ಯಾದಗಿರಿ: ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿನ ಕೊಳಚೆ ನೀರು ಸರಾಗವಾಗಿ ಹರಿದು ಹೊರ ಹೋಗದೆ ಆವರಣದಲ್ಲಿರುವ ಚರಂಡಿಗಳಲ್ಲಿ ನಿಲ್ಲುತ್ತಿದೆ. ಇದರಿಂದ ಆಸ್ಪತ್ರೆಯ ಪರಿಸರ ದುರ್ನಾತ ಬೀರುತ್ತಿದ್ದು, ಸೊಳ್ಳೆಗಳ ಆವಾಸ ಸ್ಥಾನವಾಗಿ ಪರಿಣಮಿಸಿದೆ.
ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಾಗಿದ್ದ ದಶಕಗಳ ಹಿಂದಿನ ಕಟ್ಟಡವು ಈಗ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನಾಗಿ ಮಾಡಲಾಗಿದೆ. ಆಸ್ಪತ್ರೆಯ ಆವರಣದಲ್ಲಿ ಚರಂಡಿ ವ್ಯವಸ್ಥೆ ಇದ್ದರೂ ಕೊಳಚೆ ನೀರು ಕಾಂಪೌಂಡ್ ದಾಟಿ ಹೊರಗೆ ಹೋಗುತ್ತಿಲ್ಲ. ಆಸ್ಪತ್ರೆಯ ಹಿಂಬದಿ ಹಾಗೂ ವಸತಿ ಸಮುಚ್ಚಯದ ನಡುವೆ, ಸಿಟಿ ಸ್ಕ್ಯಾನಿಂಗ್ ಹೊರಬದಿಯ ಚರಂಡಿಯಲ್ಲಿ ನಿಂತು ಅಸಹ್ಯಕರವಾದ ಪರಿಸರ ನಿರ್ಮಾಣವಾಗಿದೆ.
ಆಸ್ಪತ್ರೆಯ ಬಲಬದಿಯ ಚರಂಡಿಯ ಚೇಂಬರ್ ತುಂಬಿ ಕೊಳಚೆಯ ನೀರು ಆಸ್ಪತ್ರೆಯ ಗೇಟ್ ವರೆಗೆ ಹರಿಯುತ್ತಿದೆ. ಕ್ಯಾಂಟೀನ್, ವಸತಿ ಸಮುಚ್ಚಯ, ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರಕ್ಕೆ ಹೋಗಿ–ಬರುವವರು ಕೊಳಚೆ ನೀರು ದಾಟಿಕೊಂಡು ಹೋಗುವಂತಹ ಸ್ಥಿತಿ ನಿರ್ಮಾಣ ಆಗಿದೆ.
ಕಟ್ಟಡದ ಹಿಂಬದಿಯಲ್ಲಿನ ಚರಂಡಿಯ ಎಲ್ಲ ಚೇಂಬರ್‌ಗಳಿಂದ ಕೊಚ್ಚೆ ನೀರು ಹೊರಬಂದಿದೆ. ಮೊಳಕಾಲುದ್ದ ಹುಲ್ಲು ಸಹ ಬೆಳೆದು ದನಗಳು ಮೇಯುವ ತಾಣವಾಗಿದೆ. ನೀರು ಮುಂದಕ್ಕೆ ಹರಿದು ಹೋಗಲು ಸಾಧ್ಯವಾಗದೆ ನಿಂತಲ್ಲೇ ನಿಂತು ಗಬ್ಬು ವಾಸವೆ ಆಸ್ಪತ್ರೆಯ ವಾರ್ಡ್‌ಗಳಲ್ಲಿ ದಾಖಲಾದ ರೋಗಿಗಳು ಹಾಗೂ ಅವರ ತಪಾಸಣೆಗೆ ಬರುವ ವೈದ್ಯರಿಗೆ ಹಬ್ಬುತ್ತಿದೆ. ಇದರ ಜತೆಗೆ ಪ್ಲಾಸ್ಟಿಕ್, ಮೆಡಿಕಲ್ ತ್ಯಾಜ್ಯ, ಬಟ್ಟೆಗಳೂ ಬಿದ್ದು ಕಸದ ತೊಟ್ಟಿಯಂತೆ ಆಗಿದೆ.
‘ಆಸ್ಪತ್ರೆ ಮುಂಭಾಗದ ರಸ್ತೆಯ ಬದಿಯ ಚರಂಡಿಗಳಲ್ಲಿ ಕಲ್ಲು, ಮಣ್ಣು ತುಂಬಿದೆ. ಕೆಲವು ಕಡೆಗಳಲ್ಲಿ ಮೋರಿಗೆ ಅಡ್ಡಲಾಗಿ ಸಣ್ಣ– ಸಣ್ಣ ಗಿಡಗಂಟಿಗಳು ಬೆಳೆದಿವೆ. ಆಸ್ಪತ್ರೆಯ ಆವರಣದಲ್ಲಿ ಚರಂಡಿ ಜಾಲ ಇದ್ದರೂ ರಸ್ತೆಯ ಬದಿಯಲ್ಲಿರುವ ಚರಂಡಿಗಳಿಗೆ ಹೋಗಿ ಸೇರುತ್ತಿಲ್ಲ. ಇದರಿಂದಾಗಿ ಮೋರಿಯಲ್ಲಿಯೇ ನಿಲ್ಲುತ್ತಿವೆ. ಮಳೆಯ ನೀರು ಸಹ ಮೋರಿಯಲ್ಲಿ ಹರಿಯುವುದಿಲ್ಲ. ಕೆಲವೆಡೆ ಚರಂಡಿ ಒತ್ತುವರಿಯಾಗಿದೆ. ಹೀಗಾಗಿ, ಆಸ್ಪತ್ರೆಯ ಚರಂಡಿ ನೀರಿಗೆ ಮಾರ್ಗವೇ ಇಲ್ಲದಂತೆ ಆಗಿದೆ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ವೈದ್ಯಾಧಿಕಾರಿ.
‘50 ಬೆಡ್‌ಗಳ ಆಸ್ಪತ್ರೆ ಆಗಿದ್ದರೂ ನಿತ್ಯ ಸಾವಿರಾರು ಜನರು ಭೇಟಿ ಕೊಡುತ್ತಾರೆ. ರೋಗಿಗಳು ಜತೆಗೆ ಅವರ ಬಂಧುಗಳು ಶೌಚಾಲಯ ಬಳಸುವುದರಿಂದ ಹೆಚ್ಚಿನ ಪ್ರಮಾಣ ಕೊಳಚೆ ಉತ್ಪತ್ತಿ ಆಗುತ್ತದೆ. ಚರಂಡಿ ನೀರು ಹೊರ ಹೋಗಲು ಅನುವು ಮಾಡಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರಗಳನ್ನು ಬರೆದು ಮನವಿ ಮಾಡಲಾಗಿದೆ. ಇದುವರೆಗೂ ಸ್ಪಂದನೆ ಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ‘ಯಿಮ್ಸ್’ ನಿರ್ದೇಶಕರ ಗಮನಕ್ಕೂ ತಂದಿದ್ದೇನೆ. ಮತ್ತೊಮ್ಮೆ ಭೇಟಿ ಕೊಟ್ಟು ಕ್ರಮ ತೆಗೆದುಕೊಳ್ಳಲಾಗುವುದು..ಚನ್ನಾರೆಡ್ಡಿ ಪಾಟೀಲ ತುನ್ನೂರು ಶಾಸಕ
ಆಸ್ಪತ್ರೆಯವರು ಒಳಗಡೆಯಿಂದ ಹೊರಗೆ ಚರಂಡಿ ಜಾಲ ಸಂಪರ್ಕ ಕಲ್ಪಿಸಿದರೆ ಹೊರಗಡೆಯದ್ದನ್ನು ನಾವು ಮಾಡುತ್ತೇವೆ. ನೈರ್ಮಲ್ಯ ಅಧಿಕಾರಿಯನ್ನು ಕಳುಹಿಸಿ ಎರಡ್ಮೂರು ದಿನಗಳಲ್ಲಿ ಇತ್ಯರ್ಥ ಮಾಡಲಾಗುವುದು.ಲಲತಾ ಅನಾಪುರ ನಗರಸಭೆ ಅಧ್ಯಕ್ಷೆ
ಆಸ್ಪತ್ರೆ ಕಟ್ಟಡದ ನವೀಕರಣದ ಜೊತೆಯಲ್ಲಿ ಆವರಣದಲ್ಲಿನ ಚರಂಡಿ ಜಾಲವನ್ನೂ ನಿರ್ಮಾಣ ಮಾಡಲಾಗುತ್ತಿದೆ. ಅರ್ಧದಷ್ಟು ಕಾಮಗಾರಿಯೂ ಮುಗಿದಿದ್ದು ಚರಂಡಿ ನೀರು ಹೊರಗಡೆ ಸರಿಯಾಗಿ ಹೋಗುತ್ತಿಲ್ಲ.ಡಾ. ಸಂದೀಪ್ ಹರಸಂಗಿ ‘ಯಿಮ್ಸ್’ ಮುಖ್ಯಸ್ಥ
ನಗರದಲ್ಲಿನ ಚರಂಡಿಯಲ್ಲಿನ ಹೂಳು ತೆಗೆಯಲು ₹ 35 ಲಕ್ಷ ಮೀಸಲಿಟ್ಟಿದ್ದು ಶೀಘ್ರವೇ ಟೆಂಡರ್ ಕರೆಯಲಾಗುವುದು. ಆ ವೇಳೆ ಆಸ್ಪತ್ರೆ ಮುಂಭಾಗದ ಚರಂಡಿಯನ್ನೂ ಸ್ವಚ್ಛ ಮಾಡಲಾಗುವುದು.ಉಮೇಶ ಚವ್ಹಾಣ್ ನಗರಸಭೆ ಪೌರಾಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.