ಯಾದಗಿರಿ: ‘ಜನರ ಸಮಸ್ಯೆಗಳ ಕುರಿತು ವರದಿ ಮಾಡುವ ಮೂಲಕ ಪತ್ರಕರ್ತರು ಸಮಾಜದ ಬೆನ್ನೆಲುಬಾಗಿದ್ದಾರೆ. ವೈಯುಕ್ತಿಕ ಜೀವನ ಬದಿಗಿಟ್ಟು ನಿತ್ಯ ಕೆಲಸ ಮಾಡುತ್ತಾರೆ. ಅವರ ಸೇವೆ ಅನನ್ಯ’ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಪತ್ರಿಕೋದ್ಯಮ ಸಮಾಜದ 4ನೇ ಅಂಗವಾಗಿದೆ. ಸಮಾಜಮುಖಿ ಕಾರ್ಯಗಳಲ್ಲಿ ಪತ್ರರ್ತರ ಕೊಡುಗೆ ಅಪಾರವಾಗಿದೆ. ಧ್ವನಿಯಿಲ್ಲದವರ ಪರವಾಗಿ ಪತ್ರಕರ್ತರು ನಿಲ್ಲಬೇಕು’ ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ಮಾತನಾಡಿ, ‘ತನಿಖಾ ಪತ್ರಿಕೋದ್ಯಮ ವ್ಯಾಪಕವಾಗಿಲ್ಲ. ನೈಜ ವರದಿಗಳನ್ನು ಬಿತ್ತರಿಸುವಂತಹ ಕೆಲಸ ಪತ್ರಕರ್ತರ ಮಾಡುವುದು ಇದೀಗ ತುಂಬ ಅಗತ್ಯವಿದೆ’ ಎಂದು ಹೇಳಿದರು.
ಡಿಡಿಯು ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಭೀಮಣ್ಣ ಮೇಟಿ ಮಾತನಾಡಿ, ‘ಪತ್ರಕರ್ತರು ಯಾವಾಗಲೂ ಸತ್ಯದ ಪರವಾಗಿ ಇರಬೇಕಿದೆ. ಇದರಿಂದಾಗಿ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
ಹಾಸ್ಯ ಕಲಾವಿದ ಬಸವರಾಜ ಮಾಮನಿ ಮಾತನಾಡಿ, ‘ಪತ್ರಕರ್ತರು ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಹ ವರದಿ ಮಾಡಿದಾಗ ನನಗೆ ಆ ಬಗ್ಗೆ ಹೆಮ್ಮೆ ಎನಿಸುತ್ತದೆ’ ಎಂದು ಹೇಳಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಭವಾನಿಸಿಂಗ್ ಠಾಕೂರು ಮಾತನಾಡಿದರು. ಸಂಘದ ರಾಜ್ಯ ಪರಿಷತ್ತಿನ ಸದಸ್ಯ ರಾಘವೇಂದ್ರ ಕಾಮನಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಾರ್ತಾ ಇಲಾಖೆಯಲ್ಲಿ ವಾಹನ ಚಾಲಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ ಗುರುನಾಥ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಅಳ್ಳಳ್ಳಿ, ಜೆಡಿಎಸ್ ಯುವ ಮುಖಂಡ ಬಂದಪ್ಪ ಅರಳಿ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಕಲಾಲ ಭಾಗವಹಿಸಿದ್ದರು. ಪತ್ರಕರ್ತ ನರಸಪ್ಪ ನಾರಾಯಣನೋರ್ ಸ್ವಾಗತಿಸಿದರು. ವಿಶಾಲ್ ದೋರನಹಳ್ಳಿ ವಂದಿಸಿದರು.
ಪತ್ರಿಕೋದ್ಯಮ ಜಾತಿಯ ಆಧಾರದ ಮೇಲೆ ಧರ್ಮದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವುದು ಸರಿಯಲ್ಲ– ಶರಣಪ್ಪ ಮಾನೇಗಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ
ಶೀಘ್ರದಲ್ಲಿಯೇ ಜಿಲ್ಲಾ ಕೇಂದ್ರದ 36 ಜನ ಪತ್ರಕರ್ತರಿಗೆ ನಗರಸಭೆ ವತಿಯಿಂದ ನಿವೇಶನ ಮಂಜೂರಾಗಿ ಆಗಲಿವೆ–ಮಲ್ಲಪ್ಪ ಸಂಕೀನ್ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.