ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಪೊಲೀಸ್ ಭದ್ರತೆ ಒದಗಿಸಿರುವುದು.
ಹುಣಸಗಿ (ಯಾದಗಿರಿ ಜಿಲ್ಲೆ): ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಬಳಿಕ ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯ ಪ್ರಮುಖ ಮೂರು ಗೇಟ್ ಬಳಿ ಪೋಲಿಸರ ಕಣ್ಗಾವಲು ಹೆಚ್ಚಿಸಲಾಗಿದೆ.
ಯಾದಗಿರಿ, ವಿಜಯಪುರ, ರಾಯಚೂರು ಪಾಯಿಂಟ್ ಬಳಿ ಹೆಚ್ಚಿನ ಪೊಲೀಸ್ ಭದ್ರತೆ ಮಾಡಲಾಗಿದೆ.
ಒಂದೊಂದು ಗೇಟ್ ಬಳಿ ಒಬ್ಬ ಪಿಎಸ್ಐ, 9 ಜನ ಪೊಲೀಸ್ ಸಿಬ್ಬಂದಿಗಳಿಂದ ಭದ್ರತೆ ಮಾಡಲಾಗಿದ್ದು, 24 ಗಂಟೆ ಎರಡು ಪಾಳೆಯದಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.
ಶಸ್ತ್ರಾಸ್ತ್ರ ಸಹಿತ ಭದ್ರತೆಯಲ್ಲಿರುವ ಪೋಲಿಸರ ಜತೆಗೆ ಡ್ಯಾಂ ಆವರಣದ ಬಳಿಯು ಸಿಸಿಟಿವಿ ಕ್ಯಾಮರಾಗಳ ಕಣ್ಗಾವಲು ಮಾಡಲಾಗಿದೆ.
ರಾಜ್ಯದಲ್ಲಿಯೇ ಅತಿ ಹೆಚ್ಚು ನೀರಾವರಿ ಕ್ಷೇತ್ರ ಹೊಂದಿರುವ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಗುರುವಾರದಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಸರ್ಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ನಿಗಮದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ನಾರಾಯಣಪುರ ಬಸವಸಾಗರ ಡ್ಯಾಂ ಡಿವಿಜನ್ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಬಿ.ಕೊಣ್ಣುರ ‘ಪ್ರಜಾವಾಣಿ’ ಜತೆ ಮಾತನಾಡಿ, ‘ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಯ ಗಡಿ ಭಾಗದಲ್ಲಿ ಜಲಾಶಯ ಮುಖ್ಯ ಗೇಟ್ ಸೇರಿದಂತೆ ಒಟ್ಟು ಮೂರು ಕೇಂದ್ರಗಳಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಈ ಮೊದಲು 12 ಜನ ಮೀಸಲು ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಜಲಾಶಯದ ಮುಖ್ಯ ದ್ವಾರದ ಬಳಿ ತೀವ್ರ ನಿಗಾ ವಹಿಸಲಾಗಿದೆ’ ಎಂದರು ಹೇಳಿದರು.
‘ಹಿರಿಯ ಅಧಿಕಾರಿಗಳ ಸೂಚನೆಯಂತೆ ಜಲಾಶಯಕ್ಕೆ ಸೂಕ್ತ ಭದ್ರತೆ ಒದಗಿಸಲಾಗಿದ್ದು, ಅಗತ್ಯ ಬಿದ್ದಲ್ಲಿ ತಕ್ಷಣವೇ ಮುಂದಿನ ಕ್ರಮ ಕೈಗೊಳ್ಳುವುದಾಗಿ’ ಹುಣಸಗಿ ಸಿಪಿಐ ರವಿಕುಮಾರ ನೈಕೋಡಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಡ್ಯಾಂ ಡಿವಿಜನ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಘವೇಂದ್ರ ಕುಲಕರ್ಣಿ, ವಿದ್ಯಾಧರ, ಬಾಲಚಂದ್ರ ಉಪಸ್ಥಿತರಿದ್ದರು.
ಯಾದಗಿರಿ, ವಿಜಯಪುರ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಯ ಬಹುತೇಕ ರೈತರಿಗೆ ಈ ಜಲಾಶಯ ಜೀವ ನಾಡಿಯಾಗಿದೆ. ಸದ್ಯ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯ ಮೂಲಕ ಇಂಡಿ ಶಾಖಾಕಾಲುವೆಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.