
ಗುರುಮಠಕಲ್: ‘ಮೈ-ಕೈ ಮತ್ತು ಬಟ್ಟೆಗಳು ಹೊಲಸಾದರೆ ಮಾರುಕಟ್ಟೆಯಲ್ಲಿ ವಿವಿಧ ಸಾಬೂನುಗಳಿವೆ. ಆದರೆ, ಮನಸ್ಸು ಹೊಲಸಾದರೆ ಹೇಗೆ? ಗುರುಗಳ ಸಾನ್ನಿಧ್ಯ, ಸತ್ಸಂಗವು ಮನದ ಮಾಲಿನ್ಯವನ್ನು ಶುದ್ಧಗೊಳಿಸುತ್ತದೆ’ ಎಂದು ಕೃಷ್ಣಗಿರಿಯ ಮಹಾರಾಜ ಯೋಗಿ ಕೃಷ್ಣಾನಂದ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ಗುರುವಾರ ಉಸೇನಪ್ಪ ಅವರ ಉಚಿತ ಆಯುರ್ವೇದ ಆರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದರು.
‘ಇತ್ತೀಚೆಗೆ ಕ್ಯಾನ್ಸರ್ ರೋಗ ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಎಂದ ತಕ್ಷಣ ಭೀತರಾಗುತ್ತೇವೆ. ಆದರೆ, ತಲೆನೋವಿನಂತೆ ಕ್ಯಾನ್ಸರ್ ಎಂದು ಧೈರ್ಯದಿಂದಿರಿ. ನಮ್ಮಲ್ಲಿ ದೃಢತೆ ಮತ್ತು ಧೈರ್ಯವಿದ್ದರೆ ಅದೇ ನಿಜವಾದ ಔಷಧವಾಗುತ್ತದೆ’ ಎಂದರು.
‘ತಾಯಿ, ತಂದೆ ಮತ್ತು ಗುರುಗಳು ಭಗವಂತನೇ ಹೌದು. ಈ ಮೂವರ ಸೇವೆ ಮತ್ತು ಅವರನ್ನು ಗೌರವಿಸುವುದರಿಂದ ಅನ್ನ, ಅರಿವೆ, ಆಶ್ರಯದ ಸಮಸ್ಯೆಯಾಗದು. ಬಡ ಜನತೆಯ ಸೇವೆಯೇ ನಮ್ಮ ಗುರಿ. ಅದರಂತೆ ಸೇವೆಗೆ ತೊಡಗುವುದು ಮುಖ್ಯ’ ಎಂದು ಅವರು ಹೇಳಿದರು.
‘ಆರೋಗ್ಯವು ನಮ್ಮಲ್ಲಿದ್ದರೆ ಯಾವ ಐಶ್ವರ್ಯವೂ ಬೇಡ. ಎಲ್ಲಾ ಬಗೆಯ ಭಾಗ್ಯಗಳಿದ್ದು, ಪಂಚಭಕ್ಷಗಳಿದ್ದಾಗ ಆರೋಗ್ಯ ಇಲ್ಲವಾದರೆ? ರೋಗಿಯಾದರೆ ಏನನ್ನೂ ಸವಿಯಲಾಗದು. ಆದ್ದರಿಂದ ಆರೋಗ್ಯಕ್ಕೆ ಆದ್ಯತೆ ನೀಡಿ’ ಎಂದು ಸಲಹೆ ನೀಡಿದರು.
‘ಮದ್ಯ ಸೇವನೆ ಮತ್ತು ಮಾಂಸ ಭಕ್ಷಣೆ ತ್ಯಜಿಸಿ. ಮಾತೆ ಮಾಣಿಕೇಶ್ವರಿಯವರ ಆಶಯದಂತೆ ಅಹಿಂಸಾ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ’ ಎಂದು ಹೇಳಿದರು. ಆಯೋಜಕ ಉಸನಪ್ಪ ಹಾಗೂ ಮುಖಂಡ ಶಿವರೆಡ್ಡಿ ಮಾತನಾಡಿದರು.
ಜಗನ್, ಲಕ್ಷ್ಮಣ, ನರಸಿಂಹ, ಸದಾಶಿವರೆಡ್ಡಿ, ಶ್ರೀನಿವಾಸರೆಡ್ಡಿ, ವೆಂಕಟರೆಡ್ಡಿ, ವೆಂಕಟಪ್ಪ, ಶಿವ, ರಮೇಶ, ಕಿಶನ್, ಸಾಬಣ್ಣ, ರಾಮುನಾಯಕ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.