ADVERTISEMENT

ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿರ್ಲಕ್ಷ್ಯ: ಪ್ರಿಯಾಂಕ್ ಖರ್ಗೆ ಆಪಾದನೆ

ವಿಧಾನಪರಿಷತ್ ಚುನಾವಣಾ ಪ್ರಚಾರ‌ ಸಭೆಯಲ್ಲಿ ಆರೋಪ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 6:37 IST
Last Updated 1 ಡಿಸೆಂಬರ್ 2021, 6:37 IST
ಯಾದಗಿರಿಯಲ್ಲಿ ನಡೆದ ಚುನಾವಣಾ ಪ್ರಚಾರ‌ ಸಭೆಯಲ್ಲಿ ಕಾಂಗ್ರೆಸ್‌ ವಕ್ತಾರ ಪ್ರಿಯಾಂಕ್‌ ಖರ್ಗೆ ಮಾತನಾಡಿದರು
ಯಾದಗಿರಿಯಲ್ಲಿ ನಡೆದ ಚುನಾವಣಾ ಪ್ರಚಾರ‌ ಸಭೆಯಲ್ಲಿ ಕಾಂಗ್ರೆಸ್‌ ವಕ್ತಾರ ಪ್ರಿಯಾಂಕ್‌ ಖರ್ಗೆ ಮಾತನಾಡಿದರು   

ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ಅನುಕೂಲವಾಗಲು 371 (ಜೆ) ಜಾರಿಗೆ ತರುವಲ್ಲಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಎನ್.ಧರಂ ಸಿಂಗ್ ಅವರು ಹೋರಾಟ ಮಾಡಿದ್ದಾರೆ. ಆದರೆ, ಈಗಿನ ಸರ್ಕಾರ ಕಕ ಭಾಗಕ್ಕೆ ವಾರ್ಷಿಕ ಅನುದಾನವೇ ಬಿಡುಗಡೆ ಮಾಡಿಲ್ಲ ಎಂದು ಕಾಂಗ್ರೆಸ್‌ ವಕ್ತಾರ ಪ್ರಿಯಾಂಕ್‌ ಖರ್ಗೆ ಆರೋಪಿಸಿದರು.

ನಗರದಲ್ಲಿ ಏರ್ಪಡಿಸಿದ್ದ ಕಲಬುರಗಿ- ಯಾದಗಿರಿ ವಿಧಾನ ಪರಿಷತ್ ಕ್ಷೇತ್ರದ ಚುನಾವಣಾ ಪ್ರಚಾರ‌ ಸಭೆಯಲ್ಲಿ ಅವರು ಮಾತನಾಡಿದರು.

ಇದು ಬಿಜೆಪಿಯವರಿಗೆ ಈ ಭಾಗದ ಕುರಿತು ಇರುವ ಬದ್ಧತೆ ತೋರಿಸುತ್ತದೆ. ತೀವ್ರ ಮಳೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರದ ಸಚಿವರು ಈ ಕಡೆ ತಿರುಗಿಯೂ ನೋಡಿಲ್ಲ. ಬಸವರಾಜ ಬೊಮ್ಮಾಯಿ ಅಧಿಕಾರಕ್ಕೆ‌ ಬಂದು ನಾಲ್ಕು ತಿಂಗಳಾದರೂ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಿಸಿಲ್ಲ. ಜನರು ತಮ್ಮ ತೊಂದರೆಗೆ ಯಾರ ಬಳಿ ಹೋಗಬೇಕು? ಎಂದು ಪ್ರಶ್ನಿಸಿದರು.

ADVERTISEMENT

ಅಲ್ಪ ಸಂಖ್ಯಾತರ ಮತ್ತು ಪರಿಶಿಷ್ಟ ಜಾತಿ, ಪಂಗಡವರ ಅನುದಾನ ಕಡಿಮೆಯಾಗಿದೆ. ಬಿಜೆಪಿ ಸರ್ಕಾರ ಇವರನ್ನು ತುಳಿಯಲು ಪ್ರಯತ್ನ ಮಾಡುತ್ತಿದೆ.

ಬಿಜೆಪಿ–ಜೆಡಿಎಸ್‌ ಒಳಒಪ್ಪಂದ ಮುಂಚೆ ಇದ್ದಲೂ ಇದೆ. ಹೀಗಾಗಿ ಅವರ ಬಗ್ಗೆ ಏನೂ ಆಗಲ್ಲ. ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 7 ವರ್ಷ ಕಳೆದರೂ ಯಾವ ಅಭಿವೃದ್ಧಿಮಾಡಿಲ್ಲ ಎಂದರು.

ಕಲಬುರಗಿ–ಯಾದಗಿರಿ ಬಿಜೆಪಿ ಅಭ್ಯರ್ಥಿ ವ್ಯಾಪಾರಸ್ಥರು. ಅವರಿಗೆ ವ್ಯಾಪಾರ ಮುಖ್ಯ. ಅವರು ಸದಸ್ಯರನ್ನು ಖರೀದಿ ಮಾಡಲು ಹೊರಟಿದ್ದಾರೆ. ಆದರೆ, ಗ್ರಾಮೀಣ ಭಾಗದ ಅಭಿವೃದ್ದಿ ಬೇಕಿಲ್ಲ. ಹಾಗಾದರೆ ನಿಮ್ಮ ಧ್ವನಿಯಾಗಿ ಯಾರು ನಿಲ್ಲಬೇಕು? ನೀವೆಲ್ಲರೂ ಶಿವಾನಂದ ಪಾಟೀಲ ಅವರನ್ನು ಆಯ್ಕೆ ಮಾಡಿದರೆ ನಿಮ್ಮ ಧ್ವನಿಯಾಗಿ ವಿಧಾನಸಭೆಯಲ್ಲಿ ಮಾತನಾಡುತ್ತಾರೆ ಎಂದು‌ ಭರವಸೆ ನೀಡಿದರು.

ಅಭ್ಯರ್ಥಿ ಶಿವಾನಂದ ಪಾಟೀಲ ಮರತೂರು ಮಾತ‌ನಾಡಿ, ಸರ್ಕಾರ 15ನೇ ಹಣಕಾಸು ಆಯೋಗದ ಅಡಿಯಲ್ಲೂ ಗ್ರಾಮಗಳ ಅಭಿವೃದ್ಧಿ ಮಾಡಿಲ್ಲ. ಪ್ರತಿ ಗ್ರಾಮಗಳಿಗೂ ₹2 ಕೋಟಿ‌ ವಿಶೇಷ ಅನುದಾನ ಕೊಡುವುದಾಗಿ ಹೇಳಿದ್ದರು. ಅನುದಾನ ಬಂದಿದೆಯಾ? ಈ ಕುರಿತು ಬಿಜಿ ಪಾಟೀಲ ಪ್ರಶ್ನೆ ಕೇಳಲಿಲ್ಲ ಎಂದರು.

ಡಿಸಿಸಿ ಅಧ್ಯಕ್ಷ ಮರಿಗೌಡ ಹುಲಕಲ್, ವಿಧಾನ ಪರಿಷತ್‌ ಮಾಜಿ ಸದಸ್ಯ ಚನ್ನಾರೆಡ್ಡಿ ಪಾಟೀಲ ತುನ್ನೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದರ್ಶನ್ ನಾಯಕ್, ಶ್ರೀನಿವಾಸ ರೆಡ್ಡಿ ಕಂದಕೂರು, ಚಿದಾನಂದಪ್ಪ ಕಾಳಬೆಳಗುಂದಿ, ಎ.ಸಿ.ಕಾಡ್ಲೂರು, ಮಂಜುಳಾ ಗೂಳಿ, ಲಾಯಕ್ ಹುಸೇನ್ ಬಾದಲ್, ಸ್ಯಾಂಸನ್‌ ಮಾಳಿಕೇರಿ, ಮರೆಪ್ಪ‌ ಬಿಳ್ಹಾರ, ಬಸು ಬಿಳ್ಹಾರ, ಸಿದ್ದಲಿಂಗರೆಡ್ಡಿ ಉಳ್ಳೆಸೂಗೂರು, ಭೀಮಣ್ಣ ಮೇಟಿ, ನಗರಸಭೆ ಸದಸ್ಯ ಗಣೇಶ ದುಪ್ಪಲ್ಲಿ, ಶರಣಪ್ಪ ಮಾನೇಗಾರ ಇದ್ದರು.

****

ಸ್ಕಿಲ್ ಇಂಡಿಯಾ, ಸಬ್ ಕಾ‌ ಸಾಥ್ ಸಬ್ ಕಾ‌ ವಿಕಾಸ್, ಬೇಟಿ‌ ಪಡಾವೋ‌ ಬೇಟಿ ಬಚಾವೋ, ಜನ್ ಧನ್, ಹೀಗೆ ಬಿಜೆಪಿಯ ಹಲವಾರು ಯೋಜನೆಯಗಳು ಹಳ್ಳ‌ಹಿಡಿದಿವೆ

- ಪ್ರಿಯಾಂಕ್‌ ಖರ್ಗೆ, ಕಾಂಗ್ರೆಸ್‌ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.