ಗುರುಮಠಕಲ್: ‘ನಮ್ಮವ್ವ ಭೂತಾಯಿ ರೈತರಿಗೆ ಎಂದೂ ಕೈಬಿಡಲ್ಲ. ಆದ್ರೆ ಪುಣ್ಯಾತ್ಮ ಮಳೆರಾಯನೇ ಸೇಡು ತೀರಿಸಿಕೊಳ್ಳುವ ಶತೃವಿನಂತೆ ಕಾಡ್ತಾನೆ, ಅವನದೇ ಚಿಂತಿ ನಮಗ. ಮಳೆ ಸರಿಯಾಗಿ ಅನುಕೂಲ ಮಾಡಿದ್ರೆ ರೈತರ ಕಷ್ಟ ತೀರ್ತಾವ’ ಎಂದಿದ್ದು ಹಿರಿಜೀವ ಮಾಣಿಕವ್ವ.
ವಾಡಿಕೆಗಿಂತ ಸುಮಾರು ಒಂದು ವಾರ ಮೊದಲೇ ರೋಹಿಣಿ ಮಳೆಯು ಉತ್ತಮವಾಗಿ ಸುರಿದಿದೆ. ಆದ್ದರಿಂದ ಮುಂಗಾರು ಹಂಗಾಮಿನ ಬಿತ್ತನೆ ಚಟುವಟಿಕೆಯೂ ಬೇಗನೇ ಆರಂಭಗೊಂಡಿದ್ದು, ಅಲ್ಲಲ್ಲಿ ಈಗಾಗಲೇ ಹೆಸರು, ತೊಗರಿ ಬಿತ್ತನೆ ಮಾಡಲಾಗಿದೆ. ಕೆಲವೆಡೆ ಬಿತ್ತನೆ ಕಾರ್ಯ ಬಿರುಸುಗೊಂಡಿದೆ.
ಮರುಣನಿಗೆ ಮೊರೆ: ‘ಈ ವರ್ಷ ರೋಣಿ ಮಳೆಯು ಉತ್ತಮವಾಗಿ ಸುರಿದಿದ್ದು, ಕೃಷಿ ಚಟುವಟಿಕೆಗಳಿಗೆ ಶುಭ ಸಂಕೇತವಾಗಲಿ. ಬೇಕಾದಾಗ ಬಾರದೆ, ಬಾರದ ಸಮಯಕ್ಕೆ ಬಂದು ನಷ್ಟವಾಗುವುದು ತಪ್ಪಿದರೆ, ಈ ವರ್ಷ ಉತ್ತಮ ಫಸಲು ಬೆಳೆಯುವ ಆಶೆ ಈಡೇರುತ್ತದೆ ಮತ್ತು ನಮ್ಮ ಸಾಲ, ಕಷ್ಟಗಳೂ ತೀರುತ್ತವೆ’ ಎನ್ನುತ್ತಾ ವರುಣನಿಗೆ ಮೊರೆಯಿಟ್ಟದ್ದು ಪ್ರಸಾದ, ಯಂಕಪ್ಪ, ಮೊಗುಲಾನ್.
ಹೆಸರು ಬೆಳೆಯ ನಿರೀಕ್ಷೆ: ತೊಗರಿ-ಹೆಸರು, ತೊಗರಿ-ಉದ್ದು, ಹೆಸರು, ಉದ್ದು ಬಿತ್ತನೆಗೆ ರೈತರು ಅಣಿಯಾಗಿದ್ದು, ಈ ವರ್ಷ ಹೆಸರು ಬೆಳೆಗೆ ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ್ದರಿಂದ, ಉತ್ತಮ ಬೆಳೆಯಾದರೆ ಮುಂದಿನ ಕೃಷಿ ಚಟುವಟಿಕೆಗೆ ಹೆಸರು ಬೆಳೆ ಕೈಹಿಡಿಯುವ ನಿರೀಕ್ಷೆ ಮತ್ತು ಕಳೆದ ವರ್ಷ ಮಳೆಯಿಂದಾದ ನಷ್ಟವನ್ನು ಸರಿದೂಗಿಸುವ ಲೆಕ್ಕಾಚಾರ ಅನ್ನದಾತನದ್ದು.
ಬಿತ್ತನೆ ಬೀಜ ವಿತರಣೆ: ತಾಲ್ಲೂಕಿನ ಗುರುಮಠಕಲ್ ರೈತ ಸಂಪರ್ಕ ಕೇಂದ್ರದಲ್ಲಿ ತೊಗರಿ ಬೀಜದ (ಟಿಎಸ್3ಆರ್/ಸಿಎಸ್ ತಳಿ) 100 ಕ್ವಿಂಟಲ್, ತೊಗರಿ (ಜಿ.ಆರ್.ಜಿ.-152/ಸಿಎಸ್ ತಳಿ) 25 ಕ್ವಿಂಟಲ್, ಹೆಸರು (ಬಿಜಿಎಸ್-9/ಸಿಎಸ್ ತಳಿ) 15 ಕ್ವಿಂಟಲ್, ಉದ್ದು (ಟಿಎಯು1 ತಳಿ) 3 ಕ್ವಿಂಟಲ್ ಹಾಗೂ ಕೊಂಕಲ್ ರೈತ ಸಂಪರ್ಕ ಕೇಂದ್ರದಿಂದ ತೊಗರಿ ಬೀಜದ 165 ಕ್ವಿಂಟಲ್, ತೊಗರಿ 25 ಕ್ವಿಂಟಲ್, ಹೆಸರು 4.05 ಕ್ವಿಂಟಲ್ ಬಿತ್ತನೆ ಬೀಜವನ್ನು ವಿತರಿಸಲಾಗಿದೆ.
ಪ್ರತಿ ವರ್ಷ ಬೀಜ ಖರೀದಿಸಬೇಕಿಲ್ಲ: ‘ರೈತರು ಪ್ರತಿ ವರ್ಷವೂ ಬೀಜ ಖರೀದಿಸುವ ಅವಶ್ಯಕತೆಯಿಲ್ಲ. ಒಮ್ಮೆ ಪಡೆದ ಬಿತ್ತನೆ ಬೀಜದಿಂದ ಬಂದ ಫಸಲಿನಲ್ಲೇ ಮುಂದಿನ ಮೂರು ವರ್ಷಗಳೂ ಬಿತ್ತನೆಗೆ ಬಳಸಬಹುದಾಗಿದೆ. ಆ ನಿಟ್ಟಿನಲ್ಲಿ ರೈತರು ಬಿತ್ತನೆ ಬೀಜದ ದಾಸ್ತಾನು ಮಾಡಿಕೊಳ್ಳಬಹುದು’ ಎಂದು ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ ತಿಳಿಸಿದರು.
ಈ ವರ್ಷ ರೋಣಿ (ರೋಹಿಣಿ ಮಳೆ) ಚೆನ್ನಾಗಿ ಸುರೀತು. ಹೆಸರು ತೊಗರಿ ಬಿತ್ತುತ್ತಿದ್ದೇವೆ. ನಮ್ಮದು ರೇಗಡಿ ಮಣ್ಣಾದ್ದರಿಂದ ಇನ್ನೂ ಒಂದು ವಾರ ಮಳೆಯಾಗದಿದ್ರೂ ನಡಿಯುತ್ತದೆ. ಆದರೆ ನಂತರ ಮಳೆ ಸುರಿಯದಿದ್ದರೆ ಸಮಸ್ಯೆಯಾಗಬಹುದುಹಣಮಂತ ಮನ್ನೆ ರೈತ
ರೈತರು ಯಾವುದೇ ಕಾರಣಕ್ಕೂ ಪೊಟ್ಟಣಗಳು ಕಟ್ಟಿದ ಬೀಜ ಲೇಬಲ್ ಇಲ್ಲದ ಪ್ಯಾಕೆಟ್ ಮತ್ತು ಅನಧಿಕೃತ ಮಾರಾಟಗಾರರಿಂದ ಬೀಜ ಖರೀದಿಸದಂತೆ ಎಚ್ಚರವಹಿಸಿ. ಜತೆಗೆ ಬೀಜ ಖರೀದಿಸಿದ ರಸೀದಿಯನ್ನು ಫಸಲು ಬರುವವರೆಗೂ ಕಾಯ್ದಿರಿಸಿ. ರೈತರು ಬೆಳೆಗಳಿಗೆ ರೋಗ-ರುಜಿನೆಗೆ ಸಂಬಂಧಿಸಿ ಸಹಾಯಕ್ಕೆ ಆರ್‌ಎಸ್‌ಕೆಗೆ ಸಂಪರ್ಕಿಸಬಹುದುಮಹಿಪಾಲರೆಡ್ಡಿ ಕೃಷಿ ಅಧಿಕಾರಿ ಕೊಂಕಲ್ ರೈತ ಸಂಪರ್ಕ ಕೇಂದ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.