ಯಾದಗಿರಿ: ‘ಗ್ರಾಮ ಪಂಚಾಯಿತಿಗಳ ಹೊರಗುತ್ತಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸಬೇಕು. ಅದುವರೆಗೂ ಮಾಸಿಕ ಕನಿಷ್ಠ ₹ 36 ಸಾವಿರ ವೇತನ ನೀಡಬೇಕು ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ (ಸಿಐಟಿಯು ಸಂಯೋಜಿತ) 9ನೇ ರಾಜ್ಯ ಸಮ್ಮೇಳನ ಆಗ್ರಹಿಸಿ, ನಿರ್ಣಯ ಕೈಗೊಂಡಿದೆ.
ರಾಜ್ಯದ ನಾನಾ ಭಾಗದಿಂದ ಬಂದಿದ್ದ ಪ್ರತಿನಿಧಿಗಳ ಸಮ್ಮುಖದಲ್ಲಿ ಇದು ಸೇರಿದಂತೆ ಆರು ನಿರ್ಣಯ ಮಂಡಿಸಲಾಯಿತು. ಇದರೊಂದಿಗೆ ಮೂರು ದಿನದ ರಾಜ್ಯ ಸಮ್ಮೇಳನಕ್ಕೆ ಭಾನುವಾರ ತೆರೆಬಿತ್ತು.
ರಾಜ್ಯದಲ್ಲಿ ಹಿಂದುತ್ವ, ಕೋಮುವಾದ ಹಿಮ್ಮೆಟ್ಟಿಸಿ ಸೌಹಾರ್ದ, ಏಕತೆ ಉಳಿಸಬೇಕು. ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣ ನೀತಿಗಳನ್ನು ಹಿಮ್ಮೆಟ್ಟಿಸಬೇಕು. ಗ್ರಾಮ ಪಂಚಾಯಿತಿ ನೌಕರರಿಗೆ ಪಿಂಚಣಿ ಯೋಜನೆ ಜಾರಿ ಮಾಡಬೇಕು. ಸ್ವಚ್ಛತಾ ನೌಕರರನ್ನು ಪಂಚಾಯತಿ ನೌಕರರೆಂದು ಪರಿಗಣಿಸಿ ಕನಿಷ್ಠ ₹ 15 ಸಾವಿರ ವೇತನ ನೀಡಬೇಕು ಎಂಬ ನಿರ್ಣಯಗಳನ್ನು ಸರ್ಕಾರದ ಮುಂದೆ ಇರಿಸಿದರು.
ಪದಾಧಿಕಾರಿಗಳ ಆಯ್ಕೆ: ಸಂಘದ ರಾಜ್ಯ ಅಧ್ಯಕ್ಷರನ್ನಾಗಿ ಎಂ.ಬಿ.ನಾಡಗೌಡ ಅವರನ್ನು ಮುಂದುವರಿಸಲು ನಿರ್ಧರಿಸಲಾಯಿತು. ಉಪಾಧ್ಯಕ್ಷರಾಗಿ ಜಿ.ರಾಮಕೃಷ್ಣ, ಆರ್.ಎಸ್. ಬಸವರಾಜ, ಗೋಪಾಲಕೃಷ್ಣ ಹರಳಹಳ್ಳಿ, ಕೇಶವರಾವ ಕೋಲಾರ, ಮುತ್ತು ಪೂಜಾರ, ರೇಣುಕಾ ಪ್ರಸಾದ್, ಮಲಿಯಪ್ಪ, ಬಸವರಾಜ ದೊರೆ, ಪಾಪಣ್ಣ, ದಿನೇಶ್, ಹೊಳಬಸು ಮುದ್ನೂರ, ರುದ್ರಪ್ಪ ಕಂದಗಲ್, ಮಾರುತಿ ಸುಗ್ಗಾ ಹಾಗೂ ಶೋಭಾ ಪಾಂಡ್ರೆ ಅವರನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಜಿ.ಎಂ. ಜೈನ್‌ಖಾನ್ ಹಾಗೂ ಕಾರ್ಯದರ್ಶಿಗಳಾಗಿ ಸಿದ್ದರಾಜು ಚಾಮರಾಜನಗರ, ಚಂದ್ರಶೇಖರ ಬಡಿಗೇರ, ನೆಲ್ಲುಡಿ ರಾಜೇಸಾಬ್, ಲಾಲ್ ಅಹಮದ್, ಪಿ.ಭರತ, ಮಲ್ಲಿಕಾರ್ಜುನ ರಾಯಚೂರು, ಮಡೆಪ್ಪ ಭಜಂತ್ರಿ, ಬಿ.ಐ. ಈಳಿಗೇರ ಹಾಗೂ ರೇಖಾ, ಖಜಾಂಚಿಯಾಗಿ ಮಲ್ಲಿಕಾರ್ಜುನ ಬಳಿಚಕ್ರ ಅವರು ಆಯ್ಕೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.