ADVERTISEMENT

ವೈದ್ಯರ ಮೇಲೆ ಹಲ್ಲೆ ಖಂಡಿಸಿ ಐಎಂಎ ಪ್ರತಿಭಟನೆ

ಕೋವಿಡ್ ಸೋಂಕಿನ ವಿರುದ್ಧ ಐಎಂಎ ಮುಂಚೂಣಿಯಲ್ಲಿದೆ : ಡಾ.ವೀರೇಶ್ ಜಾಕಾ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 17:29 IST
Last Updated 18 ಜೂನ್ 2021, 17:29 IST
ಭಾರತೀಯ ವೈದ್ಯಕೀಯ ಸಂಘದಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು
ಭಾರತೀಯ ವೈದ್ಯಕೀಯ ಸಂಘದಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು   

ಯಾದಗಿರಿ: ಕೋವಿಡ್ ಸಂದರ್ಭದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ಅಲ್ಲಲ್ಲಿ ಹಲ್ಲೆ ನಡೆಯುತ್ತಿರುವುದನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಶುಕ್ರವಾರ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿ, ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ. ವೀರೇಶ್ ಜಾಕಾ ಮಾತನಾಡಿ, ಐಎಂಎ ಭಾರತದಲ್ಲಿ ಆಧುನಿಕ ವೈದ್ಯಕೀಯ ವೃತ್ತಿಪರರ ಸಂಘವಾಗಿದೆ. ಸಾರ್ವಜನಿಕ ಆರೋಗ್ಯ, ವೈದ್ಯಕೀಯ ಕ್ಷೇತ್ರದ ಸುಧಾರಣೆ, ವೈದ್ಯಕೀಯ ವೃತ್ತಿ ಗೌರವ ಮತ್ತು ಘನತೆ ನಿರ್ವಹಣೆಗಾಗಿ ತನ್ನ ಉದ್ದೇಶಗಳನ್ನು ಪೂರೈಸಲು ನಿರಂತವಾಗಿ ಶ್ರಮಿಸುತ್ತಿದೆ. ಈ ಕೋವಿಡ್ ಸಂದರ್ಭದಲ್ಲಿ ಐಎಂಎ ಕೊರೊನಾ ಸೋಂಕಿನ ವಿರುದ್ಧದ ಯುದ್ಧದಲ್ಲಿ ಮುಂಚೂಣಿಯಲ್ಲಿ ಹೋರಾಡುತ್ತಿದೆ. ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿರುವ ವೈದ್ಯರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿರುವುದು ಖಂಡನೀಯ ಎಂದರು.

ಕೋವಿಡ್ ಸೋಂಕಿನ ಹಿಡಿತದಿಂದ ಲಕ್ಷಾಂತರ ಜನರನ್ನು ರಕ್ಷಿಸುವಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಪಾತ್ರ ಹಿರಿದಾಗಿದೆ. ದೇಶದಲ್ಲಿ ಸೋಂಕಿನ ದಾಳಿಗೆ 1400ಕ್ಕೂ ಹೆಚ್ಚು ವೈದ್ಯರು ಹುತಾತ್ಮರಾಗಿದ್ದಾರೆ. ಇದಾವುದನ್ನು ಲೆಕ್ಕಿಸದೇ ಜನರ ಪ್ರಾಣ ರಕ್ಷಣೆಯೇ ತಮ್ಮ ಮೊದಲ ಆದ್ಯತೆಯನ್ನಾಗಿ ಮಾಡಿಕೊಂಡು ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂಥ ವೈದ್ಯ ಸಮೂಹಕ್ಕೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.

ADVERTISEMENT

ಐಎಂಎ ಅಧ್ಯಕ್ಷ ಸಿ.ಎಂ.ಪಾಟೀಲ ಮಾತನಾಡಿ, ಐಎಂಎ ಆಧುನಿಕ ಆರೋಗ್ಯ ರಕ್ಷಣಾ ವೃತ್ತಿಗೆ ಸೂಕ್ತವಾದ ವಾತಾವರಣ ಒದಗಿಸಲು, ಅನುಕೂಲಕರ ಕ್ರಮ ಪಡೆಯಲು ಐಎಂಎ ರಾಷ್ಟ್ರೀಯ ಪ್ರತಿಭಟನಾ ದಿನವಾಗಿ ಆಚರಿಸುತ್ತಿದ್ದೇವೆ. ಇದು ಹೆಚ್ಚು ಸಹಾನುಭೂತಿ ಮತ್ತು ಸಮರ್ಪಣೆಯೊಂದಿಗೆ ಮತ್ತು ಮಾನಸಿಕ ಮತ್ತು ದೈಹಿಕ ಕಿರುಕುಳದ ಯಾವುದೇ ಭಯವಿಲ್ಲದೆ ಕೆಲಸ ಮಾಡುವ ವಿಶ್ವಾಸವನ್ನು ನಮ್ಮಲ್ಲಿ ತುಂಬಬೇಕು ಎಂದು ಪ್ರಧಾನಿಗಳಲ್ಲಿ ದೇಶದಾದ್ಯಂತ ಮನವಿ ಮಾಡಲಾಗುತ್ತಿದೆ ಎಂದರು.

ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ವಿನಾಕಾರಣ ಹಲ್ಲೆ ಮಾಡುವವರಿಗೆ ಕಾನೂನು ಪ್ರಕಾರ ಘೋರ ಶಿಕ್ಷೆ ವಿಧಿಸಬೇಕು. ಕೋವಿಡ್‌–19 ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಮಡಿದ ವೈದ್ಯರನ್ನು ಕೋವಿಡ್ ಹುತಾತ್ಮರೆಂದು ಗುರುತಿಸಿ, ಅವರ ಕುಟುಂಬಕ್ಕೆ ಮತ್ತಷ್ಟು ಸಹಾನುಭೂತಿ ಬೆಂಬಲ ನೀಡಬೇಕು ಎಂದರು.

ಸಾಂಕ್ರಾಮಿಕ ರೋಗದಿಂದ ಹೊರಬರಲು ಲಸಿಕೆ ಒಂದೇ ಏಕೈಕ ಆಯುಧವಾಗಿದ್ದು, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆಯನ್ನು ನೀಡುವ ಕಾರ್ಯಕ್ರಮಕ್ಕೆ ಮತ್ತಷ್ಟು ಉತ್ತೇಜನವನ್ನು ನೀಡಬೇಕು. ಕೋವಿಡ್ ನಂತರದ ತೊಂದರೆಗಳು ಇತ್ತೀಚಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಆ ತೊಂದರೆಗಳು ನೀಗಲು ಬಹುಮುಖಿ ಚಿಕಿತ್ಸಾ ಮಾರ್ಗಸೂಚಿಗಳನ್ನು ಹೊರತಲು ಪ್ರತ್ಯೇಕ ಸಂಶೋಧನಾ ಕೋಶ ಸ್ಥಾಪಿಸಬೇಕು ಎಂದು ಒತ್ತಾಯಿಸುವ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗಳಿಗೆ ಸಲ್ಲಿಸಲಾಯಿತು.

ಈ ವೇಳೆ ಹಿರಿಯ ವೈದ್ಯ ಡಾ. ವೀರಬಸವಂತರೆಡ್ಡಿ ಮುದ್ನಾಳ, ಡಾ. ಸುಭಾಷ್ ಕರಣಿಗಿ, ಡಾ. ಸುರೇಶರಡ್ಡಿ, ಡಾ. ವಿಜಯಕುಮಾರ, ಡಾ. ಪ್ರಶಾಂತ್ ಬಾಸುತ್ಕರ್, ಡಾ. ಅಪೂರ್ವ, ಡಾ. ಸುನೀಲ್, ಡಾ.ಜಿ.ಡಿ.ಹುನಗುಂಟಿ, ಡಾ. ರಾಹುಲ್ ನಾಯ್ಕೋಡಿ, ಡಾ. ಪ್ರದೀಪ್, ಡಾ. ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.