ADVERTISEMENT

ಯಾದಗಿರಿ: ‘ಆದಾಯ ತೆರಿಗೆ ಕಾಯ್ದೆ ಸಿಎಗಳಿಗೆ ಮಾರಕ’

ಜಿಲ್ಲಾ ವಾಣಿಜ್ಯ, ಕೈಗಾರಿಕಾ ಸಂಘ, ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಸಭೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 4:26 IST
Last Updated 27 ಜುಲೈ 2025, 4:26 IST
ಯಾದಗಿರಿ ನಗರದ ಎಸ್‌ಡಿಎನ್ ಹೋಟೆಲ್ ಸಭಾಂಗಣದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಯಾದಗಿರಿ ಚಾರ್ಟೆಡ್ ಅಕೌಂಟ್ ಅಸೋಸಿಯೇಷನ್ ಜಂಟಿಯಾಗಿ ಆಯೋಜಿಸಿದ್ದ ನೂತನ ಆದಾಯ ತೆರಿಗೆ ಕಾಯ್ದೆ 2025ರ ಚರ್ಚೆ ಕಾರ್ಯಕ್ರಮವನ್ನು ಸಂಸದ ಜಿ.ಕುಮಾರನಾಯಕ ಉದ್ಘಾಟಿಸಿದರು 
ಯಾದಗಿರಿ ನಗರದ ಎಸ್‌ಡಿಎನ್ ಹೋಟೆಲ್ ಸಭಾಂಗಣದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಯಾದಗಿರಿ ಚಾರ್ಟೆಡ್ ಅಕೌಂಟ್ ಅಸೋಸಿಯೇಷನ್ ಜಂಟಿಯಾಗಿ ಆಯೋಜಿಸಿದ್ದ ನೂತನ ಆದಾಯ ತೆರಿಗೆ ಕಾಯ್ದೆ 2025ರ ಚರ್ಚೆ ಕಾರ್ಯಕ್ರಮವನ್ನು ಸಂಸದ ಜಿ.ಕುಮಾರನಾಯಕ ಉದ್ಘಾಟಿಸಿದರು    

ಯಾದಗಿರಿ: ‘ನೂತನ ಆದಾಯ ತೆರಿಗೆ ಕಾಯ್ದೆ ಚಾರ್ಟರ್ಡ್ ಅಕೌಂಟೆಂಟರಿಗೆ ಮಾರಕ’ ಎಂದು ರಾಯಚೂರ ಸಂಸದ ಜಿ.ಕುಮಾರ ನಾಯಕ ಹೇಳಿದರು.‌

ನಗರದ ಎಸ್‌ಡಿಎನ್ ಹೋಟೆಲ್ ಸಭಾಂಗಣದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಮತ್ತು ಯಾದಗಿರಿ ಚಾರ್ಟೆಡ್ ಅಕೌಂಟ್ ಅಸೋಸಿಯೇಷನ್ ಜಂಟಿಯಾಗಿ ಆಯೋಜಿಸಿದ್ದ ನೂತನ ಆದಾಯ ತೆರಿಗೆ ಕಾಯ್ದೆ 2025ರ ಚರ್ಚೆಯಲ್ಲಿ ಅವರು ಮಾತನಾಡಿದರು.

‘ಆದಾಯ ತೆರಿಗೆಯಂತಹ  ಮಹತ್ವದ ಕಾಯ್ದೆ ಜಾರಿ ತರುವ ಪೂರ್ವ ಈ ಬಗ್ಗೆ ನುರಿತ ತಜ್ಞರ ಮತ್ತು ಈ ಕ್ಷೇತ್ರದಲ್ಲಿ  ಅನುಭವಿಗಳ ಮಧ್ಯೆ ಚರ್ಚೆಗೆ ಕೇಂದ್ರ ಸರ್ಕಾರ ಅವಕಾಶ ನೀಡುವ ಅಗತ್ಯವಿತ್ತು’ ಎಂದು ಹೇಳಿದರು.

ADVERTISEMENT

‘ಕೇಂದ್ರ ಸರ್ಕಾರ ಪ್ರಸ್ತುತ ಅಸ್ತಿತ್ವದಲ್ಲಿರುವ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿಯ ಮೂಲಕ ನೂತನ ಆದಾಯ ತೆರಿಗೆ ಕಾಯ್ದೆ-2025 ಜಾರಿ ಸಿದ್ಧತೆ ನಡೆಸಿದೆ. ಕೇಂದ್ರ ಜಾರಿಗೊಳಿಸಲು ಉದ್ದೇಶಿತ ನೂತನ ಆದಾಯ ತೆರಿಗೆ ಕಾಯ್ದೆ ಚಾರ್ಟರ್ಡ್ ಅಕೌಂಟೆಂಟ್ ಸೇವೆಗೆ ಮಾರಕವಾಗಿದೆ ಎಂದರು. ಡಿಜಿಟಲ್ ಡಿವೈಸ್ ತಂತ್ರಜ್ಞಾನ ವ್ಯಾಪಾರಿಗಳ ಖಾಸಗಿ ಜೀವನಕ್ಕೆ ಸಂಚಕಾರವಾಗಿದೆ. ಇಂತಹ ಮಹತ್ವದ ಕಾಯ್ದೆ ಜಾರಿ ಪೂರ್ವ ಇದರ ಎಲ್ಲಾ  ಅಂಶಗಳ ಬಗ್ಗೆ ಚರ್ಚೆ ಅಗತ್ಯವಾಗಿತ್ತು. ಈ ಹಿಂದೆ ವಿರೋಧ ಪಕ್ಷಗಳ ಒತ್ತಾಯದಿಂದ ವಕ್ಫ್  ತಿದ್ದುಪಡಿ ಕಾಯ್ದೆ ಚರ್ಚೆಗೆ ಅವಕಾಶ ಮಾಡಿಕೊಡಲಾಗಿತ್ತು’ ಎಂದರು.

‘ನೂತನ ಆದಾಯ ತೆರಿಗೆ ಕಾಯ್ದೆ ಸಾಧಕ-ಬಾಧಕಗಳ ಬಗ್ಗೆ ಚಾರ್ಟರ್ಡ್ ಅಕೌಂಟೆಂಟ್ ಕೂಲಂಕಷ ಅಧ್ಯಯನ ಮಾಡಿ ಕೇಂದ್ರ ಸರ್ಕಾರದ ಗಮನಕ್ಕೆ ತರುವ ಅಂಶಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರೆ ಲೋಕಸಭೆ ಅಧಿವೇಶನದಲ್ಲಿ ಈ ಬಗ್ಗೆ ಸರ್ಕಾರದ ಮುಂದೆ ಸವಾಲಿನ ಪ್ರಶ್ನೆ ಮಂಡಿಸಿ ವಿವರಣೆ ಪಡೆಯಲು ಸಾಧ್ಯವಾಗುತ್ತದೆ’ ಎಂದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಅನೇಕ ಚಾರ್ಟರ್ಡ್ ಅಕೌಂಟೆಂಟ್‌ಗಳು, ‘ಡಿಜಿಟಲ್ ತಂತ್ರಜ್ಞಾನ ವೈಯಕ್ತಿಕ ಜೀವನಕ್ಕೆ ಬಾಧಕವಾಗದಂತೆ ಗಮನಿಸಬೇಕು ಮತ್ತು ಚಾರ್ಟರ್ಡ್ ಅಕೌಂಟೆಂಟ್ ವೃತ್ತಿ ಜೀವನದ ಮೇಲೆ ಯಾವುದೇ ಪ್ರಹಾರ ಮಾಡದಂತೆ ತಿದ್ದುಪಡಿ ಪರಿಷ್ಕರಿಸಬೇಕು’ ಎಂದು ಧ್ವನಿ ಎತ್ತಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಅನೇಕರು ಮಹತ್ವದ ಸಲಹೆಗಳನ್ನು ನೀಡಿದರು. ಕೇಂದ್ರ ಸರ್ಕಾರದ ಮುಂದೆ ಮಂಡಿಸುವ 5 ಪ್ರಶ್ನೆಗಳ ಬಗ್ಗೆ ಈ ಸಭೆಯಲ್ಲಿ ಸುದೀರ್ಘ ಚರ್ಚೆ ಮತ್ತು ಅದಕ್ಕೆ ಪೂರಕ ಮಾಹಿತಿ ಒದಗಿಸಲಾಯಿತು.

ಈ ಕಾರ್ಯಕ್ರಮದ ವೇದಿಕೆಯಲ್ಲಿ ಅಧ್ಯಕ್ಷ ದಿನೇಶ್ ಕುಮಾರ ಜೈನ್, ವೆಂಕಟ ಕೃಷ್ಣ, ವಿವೇಕ್ ಎಂ ಮತ್ತು ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಅಕ್ಕಿ ಹಾಗೂ ಯಾದಗಿರಿ ಜಿಲ್ಲೆಯ ವೈಡಿಸಿಸಿಐ ಸದಸ್ಯರು, ಚಾರ್ಟೆಡ್ ಅಕೌಂಟೆಂಟ್ಸ್‌ಗಳು, ವಾಣಿಜ್ಯ ವ್ಯಾಪಾರ ಮಳಿಗೆಯ ವ್ಯಾಪಾರಸ್ಥರು, ಸಾರ್ವಜನಿಕರು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.