
ಗುರುಮಠಕಲ್: ತಾಲ್ಲೂಕಿನ ಕಾಕಲವಾರ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ (ಡಿ.12) ಜರುಗಿದ ಸಾಮಾನ್ಯ ಸಭೆಯಲ್ಲಿ ಕಿರಿಯ ಇಂಜಿನಿಯರ್ ಮತ್ತು ಪಿಡಿಒ ವಿರುದ್ಧ ಸದಸ್ಯರು ಹರಿಹಾಯ್ದರು.
ಮಹಾತ್ಮಾ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ವೇತನವನ್ನು ನೀಡುವಲ್ಲಿ ವಿನಾ ಕಾರಣ ಸಮಸ್ಯೆ ಸೃಷ್ಟಿಸಿದ್ದು, ಕೆಲಸವೇ ಮಾಡದ ಕಾಮಗಾರಿಗೆ ಕೂಲಿ ಹಣ ನೀಡಿದ್ದಾರೆಂದು ಜೆಇ ರಾಜರೆಡ್ಡಿ ವಿರುದ್ಧ ಆರೋಪಿಸಲಾಯಿತು.
'ಸಾರ್, ನಾವು ಕೆಲಸ ಮಾಡಿದ ದುಡ್ಡು ಕೊಡೊದಕ್ಕೆ ನಿಮಗ್ಯಾಕೆ ಬ್ಯಾನಿ. ಇನ್ನೂ ಎಷ್ಟು ಸಲ ಕಚೇರಿಗೆ ಅಲಿದಾಡಬೇಕು? ಇಷ್ಟು ದಿನಗಳಾದರೂ ನಮ್ಮ ಮೇಲೆ ಕನಿಷ್ಟ ಕನಿಕರವಿಲ್ಲವೇ? ಕೆಲಸ ಮಾಡದೆ ದುಡ್ಡು ಕೇಳುತ್ತಿಲ್ಲ. ಮಾಡಿದ ಕೆಲಸಕ್ಕೆ ದುಡ್ಡು ನೀಡದಿದ್ದರೆ ನಮ್ಮ ಜೀವನ ನಡೆಸೋದೆಂಗೆ?' ಎಂದು ಪಿಡಿಒ ಅವರಲ್ಲಿ ಗೋಳಿಟ್ಟ ಘಟನೆಗೆ ಸಭೆ ಸಾಕ್ಷಿಯಾಯಿತು.
ಎನ್‌ಎಂಆರರ್ ಮಾಡುವಲ್ಲಿ ಜೆಇ ಅವರು ‘ಕಂಪ್ಲೀಶನ್’ ಆಯ್ಕೆ ಮಾಡುವ ಜತೆಗೆ ‘ಎನ್‌ಎಂಆರ್ ಡಿಲಿಟ್’ ಆಗಿದೆ ಎನ್ನುವ ಸಬೂಬು ನೀಡುವ ಮೂಲಕ ವೇತನ ಬಾರದಂತೆ ತಡೆದಿದ್ದಾರೆ. ‘ಕಮಿಶನ್’ ಬೇಕಿದ್ದರೆ ನೇರವಾಗಿ ಕೇಳಲಿ.
‘ಹಿಂದಿನ ಜೆಇ ಅವಧಿಯದ್ದು ಅವರಿಗೇ ಕೇಳಿ. ನಂಗೆ ಗೊತ್ತಿಲ್ಲ’ ಎನ್ನುತ್ತಾರೆ. ಕಾಮಗಾರಿಯ ಜಿಪಿಎಸ್ ಫೋಟೋ ಮತ್ತು ಸಂಬಂಧಿತ ‘ವರ್ಕ್ ಟ್ರ್ಯಾಕಿಂಗ್’ ಎಲ್ಲವೂ ಆಗುವಾಗ ಸುಮ್ಮನಿದ್ದು, ನಂತರ ವೇತನ ಮಾತ್ರ ಮಾಡಿಲ್ಲ ಎಂದು ಕೂಲಿಕಾರರು ಸಭೆಯಲ್ಲಿ ಅಳಲು ತೋಡಿಕೊಂಡರು.
ಸದಸ್ಯರಾದ ಈರಾರೆಡ್ಡಿ ಮತ್ತು ಬಸಯ್ಯ ಕಲಾಲ್ ಮಾತನಾಡಿ, ‘ನಮ್ಮಲ್ಲಿ ಕರ ವಸೂಲಿ ಮಾಡಿದ್ದು ಗೊತ್ತಾಗುತ್ತಿದೆ. ಆದರೆ, ಬಳಕೆಗೆ ಸಂಬಂಧಿಸಿ ಸದಸ್ಯರಿಗೆ ಒಂದು ನಯಾ ಪೈಸೆ ಲೆಕ್ಕವೂ ಗೊತ್ತಿಲ್ಲ. ಜತೆಗೆ 15ನೇ ಹಣಕಾಸು ಯೋಜನೆಯ ಬಳಕೆಯ ಬಗ್ಗೆ ಕೇಳಿದರೆ ಮಾಹಿತಿ ಕೊಡಲೊಲ್ಲರು. ಜೆಇ ವಿರುದ್ಧ ಎಷ್ಟು ಬಾರಿ ದೂರಿದರೂ ಉಪಯೋಗವಿಲ್ಲ. ಭ್ರಷ್ಟಾಚಾರದ ಅನುಮಾನ ಮೂಡುತ್ತಿದೆ. ಜೆಇ ಬದಲಾವಣೆಗೆ ಶಿಫಾರಸ್ಸು ಮಾಡಿದರೆ ಸದಸ್ಯರು ಸಹಿ ಮಾಡುತ್ತೇವೆ. ನೀವೇಕೆ ಸಮಸ್ಯೆಗೆ ಸ್ಪಂಧಿಸುವುದಿಲ್ಲ ಎಂದು ಪಿಡಿಒ ವಿರುದ್ಧ ಹರಿಹಾಯ್ದರು.
ಪಂಚಾಯಿತಿ ಅಧ್ಯಕ್ಷ ಹಣಮಂತು ಮೀದಿಗಡ್ಡ ಮಾತನಾಡಿ, ಕಳೆದ 5 ವರ್ಷಗಳ ಅವಧಿಯ ಕರ ವಸೂಲಿ ಮತ್ತು ಬಳಕೆ ಕುರಿತು ಬ್ಯಾಂಕ್ ಸ್ಟೇಟ್‌ಮೆಂಟ್ ಹಾಗೂ ಹಣಕಾಸು ಯೋಜನೆಗಳ ಮಾಹಿತಿಯನ್ನು ಸೋಮವಾರ ಸದಸ್ಯರಿಗೆ ನೀಡಲು ಪಿಡಿಒ ಮತ್ತು ಸಿಬ್ಬಂದಿಗೆ ಸೂಚಿಸಿದರು.
ಪಿಡಿಒ ಶಿವರಾಜ ಮಾತನಾಡಿ, ‘ಜೆಇ ಬದಲಾವಣೆಗೆ ಸದಸ್ಯರ ನಿರ್ಧಾರದಂತೆ ಜೆಇ ಅವರನ್ನು ಬದಲಿಸಲು ಮೇಲಾಧಿಕಾರಿಗಳಿಗೆ ಸಭೆಯ ನಡವಳಿಕೆಯ ಮತ್ತು ಶಿಫಾರಸ್ಸಿನೊಡನೆ ಮನವಿ ಸಲ್ಲಿಸುವೆ. ಸೋಮವಾರ(ಡಿ.15) ರಂದು ಸದಸ್ಯರು ಕೇಳಿದ ಲೆಕ್ಕಪತ್ರ ಮತ್ತು ಮಾಹಿತಿ ಒದಗಿಸುವೆ. ಈಗಾಗಲೇ ಸಮಸ್ಯೆಯಾಗಿರುವ ಕುರಿಶೆಡ್ ನಿರ್ಮಾಣದ ಬಿಲ್, ನರೇಗಾ ಕೂಲಿ ಕಾರ್ಮಿಕರ ವೇತನವನ್ನು ಬಿಡುಗಡೆಗೆ ಶೀಘ್ರವೇ ಎನ್‌ಎಂಆರ್ ಸಮಸ್ಯೆ ಪರಿಹರಿಸಿ ಕ್ರಮವಹಿಸುವೆ. ಸ್ವಲ್ಪ ಸಮಯಾವಕಾಶ ನೀಡಿ’ ಎಂದು ಸಭೆಗೆ ಕೋರಿದರು.
ಸದಸ್ಯರು ಸಾಮಾನ್ಯ ಸಭೆಯ ಹಾಜರಿಗೆ(ಬಯೋಮೆಟ್ರಿಕ್) ಸಹಿ ನೀಡದೆ ಮನೆಗೆ ಹಿಂದಿರುಗಿದರು.
ಉಪಾಧ್ಯಕ್ಷೆ ವಸಂತಾ ಕೇಶವರೆಡ್ಡಿ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.