
ಮೀಸಲಾತಿ (ಸಾಂಕೇತಿಕ ಚಿತ್ರ)
ಯಾದಗಿರಿ: ‘ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಫೆಬ್ರುವರಿ 23ರಂದು ನಗರದಲ್ಲಿ ರಾಜ್ಯಮಟ್ಟದ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗುವುದು’ ಎಂದು ಕರ್ನಾಟಕ ರಾಜ್ಯ ಮಟ್ಟದ ಕುರುಬರ ಸಂಘದ ರಾಜ್ಯ ಗೌರವಾಧ್ಯಕ್ಷ ಸಿದ್ದಣ್ಣ ತೇಜಿ ತಿಳಿಸಿದರು.
‘ಸಮಾವೇಶದಲ್ಲಿ ವಿವಿಧ ಜಿಲ್ಲೆಗಳ ಮುಖಂಡರು, ಹೋರಾಟಗಾರರು ಪಾಲ್ಗೊಳ್ಳುವರು. ಎಸ್‌ಟಿ ಮೀಸಲಾತಿಗಾಗಿ ಹಳ್ಳಿಯಿಂದ ದೆಹಲಿವರೆಗಿನ ಹೋರಾಟದ ಮೊದಲ ಭಾಗವಿದು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ದೇವರಾಜ್ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಮಂಡಲ ಆಯೋಗದ ವರದಿ ಜಾರಿ ವೇಳೆ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿದ್ದ ಕುರುಬ ಸಮಾಜವನ್ನು 24ನೇ ಹಿಂದುಳಿದ ವರ್ಗಕ್ಕೆ ಸೇರಿಸಿದ್ದರಿಂದ ಅನ್ಯಾಯವಾಗಿದೆ. ಅದನ್ನು ಸರಿಪಡಿಸುವ ಕೆಲಸವನ್ನು ಮಾಡಬೇಕಿದೆ. ಎಲ್.ಜಿ. ಹಾವನೂರ್ ಆಯೋಗದ ವರದಿ ಸಂದರ್ಭದಲ್ಲೂ ಕೇಂದ್ರ ಸರ್ಕಾರವು ಅಧಿಕೃತ ಆದೇಶವಿಲ್ಲದೆ ಕುರುಬ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸೇರಿಸಿತ್ತು. ಅದನ್ನೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಿದ್ದುಪಡಿ ಮಾಡಬೇಕು’ ಎಂದರು.
‘ಮೈಸೂರು ಕುಲಶಾಸ್ತ್ರೀಯ ಅಧ್ಯಯನ ಸಂಶೋಧನಾ ಸಂಸ್ಥೆಯ ವರದಿಯನ್ನು ಕೇಂದ್ರ ಸರ್ಕಾರ ತಕ್ಷಣ ಅಂಗೀಕರಿಸಬೇಕು. ಅದರ ಆಧಾರದಲ್ಲಿ ಕುರುಬ ಸಮಾಜಕ್ಕೆ ಎಸ್‌ಟಿ ಸ್ಥಾನಮಾನ ನೀಡಬೇಕು. ಈಚೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಗೊಂಡ ಪರಿಶಿಷ್ಟ ಪಂಗಡ ಸಂಬಂಧಿತ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು’ ಎಂದು ಕೋರಿದರು.
‘ಹಳೆಯ ಮೈಸೂರು ಭಾಗದಲ್ಲಿ ಕಾಡುಕುರುಬ, ಜೇನು ಕುರುಬರಿಗೆ ನೀಡುತ್ತಿರುವ ಪರಿಶಿಷ್ಟ ಪಂಗಡ ಪ್ರಮಾಣಪತ್ರ ಮಾದರಿಯಂತೆ ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಗೊಂಡ, ರಾಜಗೊಂಡ ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡಬೇಕು. ಈ ಬಗ್ಗೆ ರಾಜ್ಯದಾದ್ಯಂತ ಆದೇಶ ಜಾರಿಗೊಳಿಸಬೇಕು’ ಎಂದರು.
ಮುಂದಿನ ಲೋಕಸಭಾ ಅಧಿವೇಶನದ ಒಳಗೆ ನಮ್ಮ ಸಮಾಜದ ಬೇಡಿಕೆ ಈಡೇರದಿದ್ದಲ್ಲಿ ದೆಹಲಿಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಪರಸಣ್ಣ ಗೌಡರು, ಜಿಲ್ಲಾಧ್ಯಕ್ಷ ಶಿವಕುಮಾರ್ ಮುನಗಲ್, ಪ್ರಮುಖರಾದ ಕರಿಯಪ್ಪ ಕರಿಗಾರ್, ರಾಘವಾಂಕ ಪಾಟೀಲ, ಭೀಮು ಪೂಜಾರಿ, ನಿಜಲಿಂಗಪ್ಪ ಸಂಭ್ರ, ರವೀಂದ್ರಕುಮಾರ್ ಕಡೇಚೂರು, ಸಿದ್ದು ಪೂಜಾರಿ, ಸಿದ್ಧನಗೌಡ ಹುಣಸಗಿ, ಗಿರೀಶ ಕವಡೆ, ರೇವಣಸಿದ್ದಪ್ಪ, ದೇವಿಂದ್ರಪ್ಪ ಮಾಡಿಗಿ, ಮಾಳಪ್ಪ ಪೂಜಾರಿ, ತಾಯಪ್ಪ ಕರಣಿಗಿ ಸೇರಿ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.