ಯಾದಗಿರಿ: ತಾಲ್ಲೂಕಿನ ವರ್ಕನಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ಖಂಡಿಸಿ, ಅಧಿಕಾರಿಯನ್ನು ಅಮಾನತು ಗೊಳಿಸುವಂತೆ ಆಗ್ರಹಿಸಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ಮಾಡಲಾಯಿತು.
ನಗರದ ಸುಭಾಷ ವೃತ್ತದಲ್ಲಿ ಮಂಗಳವಾರ ಜಮಾಯಿಸಿದ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವೇಳೆ ಮಾತನಾಡಿದ ಮುಖಂಡರು, ತಾಲ್ಲೂಕಿನ ವರ್ಕನಳ್ಳಿ ಗ್ರಾ.ಪಂ.ಯಲ್ಲಿ 15ನೇ ಹಣಕಾಸು ಯೋಜನೆಯಡಿ ಕೆಲಸ ಮಾಡದೇ ನಕಲಿ ದಾಖಲೆ ಸೃಷ್ಟಿಸಿ ಅವ್ಯವಹಾರ ಎಸಗಿದ್ದು, ಸದರಿ ಬೋಗಸ್ ಮಾಡಿದ ಕಾಮಗಾರಿ ಮಾಡಿದ್ದಾರೆ ಎಂದು ಆರೋಪಿಸಿದರು.
ಗ್ರಾಮದ ಎಸ್‌ಟಿ ಓಣಿಯಲ್ಲಿ ಕೊಳವೆಬಾವಿ ಶಾಸಕರ ಅನುದಾನದಲ್ಲಿ ಆಗಿದ್ದು, ಇದರ ಮೇಲೆಯೇ 15 ಹಣಕಾಸು ಯೋಜನೆಯಡಿ ಸುಳ್ಳು ದಾಖಲೆ ಸೃಷ್ಟಿಸಿ ₹1.90 ಲಕ್ಷ ಹಣ ದುರ್ಬಳಕೆ ಮಾಡಿದ್ದಾರೆ. ಎಸ್‌ಸಿ ಓಣಿಯ ಹಳೆಯ ಪೈಪ್‌ಲೈನ್ ಕಾಮಗಾರಿ ಮೇಲೆ ಪ್ರಸಕ್ತ ಸಾಲಿನಲ್ಲಿ 2020-21 ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಹಣ ದುರ್ಬಳಕೆ ಮಾಡಿದ್ದಾರೆ ಎಂದರು.
ವರ್ಕನಳ್ಳಿ ಗ್ರಾಮದಿಂದ ತಾಂಡಾದವರೆಗೆ ಜಂಗಲ್ ಕಟಿಂಗ್ ಕೆಲಸ ಮಾಡದೇ ತೆರಿಗೆ ರೂಪದಲ್ಲಿ ಹಣ ಪಾವತಿಸಿರುತ್ತಾರೆ. ವರ್ಕನಳ್ಳಿ ಸಿಸಿ ಡ್ರೇನ್ ಕಾಮಗಾರಿ ಮಾಡುವ ಬದಲು ಹಳೆಯ ಕೆಲಸದ ಮೇಲೆ ಬಿಲ್ ಮಾಡಿದ್ದಾರೆ. ಗುರುದೇವ್ ಹಾರ್ಡವೇರ್ ಏಜೆನ್ಸಿಗೆ ಹಂತ ಹಂತವಾಗಿ ₹9 ಲಕ್ಷ ಹಣ ಪಾವತಿ ಮಾಡಿರುತ್ತಾರೆ ಎಂದು ವಿವರಿಸಿದರು.
ಸಂಬಂಧಿಸಿದ ಅಧಿಕಾರಿಗಳು 14 ಮತ್ತು 15 ನೇ ಹಣಕಾಸು ಯೋಜನೆಯ ಕಾಮಗಾರಿಗಳ ಸ್ಥಳಗಳು, ದಾಖಲೆ ಪರಿಶೀಲಿಸಿ, ತನಿಖಾ ತಂಡ ರಚಿಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. 2021-22 ನೇ ಸಾಲಿನ 15ನೇ ಹಣಕಾಸು ಕ್ರಿಯಾ ಯೋಜನೆ ಇ-ಸ್ವರಾಜ್ ಮಾಡದೇ ತಡೆಹಿಡಿಯಬೇಕೆಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಬಿರೇಶ ಚಿರತೆನೋರ, ಹೊನ್ನಪ್ಪ ಎಂ.ಮುಷ್ಟೂರ, ಭೀಮರಾಯ ಭಂಡಾರಿ, ಮಲ್ಲಿಕಾರ್ಜುನ ತಡಬಿಡಿ, ಶಿವು ಬೆಂಕಿ, ಸೈದಪ್ಪ ಕಣಜಿಕರ್, ಅಂಜಪ್ಪನಾಯಕ, ಯಲ್ಲಾಲಿಂಗ ಗೂಡೂರ, ನಾಗು ಸಂಗವಾರ, ನಿತೀಶ ಕುರಕುಂದಿ, ಅಶೋಕ ಕರಾಟೆ, ಅಶೋಕ ಐಕೂರ ಮಲ್ಲಿಕಾರ್ಜುನ ಮೇಟಿ, ನಿಜಾಮುದ್ದೀನ್, ರೆಡ್ಡಿ ಬಂದಳ್ಳಿ, ಸಾಬು ಬಂದಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.