಲ್ಲ. ಕೂಡಲೇ ಸಮಸ್ಯೆ ಸರಿಪಡಿಸಬೇಕು ಹಾಗೂ ಬೇಜಾವಬ್ದಾರಿ ವಾರ್ಡನ್ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಬುಧವಾರ ಹಾಸ್ಟೆಲ್ ವಿದ್ಯಾರ್ಥಿಗಳು ಹಳೇ ತಹಶೀಲ್ದಾರ್ ಕಚೇರಿಯ ಎದುರುಗಡೆ ಪ್ರತಿಭಟನೆ ನಡೆಸಿದರು.

ಈವರೆಗೆ ಹಲವು ಬಾರಿ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಸರಿಪಡಿಸಿ ಎಂದು ಮನವಿ ಮಾಡಿದರೂ ಉಪಯೋಗವಾಗಿಲ್ಲ, ವಾರ್ಡನ್ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ, ಕಾಟಾಚಾರಕ್ಕೆ ಬರುವ ಅಧಿಕಾರಿಗಳು ನೀಡಿದ ಭರವಸೆಗಳು ಒಂದೂ ಈಡೇರಿಲ್ಲ ಎಂದು ಆಗ್ರಹಿಸಿದ ವಿದ್ಯಾರ್ಥಿಗಳು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಬರುವವರೆಗೂ ಪ್ರತಿಭಟನೆ ಮಾಡುವುದಾಗಿ ಪಟ್ಟುಹಿಡಿದರು.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಚನ್ನಬಸವ ಅವರು ಆಗಮಿಸುತ್ತಿದ್ದಂತೆ ಸಮಸ್ಯೆಗಳ ಮಹಾಪುರವನ್ನೆ ತೆರೆದಿಟ್ಟ ವಿದ್ಯಾರ್ಥಿಗಳು ತಮ್ಮ ಮಕ್ಕಳನ್ನೂ ಹೀಗೇ ನೋಡಿಕೊಳ್ಳುತ್ತೀರಾ? ಶೌಚಾಲಯ ಪ್ರವೇಶಿಸಿದರೆ ನಮ್ಮ ಕಷ್ಟ ಹೇಳತೀರದು, ದುರ್ವಾಸನೆಯ ಭಯಕ್ಕೆ ಬಯಲು ಶೌಚವೆ ಗತಿಯಾಗಿದೆ. ಹಾಸ್ಟೆಲ್ ಗ್ರಂಥಾಲಯದಲ್ಲಿ ಪುಸ್ತಕಗಳಿಲ್ಲ, ಬಿಸಿ ನೀರು ಬಾರದು, ಆರ್.ಒ. ಘಟಕ ಕೆಟ್ಟಿದೆ, ಗುಣಮಟ್ಟದ ಊಟ ಕನಸಾಗಿದೆ ಎಂದು ಆಕ್ರೋಶಗೊಂಡರು.

ADVERTISEMENT

ಕೂಡಲೇ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ವೈಯಕ್ತಿಕ ಮುತುವರ್ಜಿ ವಹಿಸುವುದಾಗಿ ಸಮಾಜ ಕಲ್ಯಾಣಾಧಿಕಾರಿ ಚನ್ನಬಸವ ಭರವಸೆ ನೀಡಿದ ನಂತರ ಮನವಿ ಪತ್ರ ನೀಡಿ ಪ್ರತಿಭಟನೆಯನ್ನು ಕೊನೆಗೊಳಿಸಲಾಯಿತು.

ಮಾಜಿ ಪುರಸಭೆ ಸದಸ್ಯ ಲಿಂಗಪ್ಪ ತಾಂಡೂರ್ಕರ್, ಕಾಂಗ್ರೆಸ್ ಮುಖಂಡ ಸಾಯಿಬಣ್ಣ ಬೋರಬಂಡಾ, ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ ಗದ್ದಗಿ, ಮೂಖಂಡ ಶ್ರೀಧರರೆಡ್ಡಿ, ಸಾಬಣ್ಣ ಹೂಗಾರ ಇದ್ದರು.

ವಿದ್ಯಾರ್ಥಿಗಳು ಕೆಲಕಾಯ ವಿಜಾಪುರ-ಹೈದ್ರಾಬಾದ್ ಹೆದ್ಧಾರಿ-16 ಮಧ್ಯೆ ಅಡುಗೆ ಪಾತ್ರೆಗಳನ್ನಿಟ್ಟು ಪ್ರತಿಭಟನೆಗೆ ಕುಳಿತುಕೊಂಡರು. ಸ್ಥಳೀಯ ಮುಖಂಡರು, ಪೊಲೀಸ್ ಸಿಬ್ಬಂದಿ ಹಾಗೂ ಗೋರ್ ಸೇನಾ ಸಂಘಟನೆ, ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಮನವೊಲಿಸಿದ ನಂತರ ಹೆದ್ಧಾರಿ ತಡೆ ಹಿಂಪಡೆದು, ಹಳೆ ತಹಶೀಲ್ದಾರ್ ಕಚೇರಿ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಕುಳಿತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.