ADVERTISEMENT

ಯಾದಗಿರಿ ನಗರಸಭೆ ವಾರ್ಡ್‌ ಸದಸ್ಯರಿಗೆ ಕಾಮಗಾರಿ ಮಾಹಿತಿ ನೀಡಲು ಆಗ್ರಹ

ಯಾದಗಿರಿ ನಗರಸಭೆ ಪ್ರಥಮ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 1:42 IST
Last Updated 12 ಫೆಬ್ರುವರಿ 2021, 1:42 IST
ಯಾದಗಿರಿ ನಗರಸಭೆ ಪ್ರಥಮ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ವಿಲಾಸ ಪಾಟೀಲ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು
ಯಾದಗಿರಿ ನಗರಸಭೆ ಪ್ರಥಮ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ವಿಲಾಸ ಪಾಟೀಲ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು   

ಯಾದಗಿರಿ: ‘ನಗರದ 31 ವಾರ್ಡ್‌ಗಳಲ್ಲಿ ಸದಸ್ಯರಿಗೆ ಮಾಹಿತಿ ಇಲ್ಲದೆ ಹಲವಾರು ಕಾಮಗಾರಿಗಳು ನಡೆಯುತ್ತವೆ. ಅವುಗಳ ಬಗ್ಗೆ ಯಾವ ಅಧಿಕಾರಿಗಳೂ ಮಾಹಿತಿ ನೀಡುವುದಿಲ್ಲ. ಇದರಿಂದ ನಾವು ಜನರಿಂದ ಆಯ್ಕೆಯಾಗಿದ್ದರೂ ನಮಗೆ ಬೆಲೆ ಇಲ್ಲದಂತಾಗಿದೆ’ ಎಂದು ನಗರಸಭೆ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಧ್ಯಕ್ಷ ವಿಲಾಸ ಪಾಟೀಲ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ನಗರಸಭೆಯ ಪ‍್ರಥಮ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

‘ನಮಗೆ ಮಾಹಿತಿ ಇಲ್ಲದೆ ಇರುವುದರಿಂದ ನಮ್ಮ ವಾರ್ಡ್‌ನಲ್ಲಿ ಯಾವ ಅಭಿವೃದ್ಧಿ ಕಾಮಗಾರಿ ಆಗುತ್ತದೆ ಎನ್ನುವುದೇ ನಮಗೆ ತಿಳಿಯುವುದಿಲ್ಲ. ಇದರಿಂದ ಆಯಾ ವಾರ್ಡ್‌ನ ಸದಸ್ಯರಿಗೆ ಇನ್ನು ಮುಂದೆ ಕಡ್ಡಾಯವಾಗಿ ಮಾಹಿತಿ ನೀಡಬೇಕು’ ಎಂದು ಒಕ್ಕೊರಲವಾಗಿ ಆಗ್ರಹಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಪ್ರಭಾರಿ ಪೌರಾಯುಕ್ತ ಬಕ್ಕಪ್ಪ ಹೊಸಮನಿ, ‘ಇನ್ನು ಮುಂದೆ ಎಲ್ಲ ಸದಸ್ಯರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದು ತಿಳಿಸಿದರು.

‘ನಗರಸಭೆಯಲ್ಲಿ ಮೊದಲೇ ಸಿಬ್ಬಂದಿ ಕೊರತೆ ಇದೆ. ಇಂಥದರಲ್ಲಿ ಎಫ್‌ಡಿಎ ರಮೇಶ ಅವರು ಬಂದು ಎರಡು ತಿಂಗಳಾದರೂ ಜವಾಬ್ದಾರಿ ನೀಡದಿದ್ದರೆ ಕೆಲಸಗಳು ಹೇಗೆ ಆಗುತ್ತವೆ’ ಎಂದು ಸದಸ್ಯ ಅಂಬಯ್ಯ ಶಾಬಾದಿ ಪೌರಾಯುಕ್ತರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಬಕ್ಕಪ್ಪ, ‘ರಮೇಶ ಅವರಿಗೆ ಜವಾಬ್ದಾರಿ ವಹಿಸಿಕೊಡಲಾಗುವುದು. ಹಿಂದಿನಿಂದ ಕೆಲವರು ತಮ್ಮ ಹುದ್ದೆಗೆ ತಕ್ಕಂತೆ ಕಾರ್ಯನಿರ್ವಹಣೆ ಮಾಡುತ್ತಿಲ್ಲ. ಇದು ಹಿಂದಿನಿಂದ ನಡೆದುಕೊಂಡು ಬಂದಿದೆ. ಆಯಾ ಹುದ್ದೆಗಳಿಗೆ ನೇಮಕವಾದವರನ್ನು ಹುದ್ದೆಗೆ ಕಳುಹಿಸಲಾಗುವುದು’ ಎಂದು ತಿಳಿಸಿದರು.

ಸದಸ್ಯ ಹಣಮಂತ ಇಟಗಿ ಮಾತನಾಡಿ, ‘ನಮ್ಮ ವಾರ್ಡ್‌ನ ಲಕ್ಷ್ಮಿನಗರದಲ್ಲಿ 8 ದಿನಗಳಲ್ಲಿ ಬೀದಿ ದೀಪಗಳು ಸುಟ್ಟುಹೋಗುತ್ತಿವೆ. ಇದರಿಂದ ನಮ್ಮ ಏರಿಯಾದಲ್ಲಿ ಕತ್ತಲು ಆವರಿಸುತ್ತದೆ. ಸರಿಯಾಗಿನಿರ್ವಹಣೆ ಮಾಡದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರು.

ಸದಸ್ಯರಾದ ವೆಂಕಟರೆಡ್ಡಿ ವನಕೇರಿ, ಹಣಮಂತನಾಯಕ ಮಾತನಾಡಿ, ‘ನಗರದ ಪ್ರಮುಖ ವೃತ್ತಗಳಲ್ಲಿ ಹೈಮಾಸ್ಟ್‌ ದೀಪಗಳನ್ನು ದುರಸ್ತಿ ಮಾಡಬೇಕು. ನಿರ್ವಹಣೆ ಕೊರತೆಯಿಂದ ಹಲವಾರು ಕಡೆ ದೀಪಗಳು ಬೆಳಗುತ್ತಿಲ್ಲ. ಜೊತೆಗೆ ನೀರಿನ ಪೈಪ್‌ ಕಾಮಗಾರಿ ಮಾಡಲು ರಸ್ತೆ ಹಾಳು ಮಾಡಿದ್ದಾರೆ. ಇದರಿಂದ ರಸ್ತೆಯಲ್ಲಿ ತಗ್ಗು ಗುಂಡಿ ಬಿದ್ದಿದೆ. ಇದನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

ಸಭೆಯ ನಡುವೆ ವಿದ್ಯುತ್‌ ಕೈಕೊಟ್ಟಿತು. ಇದರಿಂದ ವಿರೋಧ ಪಕ್ಷದ ಸದಸ್ಯರು ನಗರಸಭೆಯಲ್ಲಿ ಕರೆಂಟ್‌ ಹೋದರೆ ಜನರೇಟರ್‌ ವ್ಯವಸ್ಥೆ ಇಲ್ಲ. ಕತ್ತಲಲ್ಲಿ ಸಭೆ ನಡೆಸಬೇಕಾಗಿದೆ. ಜರೂರಾಗಿ ನಗರಸಭೆಗೆ ಜನರೇಟರ್‌ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಸದಸ್ಯೆ ಲಲಿತಾ ಅನಪುರ ಮಾತನಾಡಿ, ‘ನಗರದಲ್ಲಿ ಮಹಿಳಾ ಸಾಂತ್ವನ ಕೇಂದ್ರ ನಿರ್ಮಿಸಬೇಕು. ಯಾವ ಅನುದಾನದಲ್ಲಿಯಾದರೂ ಅದನ್ನು ನಿರ್ವಹಣೆ ಮಾಡಲು ಸಿಬ್ಬಂದಿ ನೇಮಿಸಬೇಕು’ ಎಂದರು.

ಈ ಸಭೆಯಲ್ಲಿ ಪ್ರಸ್ತಾಪ ಮಾಡಿದ ವಿಷಯಗಳನ್ನು ಮುಂದಿನ ಸಭೆಯೊಳಗೆ ಅಭಿವೃದ್ಧಿ ಕೆಲಸಗಳು ಆಗಬೇಕು ಎಂದು ಸರ್ವ ಸದಸ್ಯರು ಆಗ್ರಹಿಸಿದರು.

ಒಮ್ಮತದ ನಿರ್ಧಾರ: ಬಸವೇಶ್ವರ, ಡಾ.ಜಗಜೀವನರಾಂ, ವಿಶ್ವನಾಥರೆಡ್ಡಿ ಮುದ್ನಾಳ, ನಿಜಶರಣ ಅಂಬಿಗರ ಚೌಡಯ್ಯ, ಮಹರ್ಷಿ ವಾಲ್ಮೀಕಿ ಮೂರ್ತಿ ಸ್ಥಾಪನೆ ಕುರಿತು ಸದಸ್ಯರ ಒಮ್ಮತ ನಿರ್ಧಾರ ಮಾಡಲಾಯಿತು.

ಕಟ್ಟಡ, ಖಾತಾ ನಕಲು, ವ್ಯಾಪಾರ ‍ಪರವಾನಗಿ ದರ ಹೆಚ್ಚಳ ಮಾಡಲು ಸರ್ವ ಸದಸ್ಯರು ಒಪ್ಪಿಗೆ ನೀಡಿ ಅನುಮೋದಿಸಿದರು.ಇದೇ ವೇಳೆ ಮಟನ್‌ ಮಾರುಕಟ್ಟೆ ಮಳಿಗೆಗಳ ದರ ಕಡಿಮೆ ಇದ್ದು, ಇದನ್ನು ಹೆಚ್ಚಳ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್‌, ಸದಸ್ಯರಾದ ಅಸದ್ ಚವೂಸ್‌, ಮನಸೂರ ಅಹ್ಮದ್‌ ಅಫಘಾನಿ, ಸುರೇಶ ಅಂಬಿಗೇರ, ಚನ್ನಕೇಶವಗೌಡ ಬಾಣತಿಹಾಳ, ಶಾಹಿಸ್ತಾ ಅಬ್ದುಲ್‌ ವಾಹಬ್‌, ಗಣೇಶ ದುಪ್ಪಲ್ಲಿ, ಸ್ವಾಮಿದೇವ ಎಚ್‌ ದಾಸನಕೇರಿ, ಗೋಪಾಲ ಭೀಮಪ್ಪ ದಾಸನಕೇರಿ, ಮಂಜುನಾಥ ದಾಸನಕೇರಿ, ನಾಮನಿರ್ದೇಶಿತ ಸದಸ್ಯರು ಇದ್ದರು.

***

‘ಮೊದಲೇ ತಿಳಿಸಬೇಕು’

ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ವಿಲಾಸ ಪಾಟೀಲ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಮಾಡುವ ಕುರಿತಂತೆ ಚರ್ಚೆ ನಡೆಯಬೇಕು ಎನ್ನುತ್ತಿದ್ದಂತೆ ಆಡಳಿತ, ವಿರೋಧ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸಾಮಾನ್ಯ ಸಭೆಯಲ್ಲಿ ಯಾವ ವಿಷಯಗಳನ್ನು ಚರ್ಚಿಸಬೇಕು ಎನ್ನುವುದನ್ನು ಮೊದಲೇ ಪಟ್ಟಿ ಮಾಡಿ ಸದಸ್ಯರಿಗೆ ತಿಳಿಸಬೇಕು. ಇದು ಪೂರ್ವಭಾವಿ ಸಭೆಯಂತೆ ಕಾಣುತ್ತದೆ. ಹೀಗಾಗಿ ಮುಂದಿನ ಬಾರಿ ಸಾಮಾನ್ಯ ಸಭೆಯಲ್ಲಿ ಚರ್ಚಿಸುವ ವಿಷಯಗಳನ್ನು ಮುಂಚಿತವಾಗಿ ತಿಳಿಸುವಂತೆ ತಿಳಿಸಿದರು.

***

ನಗರದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಮಾರ್ಚ್‌ ಒಳಗೆ ಮುಗಿಯಬೇಕು. ಇಲ್ಲದಿದ್ದರೆ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ. ನಗರ ನಿವಾಸಿಗಳಿಗೆ ಸೌಲಭ್ಯ ಕಲ್ಪಿಸಿ

ವಿಲಾಸ ಪಾಟೀಲ, ನಗರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.