ADVERTISEMENT

ಸ್ವಯಂಪ್ರೇರಣೆಯಿಂದ ಲಸಿಕೆ ಹಾಕಿಸಿಕೊಳ್ಳಲು ಶಾಸಕ ರಾಜೂಗೌಡ ಮನವಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 5:48 IST
Last Updated 5 ಜೂನ್ 2021, 5:48 IST
ಹುಣಸಗಿ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಕೋವಿಡ್ ಲಸಿಕೆ ಅಭಿಯಾನಕ್ಕೆ ಶಾಸಕ ರಾಜುಗೌಡ ಚಾಲನೆ ನೀಡಿದರು
ಹುಣಸಗಿ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಕೋವಿಡ್ ಲಸಿಕೆ ಅಭಿಯಾನಕ್ಕೆ ಶಾಸಕ ರಾಜುಗೌಡ ಚಾಲನೆ ನೀಡಿದರು   

ಹುಣಸಗಿ: ಸರ್ಕಾರದಿಂದ ಉಚಿತವಾಗಿ ನೀಡಲಾಗುತ್ತಿರುವ ಎರಡೂ ಲಸಿಕೆಗಳು ಪರಿಣಾಮಕಾರಿಯಾಗಿದ್ದು, ಸುರಪುರ ಹಾಗೂ ಹುಣಸಗಿ ತಾಲ್ಲೂಕಿನ ಜನರು ಕಡ್ಡಾಯವಾಗಿ ಸ್ವಯಂಪ್ರೇರಿತರಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಶಾಸಕ ರಾಜೂಗೌಡ ಹೇಳಿದರು.

ಹುಣಸಗಿ ತಹಶೀಲ್ದಾರ್ ಕಚೇರಿಯಲ್ಲಿ ಕೋವಿಡ್ ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕೋವಿಡ್ ಹತೊಟಿಗೆ ತರುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸೇರಿದಂತೆ ಇತರ ಎಲ್ಲ ಇಲಾಖೆಗಳ ಅಧಿಕಾರಿಗಳು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಆದ್ದರಿಂದ ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರು ಆರೋಗ್ಯದ ಹಿತದೃಷ್ಟಿಯಿಂದ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೋವಿಡ್ ವಿರುದ್ಧ ಗೆಲವು ಸಾಧಿಸಬೇಕು. ಕೊರೊನಾ ಸಂಪೂರ್ಣ ತೊಲಗುವವರೆಗೂ ಎಲ್ಲರೂ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹೇಳಿದರು.

ADVERTISEMENT

ಕೆಲ ಗ್ರಾಮಗಳಲ್ಲಿ ತಿಳಿವಳಿಕೆ ಕೊರತೆಯಿಂದಾಗಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಕೊವಿಡ್ ಹರಡಲು ಕಾರಣವಾಗುತ್ತಿದೆ. ಎಲ್ಲರೂ ಲಸಿಕೆ ಹಾಕಿಸಿಕೊಂಡಲ್ಲಿ ಬೇಗನೇ ಕೋವಿಡ್ ಮುಕ್ತ ಗ್ರಾಮವಾಗಲು ಸಹಾಯವಾಗುತ್ತದೆ ಎಂದರು.

ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ ಮಾತನಾಡಿ, ಈಗಾಗಲೇ ತಾಲ್ಲೂಕಿನಲ್ಲಿ ಕೆಲ ಗ್ರಾಮಗಳನ್ನು ಗುರುತು ಮಾಡಲಾಗಿದ್ದು, ಆಯಾ ಗ್ರಾಮಗಳಲ್ಲಿ ನಮ್ಮ ಆರೋಗ್ಯ ಇಲಾಖೆಯ ತಂಡ ಭೇಟಿ ನೀಡಿ ಎಲ್ಲರಿಗೂ ಲಸಿಕೆ ನೀಡಲಿದ್ದಾರೆ ಎಂದು ಹೇಳಿದರು.

ಬಳಿಕ ಹಣಮಸಾಗರ, ವಜ್ಜಲ ತಾಂಡಾ ಸೇರಿದಂತೆ ಆಯ್ಕೆ ಮಾಡಿಕೊಳ್ಳಲಾದ ಹಳ್ಳಿಗಳಿಗೆ ತೆರಳಿ ಗ್ರಾಮದಲ್ಲಿ ಲಸಿಕೆ ಕುರಿತು ಜಾಗೃತಿ ಮೂಡಿಸಲಾಯಿತು.

ತಾಲ್ಲೂಕು ಆರೋಗ್ಯಧಿಕಾರಿ ಡಾ. ಆರ್.ವಿ.ನಾಯಕ, ವೈದ್ಯಾಧಿಕಾರಿ ಡಾ.ಧರ್ಮರಾಜ ಹೊಸಮನಿ, ಸಿಪಿಐ ಎನ್.ಕೆ.ದೌಲತ್, ಪಿಎಸ್ಐ ಬಾಪುಗೌಡ ಪಾಟೀಲ್, ಉಪ ತಹಶೀಲ್ದಾರ್ ಬಸವರಾಜ ಬಿರದಾರ, ಮೇಲಪ್ಪ ಗುಳಗಿ, ಗುರುಲಿಂಗಯ್ಯ ಹಿರೇಮಠ, ಶಿವಲಿಂಗ ಪಟ್ಟಣಶೇಟ್ಟಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.