ಯಾದಗಿರಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ 46.89 ಬಿತ್ತನೆಯಾಗಿದ್ದು, ಗುರುಮಠಕಲ್ ತಾಲ್ಲೂಕಿನಲ್ಲಿ ಹೆಚ್ಚು ಬಿತ್ತನೆ ಕಾರ್ಯ ನಡೆದಿದೆ.
ಜಿಲ್ಲೆಯಲ್ಲಿ 2025–26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 4.16 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಮುಂಗಾರಿನಲ್ಲಿ ಜಿಲ್ಲೆಯ ಯಾದಗಿರಿ, ಗುರುಮಠಕಲ್, ವಡಗೇರಾ ತಾಲ್ಲೂಕಿನಲ್ಲಿ ಭತ್ತ ನಾಟಿ ಮಾಡಲಾಗುತ್ತಿದೆ. ಉಳಿದ ಶಹಾಪುರ, ಸುರಪುರ, ಹುಣಸಗಿ ತಾಲ್ಲೂಕಿನಲ್ಲಿ ಭತ್ತದ ಬೀಜ ರಿಯಾಯಿತಿ ದರದಲ್ಲಿ ವಿತರಣೆ ಮಾಡುತ್ತಿಲ್ಲ. ಈ ತಾಲ್ಲೂಕಿನಲ್ಲಿ ಕೃಷಿ ಇಲಾಖೆ ಪ್ರಕಾರ ಭತ್ತ ನಿಷೇಧಿತ ಪ್ರದೇಶ. ಮುಂಗಾರಿನಲ್ಲಿ ಪ್ರಮುಖವಾಗಿ ಭತ್ತ, ಸಜ್ಜೆ, ತೊಗರಿ, ಉದ್ದು, ಹೆಸರು, ಹತ್ತಿ ಬಿತ್ತನೆ ಮಾಡಲಾಗುತ್ತಿದೆ.
ಜಿಲ್ಲೆಯ ಆರು ತಾಲ್ಲೂಕುಗಳು ಸೇರಿ ಒಟ್ಟಾರೆ 4.16 ಲಕ್ಷ ಹೆಕ್ಟೇರ್ ಪ್ರದೇಶ ಗುರಿ ಇತ್ತು. ಸದ್ಯ ಜೂನ್ 27ರ ವರೆಗೆ 1,95,280 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಶಹಾಪುರ ತಾಲ್ಲೂಕಿನಲ್ಲಿ ನೀರಾವರಿ ಪ್ರದೇಶ ಹೆಚ್ಚಿರುವ ಕಾರಣ ಭತ್ತ ನಾಟಿ ಮಾಡಲಾಗುತ್ತಿದೆ. ಹೀಗಾಗಿ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿಯೇ ಅತಿ ಕಡಿಮೆ ಬಿತ್ತನೆ ಮಾಡಲಾಗಿದೆ. ಮಳೆಯಾಶ್ರಿತ ತಾಲ್ಲೂಕು ಆಗಿರುವುದರಿಂದ ಗುರುಮಠಕಲ್ ತಾಲ್ಲೂಕಿನಲ್ಲಿ ಉಳಿದ ಐದು ತಾಲ್ಲೂಕುಗಳಿಗಿಂತ ಹೆಚ್ಚು ಬಿತ್ತನೆಯಾಗಿದೆ.
ಪೂರ್ವ ಮುಂಗಾರು ಹಂಗಾಮಿನಲ್ಲಿ ಹೆಚ್ಚು ಮಳೆ ಸುರಿದಿದ್ದು, ನಂತರದ ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವ ಕಾರಣ ಇನ್ನೂ ಬಿತ್ತನೆ ಸರಿಯಾಗಿ ಆಗಿಲ್ಲ.
2023-24 ರಲ್ಲಿ ಈ ವೇಳೆಗೆ ಶೇ 19.63 ರಷ್ಟು ಬಿತ್ತನೆಯಾಗಿತ್ತು. 2024–25ನೇ ಸಾಲಿನಲ್ಲಿ ಶೇ 50.6ರಷ್ಟು ಬಿತ್ತನೆಯಾಗಿತ್ತು.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಶೇ 46.89 ಬಿತ್ತನೆಯಾಗಿದೆ. ನೀರಾವರಿ ಪ್ರದೇಶದಲ್ಲಿ 64 ಸಾವಿರ ಖುಷ್ಕಿ ಜಮೀನಿನಲ್ಲಿ 1.95 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.– ರತೇಂದ್ರನಾಥ ಸುಗೂರು, ಕೃಷಿ ಜಂಟಿ ನಿರ್ದೇಶಕ ಯಾದಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.