ADVERTISEMENT

ಕೊಡೇಕಲ್ಲ: ಸಂಭ್ರಮದ ಜೋಡು ಪಲ್ಲಕ್ಕಿ ಉತ್ಸವ

ಕಲಾವಿದರಿಂದ ಅಹೋರಾತ್ರಿ ಭಜನೆ, ಸಂಗೀತ ಕಾರ್ಯಕ್ರಮ: ಶಾಸಕ ರಾಜೂಗೌಡ ಸೇರಿ ಹಲವರು ಭಾಗಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 5:05 IST
Last Updated 18 ಏಪ್ರಿಲ್ 2022, 5:05 IST
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜೋಡು ಪಲ್ಲಕ್ಕಿ ಉತ್ಸವ ನಡೆಯಿತು
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜೋಡು ಪಲ್ಲಕ್ಕಿ ಉತ್ಸವ ನಡೆಯಿತು   

ಕೊಡೇಕಲ್ಲ (ಹುಣಸಗಿ): ಕಾಲಜ್ಞಾನಿ ಕೊಡೇಕಲ್ಲ ಬಸವಣ್ಣನವರ ಜೋಡು ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ನಡೆಯಿತು.

ಬಸವ ಪರಂಪರೆಯ ಪೀಠದ 15ನೇ ಪೀಠಾಧಿಪತಿ ಪೂಜ್ಯ ವೃಷಬೇಂದ್ರ ಅಪ್ಪನವರ ನೇತೃತ್ವದಲ್ಲಿ ಈ ಉತ್ಸವ ಜರುಗಿತು. ಶನಿವಾರ ರಾತ್ರಿ ಹುಣ್ಣಿಮೆಯಂದು ಜೋಡುಪಲ್ಲಕ್ಕಿಗಳಿಗೆ ಬಂಗಾರ ಹಾಗೂ ಬೆಳ್ಳಿಯ ಕಳಸಾರೋಹಣ ಹಾಗೂ ಅಷ್ಟವಿಧಾರ್ಚನೆ ಪೂಜೆ ನಡೆಯಿತು.

ಅಹೋರಾತ್ರಿ ಭಕ್ತರು ಹಾಗೂ ವಿವಿಧ ಕಲಾವಿದರಿಂದ ಭಜನೆ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆದವು.
ಭಾನುವಾರ ಬೆಳಿಗ್ಗೆ ಬಸವಣ್ಣನವರ ಐಕ್ಯ ಸ್ಥಳ (ಊರಾನ ಗುಡಿ) ರಾಜಗಟ್ಟೆಯ ಮೇಲೆ ಅಲಂಕಾರಿಸಲಾಗಿದ್ದ ಜೋಡು ಪಲ್ಲಕ್ಕಿಗಳಿಗೆ ವೃಷಬೇಂದ್ರ ಅಪ್ಪ ಹಾಗೂ ಅರಸು ಮನೆತನದ ರಾಜಾ ಜೀತೇಂದ್ರ ನಾಯಕ ಜಹಾಗೀರದಾರ ಹಾಗೂ ರಾಜಾ ವೆಂಕಟಪ್ಪ ನಾಯಕ ಜಹಾಗೀರದಾರ ಅವರು ಪೂಜೆ ಸಲ್ಲಿಸುವುದರ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

ADVERTISEMENT

ಭಕ್ತರು ಕೊಡೇಕಲ್ಲ ಬಸವಣ್ಣ ಮಹಾರಾಜಕೀ ಜೈ ಎಂದು ಘೋಷಣೆ ಕೂಗಿದರು.

ಜಿಲ್ಲೆ ಸೇರಿದಂತೆ, ಸುತ್ತಮುತ್ತಲಿನ ಜಿಲ್ಲೆಗಳ ಭಕ್ತರು ಜೋಡು ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ಭಕ್ತಿಯನ್ನು ಸಮರ್ಪಿಸಿದರು.

ದಾರಿಯುದ್ದಕ್ಕೂ ಹಾಗೂ ಮಾಳಿಗೆಯ ಮೇಲೆ ನಿಂತು ಉತ್ಸವವನ್ನು ವೀಕ್ಷಿಸಿದ ಮಹಿಳೆಯರು ಮಕ್ಕಳು ಹೂ, ಉತ್ತತ್ತಿ, ಬಾಳೆಹಣ್ಣು, ಎಸೆದು ತಮ್ಮ ಹರಕೆ ತೀರಿಸಿದರು.

ಜಾತ್ರೆಯಲ್ಲಿ ಹುಣಸಗಿ ತಾಲ್ಲೂಕು ಸೇರಿದಂತೆ ವಿಜಯಪುರ, ರಾಯಚೂರು, ಸೊಲ್ಲಾಪುರ ಜಿಲ್ಲೆ ಹಾಗೂ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.

ತಂಪು ಪಾನೀಯ ವ್ಯವಸ್ಥೆ: ಕೊಡೇಕಲ್ಲ ಗ್ರಾಮದ ಗೆಳೆಯರ ಬಳಗದ ಸದಸ್ಯರಾದ ಬಸವರಾಜ ಚಿನಿವಾಲ, ವಿಶ್ವನಾಥ, ಸಂಗಣ್ಣ ಇತರರು ಜಾತ್ರೆಗೆ ಆಗಮಿಸಿದ ಭಕ್ತರಿಗೆ ತಂಪು ಪಾನೀಯದ ವ್ಯವಸ್ಥೆ ಮಾಡಿದ್ದರು.

‘ಪಲ್ಲಕ್ಕಿ ಉತ್ಸವಕ್ಕೆ ಬಂದ ಭಕ್ತರಿಗೆ ಸುಮಾರು 10 ಸಾವಿರ ಲೀಟರ್ ಶರಬತ್ತು ಹಾಗೂ ಮಜ್ಜಿಗೆಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.