ಸಂತೋಷ್ ಲಾಡ್
ಸುರಪುರ: ಬುಧವಾರ ಯಾದಗಿರಿಗೆ ಆಗಮಿಸಿದ್ದ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಅಲೆಮಾರಿಗಳ ಸಂಘದ ಮುಖಂಡರು ಘೇರಾವ್ ಹಾಕಿ ಮನವಿ ಪತ್ರ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ಅಲೆಮಾರಿ ಒಕ್ಕೂಟದ ರಾಜ್ಯ ಸಮಿತಿ ಸಂಘಟನಾ ಕಾರ್ಯದರ್ಶಿ ಸುರಪುರ ತಾಲ್ಲೂಕಿನ ಭೀಮರಾಯ ಒಂಟೆತ್ತು ಮಂಗಳೂರು ಮಾತನಾಡಿ, ‘ರಾಜ್ಯದಲ್ಲಿ 59ಕ್ಕೂ ಹೆಚ್ಚು ಪರಿಶಿಷ್ಟ ಜಾತಿಯ ಅಲೆಮಾರಿ ಜನಾಂಗದವರು ಇದ್ದಾರೆ. ಈ ಸಮುದಾಯಕ್ಕೆ ಪ್ರತ್ಯೇಕ ಶೇ 1 ಮೀಸಲಾತಿ ಒದಗಿಸಲು ಶ್ರಮಿಸಬೇಕು’ ಎಂದು ಮನವಿ ಮಾಡಿದರು.
‘ಅಲೆಮಾರಿ ಸಮುದಾಯಕ್ಕೆ ಮೀಸಲಾತಿಯ ಲಾಭ ತಟ್ಟುತ್ತಿಲ್ಲ. ಎಲ್ಲ ಪರಿಶಿಷ್ಟರೊಡನೆ ನಮ್ಮನ್ನು ಸೇರಿಸಿದರೆ ನಮ್ಮ ಜನಾಂಗ ಮತ್ತಷ್ಟು ಹಿಂದುಳಿಯುತ್ತದೆ. ಮುಖ್ಯವಾಹಿನಿಗೆ ಬರುವಂತಾಗಲು ಪ್ರತ್ಯೇಕ ಮೀಸಲಾತಿಯ ಅವಶ್ಯಕತೆ ಇದೆ’ ಎಂದರು.
‘ತಾವು ನಮ್ಮ ಜನಾಂಗದ ನೆರವಿಗೆ ಬರಬೇಕು. ವಿಧಾನಸಭೆಯಲ್ಲಿ ನಮ್ಮ ಪರ ಧ್ವನಿ ಎತ್ತಬೇಕು. ಪ್ರತ್ಯೇಕ ಮೀಸಲಾತಿಗೆ ನಿರಂತರ ಶ್ರಮಿಸಬೇಕು’ ಎಂದು ಮನವಿ ಮಾಡಿದರು.
ಸಚಿವರು ಸ್ಪಂದಿಸಿ, ‘ನಿಮ್ಮ ಬೇಡಿಕೆಯನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.
ಮುಖಂಡರಾದ ಆಂಜನೇಯ ಬಲಗಲ್, ಮಾರುತಿ ಚಿತ್ತಾಪುರ, ಬಸವರಾಜ ಶಹಾಪುರ, ಕಾಟೆಪ್ಪ ಶಹಾಪುರ, ವೆಂಕಟೇಶ ನಾಯ್ಕಲ್, ಮಾರುತಿಶಾಸ್ತ್ರಿ ಯಾದಗಿರಿ, ಮಹಾದೇವ ಗೋಡಿಹಾಳ, ಶಿವರಾಜ ಮಂಗಳೂರ, ಹಣಮಂತ ಅಶ್ವ ಶಹಾಪುರ, ಶ್ರೀನಿವಾಸ ಯಾದಗಿರಿ, ಚನ್ನದಾಸರ, ಬುಡ್ಗಜಂಗಮ, ಸಿಂಧೋಳ, ಸುಡುಗಾಡುಸಿದ್ದ, ಸಿಳ್ಳೆಕ್ಯಾತ, ಡಂಬರ್ ಸಮುದಾಯದ ಮುಖಂಡರು ಭಾಗವಹಿಸಿದ್ದರು.