ಅಕ್ಕಿ
ಯಾದಗಿರಿ: ಗುರುಮಠಕಲ್‌ನಲ್ಲಿನ ₹1.21 ಕೋಟಿ ಮೌಲ್ಯದ ಪಡಿತರ ಅಕ್ಕಿ ಅಕ್ರಮ ದಾಸ್ತಾನ ಪ್ರಕರಣದ ತನಿಖೆಯನ್ನು ಡಿವೈಎಸ್‌ಪಿಯೊಬ್ಬರಿಗೆ ವಹಿಸಲಾಗಿದ್ದು, ಶೀಘ್ರವೇ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನರೇಂದ್ರ ರಾಠೋಡ ಹಾಗೂ ಅಯ್ಯಪ್ಪ ರಾಠೋಡ ಅವರಿಗೆ ಸೇರಿದ ಲಕ್ಷ್ಮಿ ವೆಂಕಟೇಶ್ವರ ಮತ್ತು ಲಕ್ಷ್ಮಿ ಬಾಲಾಜಿ ಇಂಡಸ್ಟ್ರೀಸ್ ಮಿಲ್‌ಗಳಲ್ಲಿ 3,985 ಕ್ವಿಂಟಲ್ ಅಕ್ರಮ ಪಡಿತರ ಅಕ್ಕಿ ಪತ್ತೆಯಾಗಿತ್ತು. ನಾಲ್ವರ ವಿರುದ್ಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಿಲ್‌ನಲ್ಲಿ ಡೈರಿ ಪತ್ತೆಯಾಗಿದ್ದು, ಅದರಲ್ಲಿ 18ರಿಂದ 20 ಪುಟಗಳಲ್ಲಿ ಅಂಕಿಸಂಖ್ಯೆಗಳಿವೆ. ಮಿಲ್‌ನಿಂದ ಯಾವೆಲ್ಲ ನೋಂದಣಿಯ ಲಾರಿಗಳಲ್ಲಿ ಅಕ್ಕಿಗಳನ್ನು ಸಾಗಿಸಲಾಗಿದೆ ಎಂಬುದರ ಮಾಹಿತಿ ಇದೆ. ಹೊರ ರಾಜ್ಯಗಳಿಗೆ ಹೋಗಿರುವ ಅನುಮಾನವಿದೆ. ತನಿಖೆಯಿಂದ ಅಕ್ರಮದ ಹಿಂದಿರುವ ಜಾಲ ಹಾಗೂ ನಿಜಾಂಶವೂ ಗೊತ್ತಾಗಲಿದೆ. ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿಸಿವೆ.
ಮಿಲ್‌ನಲ್ಲಿ ಪತ್ತೆಯಾಗಿರುವ ಡೈರಿ ಸೇರಿ ಇತರೆ ದಾಖಲೆಗಳು, ಅಕ್ಕಿ ಮೂಟೆಗಳ ಮೇಲಿನ ಉತ್ಪನ್ನಗಳ ಪರಿಶೀಲನೆ, ಸಂಬಂಧಪಟ್ಟವರು ವಿಚಾರಣೆಯೂ ನಡೆಯಲಿದೆ ಎಂದು ಹೇಳಿವೆ. ಉನ್ನತ ಮಟ್ಟದ ತನಿಖೆಗೆ ವಹಿಸುವ ಚಿಂತನೆ: ಕಂದಾಯ, ಆಹಾರ, ಪೊಲೀಸ್, ಪರಿಸರ ಮಾಲಿನ್ಯ, ವಾಣಿಜ್ಯ ಸೇರಿದಂತೆ ಇತರೆ ಇಲಾಖೆಗಳು ಜಂಟಿಯಾಗಿ ದಾಳಿ ಮಾಡಿದ್ದವು. ಬಹುಕೋಟಿ ಮೌಲ್ಯದ ಅಕ್ಕಿ ಪತ್ತೆಯಾಗಿದ್ದರಿಂದ ಪ್ರಕರಣದ ತನಿಖೆಯನ್ನು ಉನ್ನತ ಮಟ್ಟದ ಸಮಿತಿಗೆ ವಹಿಸುವ ಚಿಂತನೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.
‘ಜಿಲ್ಲಾಡಳಿತವು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಲ್ಲಿಕೆ ಮಾಡಲಿದೆ. ಅಂತಿಮವಾಗಿ ಉನ್ನತ ಮಟ್ಟದ ತನಿಖೆಯನ್ನು ಆಹಾರ ಇಲಾಖೆ ನಿರ್ಧರಿಸಬೇಕಾಗುತ್ತದೆ. ನಾವು ನಮ್ಮ ಕಾರ್ಯವನ್ನು ಮಾಡುತ್ತೇವೆ’ ಎಂದು ತಿಳಿಸಿವೆ.
ಶಹಾಪುರ ತಾಲ್ಲೂಕಿನ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಉಗ್ರಾಣದಲ್ಲಿ ಇರಿಸಿದ್ದ 6,077ಕ್ವಿಂಟಲ್ ಪಡಿತರ ಅಕ್ಕಿ ನಾಪತ್ತೆ ಆಗಿದ್ದ ಬಳಿಕ ಮತ್ತೊಂದು ಬಹುಕೋಟಿ ರೂಪಾಯಿ ಪ್ರಕರಣ ನಡೆದಿದೆ. ಈ ಪ್ರಕರಣದ ತನಿಖೆಯಲ್ಲಿ ಬಹಳಷ್ಟು ಆರೋಪಗಳು ಕೇಳಿಬಂದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.