
ಯಾದಗಿರಿ: ‘ಪುಸ್ತಕಗಳಿಗೆ ಮಾನ್ಯತೆ ನೀಡಿದರೆ, ಮನೆ ಮತ್ತು ಮನಗಳ ಸಂಸ್ಕಾರವನ್ನು ಬದಲಿಸುತ್ತವೆ’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜರುಗುದ ಮನೆಗೊಂದು ಗ್ರಂಥಾಲಯ ಅಭಿಯಾನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪುಸ್ತಕಗಳು ಅರಿವಿನ ಸಂಕೇತ ಮತ್ತು ನಮ್ಮ ಜ್ಞಾನದ ಬುನಾದಿಯಾಗಿವೆ. ಮನೆಗೊಂದು ಗ್ರಂಥಾಲಯ ಅಭಿಯಾನವು ಯುವ ಸಮುದಾಯಕ್ಕೆ ತಲುಪಿಸಬೇಕು’ ಎಂದು ಹೇಳಿದರು.
‘2025ರ ಜನವರಿಯಲ್ಲಿ ಮುಖ್ಯಮಂತ್ರಿಗಳ ಮನೆಯಲ್ಲಿ ಲಕ್ಷ ಗ್ರಂಥಾಲಯಗಳ ಯೋಜನೆಯ ಮೊದಲ ಗ್ರಂಥಾಲಯ ಸ್ಥಾಪನೆಗೊಂಡಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಸಚಿವರು, ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ, ಚಲನಚಿತ್ರ, ಕಿರುತೆರೆಯವ ಮನೆಗಳಲ್ಲೂ ಅಸ್ತಿತ್ವಕ್ಕೆ ಬರಲಿದೆ’ ಎಂದು ತಿಳಿಸಿದರು.
‘ಸಾಮಾನ್ಯರಿಂದ ಪುಸ್ತಕಗಳನ್ನು ತರಿಸಿ, ಅವರಿಷ್ಟದ ಸಾಹಿತಿಗಳಿಂದ ಗ್ರಂಥಾಲಯ ಉದ್ಘಾಟಿಸಿ, ಪ್ರಾಧಿಕಾರದ ಗ್ರಂಥಾಲಯ ಅನುಷ್ಠಾನ ಪತ್ರವನ್ನು ನೀಡಲಾಗುವುದು’ ಎಂದು ವಿವರಿಸಿದರು.
‘ಅಭಿಯಾನ ಉತ್ತೇಜಿಸಲು ನಂಜನಗೂಡು ತಿರುಮಲಾಂಬ, ಹಾ.ಮಾ.ನಾಯಕ, ಪಿ.ಆರ್.ತಿಪ್ಪೇಸ್ವಾಮಿ ಹಾಗೂ ಗಳಗನಾಥರ ಹೆಸರಲ್ಲಿ ನಾಲ್ಕೂ ಕಂದಾಯ ವಿಭಾಗಗಳಲ್ಲಿ ಪ್ರಶಸ್ತಿ ಸ್ಥಾಪಿಸಲು ಚಿಂತಿಸಲಾಗಿದೆ’ ಎಂದು ಹೇಳಿದರು.
‘ಪ್ರಾಧಿಕಾರವು ಜಿಲ್ಲಾ ಮಟ್ಟದಲ್ಲಿ ಗ್ರಂಥಾಲಯ ಜಾಗೃತ ಸಮಿತಿ ನೇಮಿಸುತ್ತದೆ. ಸಮಿತಿಗಳು ‘ಮನೆಗೊಂದು ಗ್ರಂಥಾಲಯದ’ ಸಂಪರ್ಕದಲ್ಲಿದ್ದು, ಹೊಸ ಗ್ರಂಥಾಲಯಗಳ ಸ್ಥಾಪನೆ, ಹೊಸ ಪುಸ್ತಕಗಳ ಮಾಹಿತಿ, ಬಂದ ಗಣ್ಯರಿಗೆ ಗ್ರಂಥಾಲಯದ ಮನೆಗಳ ಭೇಟಿಯ ವ್ಯವಸ್ಥೆ, ಅಲ್ಲಿನ ಸಾಹಿತಿ, ಕಲಾವಿದರಿಗೆ ಪ್ರಶಸ್ತಿ ಬಂದರೆ, ಹೊಸ ಪುಸ್ತಕ ಪ್ರಕಟಿಸಿದರೆ ಸಭೆಗಳನ್ನು ಜರುಗಿಸುವ ಕಾರ್ಯ ಮಾಡಲಿವೆ’ ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎ.ಡಿ ಉತ್ತರಾದೇವಿ ಮಠಪತಿ, ಶಹಾಪುರ ತಾಲ್ಲೂಕು ಕಸಾಪ ಅಧ್ಯಕ್ಷ ರವಿಂದ್ರನಾಥ ಹೊಸಮನಿ ಹಾಗೂ ಪುಸ್ತಕ ಪ್ರಾಧಿಕಾರದ ಶ್ರೀನಿವಾಸ ಕರಿಯಪ್ಪನವರ, ಜಾಗೃತಿ ವೇದಿಕೆ ಜಿಲ್ಲಾ ಸಂಚಾಲಕ ಪ್ರಕಾಶ ಅಂಗಡಿ ಕನ್ನಳ್ಳಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಜಾಗೃತ ಸಮಿತಿಗೆ ನೇಮಕ: ಪ್ರಕಾಶ ಅಂಗಡಿ ಕನ್ನೆಳ್ಳಿ(ಸಂಚಾಲಕ), ಭೀಮರಾಯ ಲಿಂಗೇರಿ, ರವೀಂದ್ರ ಹೊಸಮನಿ, ಭಾಗ್ಯ ದೋರೆ, ನೀಲಮ್ಮ ಮಲ್ಲೆ, ದೇವಿಂದ್ರ ಹುಲ್ಕಲ್, ಸಂತೋಷ ಸತ್ಯಂಪೇಟ, ಕನಕಪ್ಪ ವಾಗಣಗೇರಿ, ನೀಲಕಂಠ ಹೊನ್ಕಲ್, ಮಲ್ಲಿಕಾರ್ಜುನ ಕೊಠಗೀರಿ(ಸದಸ್ಯರು)ರನ್ನು ನೇಮಕ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.