ADVERTISEMENT

ಕೃಷ್ಣೆ–ಭೀಮೆಯಲ್ಲಿ ಪುಣ್ಯಸ್ನಾನ, ಪುಷ್ಕಳ ಭೋಜನ

ಜಿಲ್ಲೆಯಾದ್ಯಂತ ಸಂಕ್ರಾಂತಿ ಸಡಗರ: ಎಳ್ಳು– ಬೆಲ್ಲ ಹಂಚಿ ಶುಭಾಶಯ ವಿನಿಮಯ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 7:13 IST
Last Updated 16 ಜನವರಿ 2026, 7:13 IST
ಯಾದಗಿರಿ ತಾಲ್ಲೂಕಿನ ಅಬ್ಬೆ ತುಮಕೂರಿನ ಭೀಮಾ ನದಿ ತೀರದಲ್ಲಿ ಜಮಾಯಿಸಿದ್ದ ಜನಸ್ತೋಮ  
ಯಾದಗಿರಿ ತಾಲ್ಲೂಕಿನ ಅಬ್ಬೆ ತುಮಕೂರಿನ ಭೀಮಾ ನದಿ ತೀರದಲ್ಲಿ ಜಮಾಯಿಸಿದ್ದ ಜನಸ್ತೋಮ     

ಯಾದಗಿರಿ: ಕ್ಯಾಲೆಂಡರ್ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯನ್ನು ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಸಡಗರದಿಂದ ಆಚರಿಸಲಾಯಿತು. ಕೃಷ್ಣಾ–ಭೀಮಾ ನದಿಗಳಲ್ಲಿ ಪುಣ್ಯಸ್ನಾನ, ಪುಷ್ಕಳ ಭೋಜನ ಸವಿದರು.

ಜಿಲ್ಲೆಯಲ್ಲಿ ಕೆಲವರು ಬುಧವಾರವೇ ಮಕರ ಸಂಕ್ರಮಣ ಆಚರಿಸಿದರೆ, ಉಳಿದವರು ಗುರುವಾರ ಆಚರಣೆ ಮಾಡಿದರು. ಎಳ್ಳು– ಬೆಲ್ಲ ಹಂಚಿ ಒಳ್ಳೊಳ್ಳೆ ಮಾತನಾಡುವ ಸಂದೇಶವನ್ನೂ ಸಾರಿ, ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಸೂರ್ಯನ ಮಕರ ರಾಶಿಯನ್ನು ಪ್ರವೇಶಿಸುವ ಸಮಯದ ಮಕರ ಸಂಕ್ರಾಂತಿಯಂದು ನದಿ ಸ್ನಾನ ಶ್ರೇಷ್ಠ ಎಂಬ ನಂಬಿಕೆ ಹಿಂದೂಗಳಲಿದೆ. ಹೀಗಾಗಿ, ಭೀಮಾ ನದಿ ತೀರದ ಹುರಸಗುಂಡಗಿ, ಅಬ್ಬೆ ತುಮಕೂರು, ನಾಯ್ಕಲ್, ಹಾಲಗೇರಾ ಸೇರಿದಂತೆ ವಿವಿಧೆಡೆ ಹಾಗೂ ಕೃಷ್ಣಾ ನದಿ ತೀರದ ದಕ್ಷಿಣದ ಕಾಶಿ ಎಂದೇ ಹೆಸರಾಗಿರುವ ತಿಂಥಣಿ, ಛಾಯಾಭಗವತಿ ಒಳಗೊಂಡು ಹಲವೆಡೆಯೂ ಪುಣ್ಯಸ್ನಾನ ಮಾಡಿದರು.

ADVERTISEMENT

ಪುಣ್ಯ ಸ್ನಾನದ ಬಳಿಕ ಮಕ್ಕಳು, ಹಿರಿಯರಲ್ಲ ಹೊಸ ಬಟ್ಟೆ ಧರಿಸಿದರು. ಸಮೀಪದ ದೇವಸ್ಥಾನ, ಮಠ–ಮಂದಿರಗಳಿಗೆ ತೆರಳಿ ದೇವರ ದರ್ಶನ ಪಡೆದರು. ಸಂಕ್ರಮಣ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಭಕ್ತಗಣ ದೇವಸ್ಥಾನದತ್ತ ಹೆಜ್ಜೆ ಹಾಕಿತ್ತು. ಹೀಗಾಗಿ, ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಮಾಡಿದರು.

ದೇವರ ದರ್ಶನದ ಬಳಿಕ ಮನೆಯಿಂದ ತಂದಿದ್ದ ಜೋಳದ ಖಡಕ್ ರೊಟ್ಟಿ, ಎಳ್ಳು ಹಚ್ಚಿದ ಸಜ್ಜೆ ರೋಟಿ, ಚಪಾತಿ, ಎಳ್ಳು ಹಚ್ಚಿದ ಶೇಂಗಾ ಹೋಳಗಿ, ಕಡಲೆ ಹೋಳಿಗೆ, ಜೋಳದ ಉಂಡಿಯೊಂದಿಗೆ ಮೊಳಕಿ ಕಾಳಿನ ಪಲ್ಯೆ, ಎಣ್ಣೆಗಾಯಿ, ಭರ್ತ, ಭಜ್ಜಿ, ಹೆಸರು ಕಾಳು ಪಲ್ಯೆ, ಪುಂಡಿಪಲ್ಯ, ಸಾಂಬರ್‌ ಮತ್ತು ಅನ್ನ ಭೂರಿ–ಭೋಜನವನ್ನು ಕುಟುಂಬ ಸಮೇತ ಸವಿದರು.

ಉತ್ತರಾಯಣದ ಶುಭಗಳಿಗೆಯಲ್ಲಿ ಮಕ್ಕಳಿಗೆ ಹಣ್ಣುುಗಳು ಎರೆದರೆ ಪೀಡೆ ಪರಿಹಾರದ ಜತೆಗೆ ದೃಷ್ಟಿ ದೋಷ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಕೆಲವರಲ್ಲಿ ಇದೆ. ಹೀಗಾಗಿ, ಪೋಷಕರು ತಮ್ಮ ಮಕ್ಕಳಿಗೆ ಬೋರೆ, ದ್ರಾಕ್ಷಿ ಹಣ್ಣಿನ ಸಮೇತ ಫಲ ಎರೆದರು.

ಭಕ್ತರ ಸ್ನಾನ: ನಗರ ಹೊರವಲಯದ ಭೀಮಾ ನದಿಯ ದಡದಲ್ಲಿ ಸೇರಿದ ಸಾವಿರಾರು ಭಕ್ತರು ನದಿಯಲ್ಲಿ ಪುಣ್ಯಸ್ನಾನ ಮಾಡಿದರು. ಕಂಗೇಳೇಶ್ವರ, ವೀರಾಂಜನೇಯ ದೇವರ ದರ್ಶನ ಪಡೆದರು. ನಂತರ ನದಿಯ ದಡದಲ್ಲಿ ಹಬ್ಬದ ಊಟ ಸವಿದು ಸಂಭ್ರಮಿಸಿದರು.

ಯಾದಗಿರಿ ತಾಲ್ಲೂಕಿನ ಅಬ್ಬೆ ತುಮಕೂರಿನಲ್ಲಿ ಗುರುವಾರ ಗಂಗಾಧರ ಶಿವಾಚಾರ್ಯರು ಭಕ್ತರಿಗೆ ಆಶೀರ್ವಾದ ನೀಡಿದರು
ಯಾದಗಿರಿ ತಾಲ್ಲೂಕಿನ ಅಬ್ಬೆ ತುಮಕೂರಿನ ಭೀಮಾ ನದಿ ತೀರದಲ್ಲಿ ಗುರುವಾರ ಸಂಕ್ರಾಂತಿ ಅಂಗವಾಗಿ ಸಾಮೂಹಿಕ ಭೋಜನೆ ಮಾಡಿದ ಜನರು  
ಯಾದಗಿರಿ ತಾಲ್ಲೂಕಿನ ಭೀಮಾ ನದಿ ತೀರದಲ್ಲಿ ಗುರುವಾರ ಪುಣ್ಯಸ್ನಾನ ಮಾಡಲು ಜಮಾಯಿಸಿದ ಜನರು

ಅಬ್ಬೆ ತುಮಕೂರು: ಸಡಗರದ ಸಂಕ್ರಾಂತಿ

ಯಾದಗಿರಿ: ಅಬ್ಬೆ ತುಮಕೂರಿನ ಹೊಳೆ ಜಾತ್ರೆಯ ಅಂಗವಾಗಿ ಮಠದಿಂದ ಭೀಮಾ ನದಿ ತೀರದವರೆಗೆ ವಿಶ್ವಾರಾಧ್ಯರ ಮೂರ್ತಿಯ ಪಲ್ಲಕ್ಕಿ ಮೆರವಣಿಯು ಗುರುವಾರ ಸಂಭ್ರಮದಿಂದ ಜರುಗಿತು. ಸಂಕ್ರಾಂತಿ ಪ್ರಯುಕ್ತ ಬೆಳಿಗ್ಗೆ ವಿಶ್ವಾರಾಧ್ಯರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ನೆರವೇರಿತು. ಮಂಗಲ ವಾದ್ಯಗಳು ಡೊಳ್ಳು ಬಾಜ ಭಜಂತ್ರಿ ನಾದನ ದೇವರ ಸ್ತುತಿಯ ಭಜನೆ ಸುಮಂಗಲಿಯರ ಕಳಸದೊಂದಿಗೆ ಪಲ್ಲಕ್ಕಿ ಮೆರವಣಿಗೆ ಸಾಗಿತು. ಮೆರವಣಿಗೆ ಉದ್ದಕ್ಕೂ ಸಾವಿರಾರು ಭಕ್ತರು ಜೈಕಾರ ಹಾಕಿದರು. ನದಿ ತೀರದಲ್ಲಿ ಮಠದ ಪೀಠಾಧಿಪತಿ ಗಂಗಾಧರ ಶಿವಾಚಾರ್ಯರು ಗಂಗಾ ಸ್ನಾನ ಕೈಗೊಂಡು ಗಂಗಾ ಮಾತೆಗೆ ವಿಶೇಷ ಪೂಜೆ ನೆರವೇರಿಸಿದರು. ತರುವಾಯ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತವೃಂದಕ್ಕೆ ದರ್ಶನ ಆಶೀರ್ವಾದ ನೀಡಿದರು. ಆಶೀರ್ವಚನ ನೀಡಿದ ಗಂಗಾಧರ ಶಿವಾಚಾರ್ಯರು ‘ಹೊಸ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯು ರೈತರ ಬದುಕಿಗೆ ಸಮೃದ್ಧಿ ತರಲಿ. ಅನ್ನ ನೀಡುವ ರೈತರಿಗೆ ಹಿಗ್ಗು ನೀಡಲಿ. ಒಕ್ಕಲಿಗ ಚೆನ್ನಾಗಿದ್ದರೆ ನಾಡೆಲ್ಲ ಸಮೃದ್ಧವಾಗಿರುತ್ತದೆ. ಆತನ ಬದುಕಿನ ಬೆಳಕಾಗಿ ಈ ಹಬ್ಬ ಸಂಭ್ರಮವನ್ನು ತರಲಿ’ ಎಂದರು. ‘ಪ್ರತಿ ಮಾನವ ಜೀವಿಯಲ್ಲಿ ಅರಿವನ್ನು ಮೂಡಿಸುವ ಹೊಸತನದ ಸಂಕೇತವಾದ ಸಂಕ್ರಾಂತಿ ಸರ್ವರಿಗೂ ಶಾಂತಿ ಸಮೃದ್ಧಿ ನೀಡಲಿ. ಹೊಸ ಫಸಲು ಬಂದು ರೈತರ ಮನೆಯನ್ನು ತುಂಬುತ್ತದೆ. ಅಂತೆಯೇ ಅರಿವು ತಿಳಿವಳಿಕೆ ಹಾಗೂ ಒಳ್ಳೆಯತನ ಎಲ್ಲರ ಮನದಲ್ಲಿ ತುಂಬಲಿ’ ಎಂದು ಹೇಳಿದರು. ಭಕ್ತರು ಸಹ ಪುಣ್ಯಸ್ನಾನ ಮಾಡಿ ಕುಟುಂಬ ಸಮೇತರಾಗಿ ಸಂಕ್ರಾಂತಿ ಹಬ್ಬದ ಊಟವನ್ನ ಸವಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮಹೇಶರೆಡ್ಡಿ ಮುದ್ನಾಳ ಚನ್ನಪ್ಪಗೌಡ ಮೋಸಂಬಿ ಸುಭಾಷ್ ಚಂದ್ರ ಕೌಲಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.