
ಯಾದಗಿರಿಯ ಮೈಲಾಪುರದ ಮೈಲಾರಲಿಂಗೇಶ್ವರ ದೇವಸ್ಥಾನದ ಬೆಟ್ಟ
ಯಾದಗಿರಿ: ರಸ್ತೆಯ ಮೇಲೆಯೇ ಹರಿಯುವ ಚರಂಡಿ ನೀರು, ಪುಣ್ಯಸ್ನಾನದ ಹೊನ್ನಕೆರೆಯ ಸುತ್ತಲೂ ಸ್ವಚ್ಛತೆ ಮರಿಚೀಕೆ ಮತ್ತು ಬೆಳೆದು ನಿಂತ ಗಿಡಗಂಟಿಗಳು, ದೂಳಿನ ರಸ್ತೆಗಳು, ಅಸ್ಥಿಪಂಜರದಂತೆ ಅರ್ಧಕ್ಕೆ ನಿಂತ ಕಟ್ಟಡಗಳು, ತಿಪ್ಪೆ ಗುಂಡಿಯಂತಾದ ಕಲ್ಯಾಣ ಮಂಟಪ, ಬಯಲು ಪ್ರದೇಶದಲ್ಲಿಯೇ ಮಲ ವಿಸರ್ಜನೆಯ ಗಲೀಜು...
ಈ ದೃಶ್ಯಗಳು ಕಂಡುಬಂದಿರುವುದು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಮೈಲಾಪುರದ ಮೈಲಾರಲಿಂಗೇಶ್ವರ ದೇವಸ್ಥಾನದ ತವರಲ್ಲಿ. ಹುಂಡಿ, ದೇಣಿಗೆ, ವಾಣಿಜ್ಯ ಮಳಿಗೆಗಳಿಂದ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದ್ದರೂ ಅಭಿವೃದ್ಧಿಯ ಸೌಕರ್ಯಗಳು ಭಕ್ತರಿಗೆ ಸಿಗುತ್ತಿಲ್ಲ. ಜಾತ್ರೆಯ ಅವಧಿಯಲ್ಲಿ ಕೈಗೆತ್ತಿಕೊಳ್ಳುವ ಕಾಮಗಾರಿಗಳು ತಾತ್ಕಾಲಿಕ ಪರಿಹಾರವಾಗಿವೆ.
ಮಕರ ಸಂಕ್ರಮಣ ಜಾತ್ರೆಗೆ ಇನ್ನೂ ಒಂದು ತಿಂಗಳು ಬಾಕಿ ಇದೆ. ಮೂರು ದಿನಗಳು ನಡೆಯುವ ಜಾತ್ರೆಗೆ ನೆರೆಹೊರೆಯ ಜಿಲ್ಲೆಗಳು ಸೇರಿದಂತೆ ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶದಿಂದಲೂ ಭಕ್ತಗಣ ಮೈಲಾಪುರದತ್ತ ಧಾವಿಸಲಿದೆ. ಪ್ರತಿ ವರ್ಷದಂತೆ ಮೂಲಸೌಲಭ್ಯಗಳ ಕೊರತೆಗಳ ನಡುವೆಯೇ ತಮ್ಮ ಹರಕೆಗಳನ್ನು ತೀರಿಸಿ ಹಿಂದಿರುಗುತ್ತಾರೆ.
ಜನವರಿ 12ರಿಂದಲೇ ಭಕ್ತ ಸಮೂಹ ಮೈಲಾಪುರದತ್ತ ಹೆಜ್ಜೆ ಹಾಕಿ, 17ನೇ ತಾರೀಖಿನವರೆಗೆ ಅಲ್ಲಿಯೇ ಉಳಿದುಕೊಳ್ಳುತ್ತಾರೆ. ಅವ್ಯವಸ್ಥೆಯಿಂದ ಕೂಡಿರುವ ಕಲ್ಯಾಣ ಮಂಟಪ ಹಾಗೂ ಯಾತ್ರಿಕ ನಿವಾಸಗಳು ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ತಂಗಲು ಬಳಕೆ ಆಗುತ್ತವೆ. ಕೆರೆಯ ದಂಡೆ ಹಾಗೂ ಖಾಸಗಿ ಒಡೆತನದಲ್ಲಿರುವ ಭಕ್ತರ ತಂಗುದಾಣದ ಕಟ್ಟಡಗಳು ಬರುವ ಭಕ್ತರ ಸಂಖ್ಯೆಗೆ ಯಾವುದಕ್ಕೂ ಸಾಲುವುದಿಲ್ಲ. ಕಲ್ಯಾಣ ಮಂಟಪ ಸಮೀಪ ನಿರ್ಮಾಣ ಹಂತದ ಕಟ್ಟಡಗಳು ಅಸ್ಥಿಪಂಜರದಂತೆ ಅರ್ಧಕ್ಕೆ ನಿಂತಿದ್ದು, ಬಂದಂತಹ ಭಕ್ತರಿಗೆ ಚಳಿಯಲ್ಲಿ ಬಯಲೇ ಆಲಯವಾಗಲಿದೆ.
ಮಲ್ಲಯ್ಯನಿಗೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ಭಕ್ತರು ಮಡಿಕೆಯಲ್ಲಿ ಜೋಳದ ನುಚ್ಚು, ಹುಬ್ಬಳ್ಳಿ– ಧಾರವಾಡ, ಗದಗ ಹಾಗೂ ವಿಜಯಪುರ ಭಾಗದ ಭಕ್ತರು ಕರಿಗಡುಬು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶದ ಭಕ್ತರು ಹೋಳಿಗೆ ಮತ್ತು ಸಜ್ಜೆ ರೊಟ್ಟಿಯ ನೈವೇದ್ಯ ಸಮರ್ಪಿಸುತ್ತಾರೆ. ಎಲ್ಲಾ ತರಹದ ನೈವೇದ್ಯವನ್ನು ಮೈಲಾಪುರದಲ್ಲಿಯೇ ಉಳಿದುಕೊಂಡು ಅವುಗಳನ್ನು ತಯಾರಿಸುವ ವಾಡಿಕೆ ಇದೆ. ಕೊರೆಯುವ ಚಳಿಯಲ್ಲಿ ಹೊಲ– ಗದ್ದೆಗಳ ಬಯಲಿನಲ್ಲಿ ವಾಸ್ತವ್ಯ ಮಾಡುತ್ತಾರೆ. ನೈವೇದ್ಯ ತಯಾರಿಕೆಗೆ ಉತ್ತಮವಾದ ನೀರು ಸಿಗುವುದಿಲ್ಲ. ಶೌಚಾಲಯವಂತು ದೂರದ ಮಾತು.
‘ಜಾತ್ರೆಯ ವೇಳೆ ನಾಲ್ಕೂ ದಿಕ್ಕುಗಳಲ್ಲಿನ ಹೊಲ– ಗದ್ದೆಗಳು, ಬೆಟ್ಟಗಳಲ್ಲಿ ಭಕ್ತರು ಉಳಿದುಕೊಂಡಿರುತ್ತಾರೆ. ಅವರಿಗೆ ಅಲ್ಲಲ್ಲಿ ಟೆಂಟ್‌ಗಳ ವ್ಯವಸ್ಥೆ ಮಾಡಬೇಕು. ಒಂದೊಂದು ದಿಕ್ಕಿಗೂ ಕನಿಷ್ಠ 50 ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆಯಾದರೂ ಕಲ್ಪಿಸಬೇಕು. ಕೆರೆಯ ಸುತ್ತಲೂ ಸ್ನಾನ ಮಾಡಿ, ಬಟ್ಟೆ ಬದಲಾಯಿಸಲು ಅನುಕೂಲ ಮಾಡಿಕೊಟ್ಟರೆ ಜಿಲ್ಲಾಡಳಿತಕ್ಕೂ ಒಳ್ಳೆಯ ಹೆಸರು ಬರುತ್ತದೆ’ ಎನ್ನುತ್ತಾರೆ ದೇವಸ್ಥಾನದ ಪೂಜಾರಿ ಈಶ್ವರ ಪೂಜಾರಿ.
‘ಹರಕೆಯ ಕುರಿಗಳ ಹರಾಜು, ಹುಂಡಿಯ ಹಣ, ವ್ಯಾಪಾರಿಗಳಿಂದ ಕರ ವಸೂಲಿ ಸೇರಿ ಜಾತ್ರೆಯ ಅವಧಿಯಲ್ಲಿ ಮುಜರಾಯಿ ಇಲಾಖೆಗೆ ₹ 70 ಲಕ್ಷದಷ್ಟು ಆದಾಯ ಬರುತ್ತದೆ. ಉಳಿದ ದಿನಗಳಲ್ಲಿನ ಆದಾಯ ಸೇರಿಸಿದರೆ ಆದಾಯದ ಮೊತ್ತ ₹ 1.50 ಕೋಟಿ ದಾಟುತ್ತದೆ. ಅದರಲ್ಲಿ ಸುಮಾರು ₹ 40 ಲಕ್ಷ ಅನುದಾನವನ್ನು ಸಮರ್ಪವಾಗಿ ಬಳಕೆ ಮಾಡಿದರೂ ಜಾತ್ರೆಗೆ ಬಂದ ಭಕ್ತರಿಗೆ ಒಳ್ಳೆಯ ಸೌಕರ್ಯಗಳನ್ನು ಕೊಡಬಹುದು’ ಎನ್ನುತ್ತಾರೆ.
ಮೈದುಂಬಿದ ಕೆರೆ: ಬೆಟ್ಟಗಳ ತುದಿಗೂ ಆವರಿಸಿದ ನೀರು ಉತ್ತಮ ಮಳೆಯಿಂದಾಗಿ ಪುಣ್ಯಸ್ನಾನದ ಹೊನ್ನಕೆರೆಯು ಮೈದುಂಬಿ ಎರಡೂ ಬದಿಯ ಬೆಟ್ಟಗಳ ತುದಿಯವರೆಗೆ ನೀರು ಆವರಿಸಿಕೊಂಡಿದೆ. ಕೆರೆ ಕಟ್ಟೆಯ ಬದಿಯಲ್ಲಿ ಆಳವಾದ ನೀರಿದ್ದು ಈಜು ಬಾರದ ಮಹಿಳೆಯರು ಮತ್ತು ಮಕ್ಕಳಿಗೆ ಅಪಾಯಕಾರಿಯಾಗಿದೆ. ಪುಣ್ಯ ಸ್ನಾನಕ್ಕೆ ಲಕ್ಷಾಂತರ ಜನರು ಸೇರಲಿದ್ದು ಕೆರೆಯ ಹಿಂಬದಿಗೆ ಹೋಗಲು ಸರಿಯಾದ ಮಾರ್ಗವಿಲ್ಲ. ಕೆರೆಯ ಪೂರ್ವ ದಿಕ್ಕಿನಲ್ಲಿ ಕಿರಿದಾದ ಬೆಟ್ಟ ತುದಿಯವರೆಗೆ ನೀರು ನಿಂತಿದೆ. ಇನ್ನೊಂದು ದಿಕ್ಕಿನಲ್ಲಿ ಕಲ್ಲು ಬಂಡೆಗಳವರೆಗೂ ಆವರಿಸಿಕೊಂಡಿದೆ. ಕಡಿದಾದ ಹಾದಿಯಲ್ಲಿ ವೃದ್ಧರು ಮಕ್ಕಳು ತೆರಳುವುದು ಕಷ್ಟವಾಗುಬಹುದು. ನೀರು ಹೆಚ್ಚಾಗಿ ಇರುವುದರಿಂದ ಮುನ್ನಚ್ಚರಿಕೆಯ ಕ್ರಮವಾಗಿ ಜನರ ಸುರಕ್ಷತೆಗಾಗಿ 20ಕ್ಕೂ ಅಧಿಕ ರಕ್ಷಣಾ ಸಿಬ್ಬಂದಿ ಹಾಗೂ ಬೋಟ್‌ಗಳ ವ್ಯವಸ್ಥೆ ಮಾಡಬೇಕು ಎನ್ನುತ್ತಾರೆ ದೇವಸ್ಥಾನದ ಪೂಜಾರಿಗಳು.
ಬೆಟ್ಟದ ರಸ್ತೆಗಿಲ್ಲ ತಡೆಗೋಡೆ: ಬೆಟ್ಟದ ಹಿಂಬದಿಯಿಂದ ದೇವಸ್ಥಾನಕ್ಕೆ ವಾಹನಗಳಲ್ಲಿ ತೆರಳಲು ಸಿಸಿ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ರಸ್ತೆಗೆ ತಡೆಗೋಡೆಯೇ ಇಲ್ಲ. ಕರ್ವ್ ರಸ್ತೆಯಲ್ಲಿ ವಾಹನ ಚಾಲಕರು ಸ್ವಲ್ಪವೇ ಎಚ್ಚರ ತಪ್ಪಿದರೂ ರಸ್ತೆಯ ಬದಿಯಲ್ಲಿ ಗುಂಡಿಗೆ ಬೀಳುವ ಸಾಧ್ಯತೆ ಇದೆ. ಕೂಡಲೇ ತಡೆಗೋಡೆ ನಿರ್ಮಿಸಿ ಪ್ರಯಾಣಿಕರಿಗೆ ಸುರಕ್ಷಿತೆ ಕಲ್ಪಿಸಬೇಕು ಎನ್ನುತ್ತಾರೆ ಸ್ಥಳೀಯರು.
ಜಾತ್ರೆಯ ಹಿನ್ನೆಲೆಯಲ್ಲೇ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು ಜಾತ್ರೆ ಆರಂಭಕ್ಕೂ ಮುನ್ನವೇ ಮುಗಿಸುತ್ತೇವೆ. ಜಾತ್ರೆಯ ಬಗ್ಗೆ ಸಭೆ ಮಾಡಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುವುದುಸುರೇಶ ರಾಣಪ್ಪ ಅಂಕಲಗಿ, ಯಾದಗಿರಿ ತಾಲ್ಲೂಕು ತಹಶೀಲ್ದಾರ್
ಜಾತ್ರೆಗೆ ಕೆಲವು ದಿನಗಳು ಇರುವಾಗ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಬದಲು ಮುಂಚಿತವಾಗಿ ಆರಂಭಿಸಬೇಕು. ಇಡೀ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಯೋಜನೆಗಳು ಹಾಕಿಕೊಳ್ಳಬೇಕುಈಶ್ವರ ಪೂಜಾರಿ, ದೇವಸ್ಥಾನದ ಪೂಜಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.