ಶಹಾಪುರ: ಬೇಸಿಗೆಯಲ್ಲಿ ವಿದ್ಯಾರ್ಥಿಗಳಿಗೆ ರಜೆ ಇರುವ ಕಾರಣ ಯಾವುದೇ ಸಂಸ್ಥೆಯವರು ಬೇಸಿಗೆಯಲ್ಲಿ ಕೋಚಿಂಗ್ ಹಾಗೂ ತರಗತಿ ನಡೆಸದಂತೆ ಬಿಇಒ ವೈ.ಎಸ್.ಹರಗಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಗರದ ಪೇಟ ಶಹಾಪುರ ಶಾಲೆಯಲ್ಲಿ ಶನಿವಾರ ಖಾಸಗಿ ಶಾಲೆಗಳ ಒಕ್ಕೂಟದ ಸದಸ್ಯರ ಸಭೆಯಲ್ಲಿ ಮಾತನಾಡಿ ಅವರು, ಈಗಾಗಲೇ ಆಯುಕ್ತರ ಆದೇಶದಂತೆ ವಸತಿ ಸಹಿತ ಹಾಗೂ ವಸತಿ ರಹಿತವಾಗಿ ತರಗತಿ ನಡೆಸದಂತೆ ಸೂಚಿಸಿದ್ದಾರೆ.
‘ತಾಲ್ಲೂಕಿನ ವ್ಯಾಪ್ತಿಯಲ್ಲಿ ಕೋಚಿಂಗ್ ನಡೆಸುವುದು ಕಂಡು ಬಂದರೆ ಮೇಲಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ ಶಿಫಾರಸು ಮಾಡಲಾಗುವುದು. ಅಲ್ಲದೇ ಈ ಬಗ್ಗೆ ವರದಿ ಸಲ್ಲಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡವನ್ನು ರಚಿಸಲಾಗುವುದು’ ಎಂದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಆರ್.ಚೆನ್ನಬಸು ವನದುರ್ಗ ಸಭೆಯಲ್ಲಿ ಮಾತನಾಡಿ, ‘ಶಿಕ್ಷಣ ಇಲಾಖೆಯ ಮಾರ್ಗಸೂಚಿ, ನಿಯಮಗಳು ಹಾಗೂ ಷರತ್ತುಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಬದ್ಧವಾಗಿವೆ. ಅನಧಿಕೃತ ಕೋಚಿಂಗ್ ತರಬೇತಿ ಕೇಂದ್ರಗಳ ಬಗ್ಗೆ ಪಾಲಕರು ಜಾಗೃತಿ ವಹಿಸಬೇಕು’ ಎಂದರು.
ಬಿ.ಆರ್.ಸಿ ರೇಣುಕಾ ಪಾಟೀಲ, ಸಿದ್ರಾಮಪ್ಪ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.
ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಇದ್ದು ಕೋಚಿಂಗ್ ನೆಪದಲ್ಲಿ ಬೇರೆ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಅಂತಹ ಶಾಲೆಗಳ ಮುಖ್ಯಸ್ಥರರ ವಿರುದ್ಧ ಕ್ರಮ ಜರುಗಿಸಲಾಗುವುದುವೈ.ಎಸ್.ಹರಗಿ ಬಿಇಒ ಶಹಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.