
ವಡಗೇರಾ: ತಾಲ್ಲೂಕಿನ ಸುಕ್ಷೇತ್ರ ಹಯ್ಯಾಳ (ಬಿ) ಗ್ರಾಮದ ಹಯ್ಯಾಳ ಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ನಿಮಿತ್ತ ರವಿವಾರ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಪೂಜಾ ಕಾರ್ಯಾಕ್ರಮಗಳನ್ನು ದೇವಸ್ಥಾನದ ಸಮಿತಿಯವರು ಹಮ್ಮಿಕೊಂಡಿದ್ದರು.
ಸಂಜೆ ಶಿವನಾಮದೊಂದಿಗೆ ವಿಶೇಷ ಪೂಜೆ ದೀಪಾರತಿ, ಶಂಖ ಹಾಗೂ ಡೊಳ್ಳಿನ ವಾದ್ಯದೊಂದಿಗೆ ಅತ್ಯಂತ ಸಂಭ್ರಮದಿಂದ ಶಿವ ರಾತ್ರಿ ಜಾಗರಣೆಯನ್ನು ಭಕ್ತರು ಆಚರಿಸಿದರು.
‘ಶಿವರಾತ್ರಿ ನಿಮಿತ್ತ ಉಪವಾಸ ವೃತ ಮಾಡುವ ಭಕ್ತರಿಗೆ ಪ್ರಸಾದ ರೂಪದಲ್ಲಿ ದೇವಸ್ಥಾನದ ಸಮಿತಿಯವರು ವಿವಿಧ ಬಗೆಯ ತಿನುಸುಗಳಾದ ಭಜಿ, ಕರದಂಟು. ಕಡಲೆ ಗುಗ್ಗರಿ ಮಂಡಾಳು ಒಗ್ಗರಣೆ ತಯಾರಿಸಿ ವಿತರಿಸುವ ವಾಡಿಕೆಯು ಹಿಂದಿನ ಕಾಲದಿಂದ ಬಂದಿದೆ’ ಎಂದು ದೇವಸ್ಥಾನದ ಪೂಜಾರಿಗಳು ತಿಳಿಸಿದರು.
ಗ್ರಾಮದ ಮಹಿಳೆಯರು ಕೂಡಾ ಮನೆಯಲ್ಲಿ ವಿವಿಧ ಬಗೆಯ ಸಿಹಿ ತಿಂಡಿ ಹಣ್ಣು ಹಂಪಲುಗಳನ್ನು ನೈವೈದ್ಯ ರೂಪದಲ್ಲಿ ತಂದು ದೇವಸ್ಥಾನಕ್ಕೆ ನೀಡುವ ಪದ್ದತಿ ಇದೆ. ಹೀಗೆ ತಂದ ಎಲ್ಲಾ ಹಣ್ಣು ಹಂಪಲು, ಸಿಹಿ ತಿಂಡಿಗಳನ್ನು ಒಂದೆಡೆ ಸಂಗ್ರಹಿಸಿ ಹಯ್ಯಾಳ ಲಿಂಗೇಶ್ವರ ದರ್ಶನಕ್ಕೆ ಬಂದ ಎಲ್ಲಾ ಭಕ್ತರಿಗೆ ಪ್ರಸಾದ ರೂಪದಲ್ಲಿ ಸಾಮೂಹಿಕವಾಗಿ ವಿತರಿಸಲಾಗುತ್ತದೆ
ತಾಲ್ಲೂಕಿನ ವ್ಯಾಪ್ತಿ ಅಷ್ಟೆ ಅಲ್ಲ ವಿವಿಧ ಭಾಗಗಳಿಂದ ಸಹ್ರಾರು ಭಕ್ತರು ಶಿವರಾತ್ರಿಯ ಅಂಗವಾಗಿ ದೇವಸ್ಥಾನಕ್ಕೆ ಆಗಮಿಸಿ ಹಯ್ಯಾಳ ಲಿಂಗೇಶ್ವರ ದರ್ಶನವನ್ನು ಪಡೆದು ರಾತ್ರಿಯೆಲ್ಲಾ ಜಾಗರಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.