ADVERTISEMENT

ನಶೆಯಲ್ಲಿ ಮುಳುಗಿದೆ ಯುವಜನ: ಮಹಾರಾಷ್ಟ್ರ ನಿವಾಸಿಯಿಂದ ಸೈಕಲ್ ಸವಾರಿ ಮೂಲಕ ಜಾಗೃತಿ

7 ತಿಂಗಳಲ್ಲಿ 21,250 ಕಿ.ಮೀ. ಸೈಕಲ್ ಸವಾರಿ 

ಎಂ.ಪಿ.ಚಪೆಟ್ಲಾ
Published 29 ನವೆಂಬರ್ 2022, 7:00 IST
Last Updated 29 ನವೆಂಬರ್ 2022, 7:00 IST
ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದ ಹೊರವಲಯದ ವಿಜಾಪುರ-ಹೈದರಾಬಾದ್ ಹೆದ್ಧಾರಿಯಲ್ಲಿ ಸೋಮವಾರ ಸೈಕಲ್ ಸವಾರಿ ಮೂಲಕ ನಡೆಸಿದ ದಿಲೀಪ ಭರತ ಮಾಲಿಕ್
ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದ ಹೊರವಲಯದ ವಿಜಾಪುರ-ಹೈದರಾಬಾದ್ ಹೆದ್ಧಾರಿಯಲ್ಲಿ ಸೋಮವಾರ ಸೈಕಲ್ ಸವಾರಿ ಮೂಲಕ ನಡೆಸಿದ ದಿಲೀಪ ಭರತ ಮಾಲಿಕ್   

ಗುರುಮಠಕಲ್: ದೇಶವೆಂದರೆ ಜನರ ಜೀವಂತಿಕೆ. ಯುವ ಜನರು ದೇಶದ ಆಸ್ತಿಯಾಗಿದ್ದಾರೆ. ಆದರೆ, ಯುವ ಸಮೂಹ 'ನಶೆ'ಯಲ್ಲಿ ಮುಳುಗುತ್ತಿರುವುದು ಆತಂಕದ ಸಂಗತಿಯಾಗಿದೆ. ದೇಶದ ಸಂಪತ್ತು ಹಾಳಾಗಬಾರದು ಎಂದು ನಾನು ದಕ್ಷಿಣ ಭಾರತವನ್ನು ಸೈಕಲ್‌ ಸವಾರಿ ಮೂಲಕ ಸುತ್ತುತ್ತಿದ್ದೇನೆ. ಕರ್ನಾಟಕ, ತಮಿಳುನಾಡು, ಕೇರಳ, ಆಂದ್ರ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿ ಸೈಕಲ್ ಸವಾರಿ ಮಾಡುತ್ತಿದ್ದೇನೆ..

ಇವು ಮಹಾರಾಷ್ಟ್ರದ ನಾಗಪುರ ನಗರದ ಮಹಲ್ ಗಂಗಾಬಾಯಿ ಘಾಟ್ ನಿವಾಸಿ ದಿಲೀಪ ಭರತ ಮಾಲಿಕ್‌ ಅವರ ಮಾತುಗಳು.

ಹೈದರಾಬಾದ್ ನಗರದಿಂದ ಕರ್ನಾಟಕ ಪ್ರವೇಶಿಸಿದ 55 ವರ್ಷದ ದಿಲೀಪ ಅವರು ತಾಲ್ಲೂಕಿನ ಕಂದಕೂರ ಗ್ರಾಮದ ಹೊರವಲಯದಲ್ಲಿ 'ಪ್ರಜಾವಾಣಿ' ಜತೆಗೆ ಮಾತಿಗಿಳಿದರು.

ADVERTISEMENT

ಚೀನಾ ಮುಂಬರುವ ದಿನಗಳಲ್ಲಿ ವೃದ್ಧರ ದೇಶವಾಗುವ ಆತಂಕ ಎದುರಿಸುತ್ತಿದೆ. ಹಾಗೆಯೇ ಭಾರತ ಅನಾರೋಗ್ಯ ಪೀಡಿತ ಜನರ ದೇಶವಾಗುವ ಆತಂಕ ಎದುರಾಗಿದೆ. ದುಶ್ಚಟಗಳ ವಿಷಯದಲ್ಲಿ ಯುವ ಸಮೂಹ ಸಮೂಹಸನ್ನಿಗೆ ಒಳಗಾದಂತೆ ತೋರುತ್ತದೆ ಎಂದು ಕಳವಳದಿಂದ ತಮ್ಮ ಸೈಕಲ್ ಸವಾರಿಯ ಹಿನ್ನಲೆ ವಿವರಿಸಿದರು.

ಪ್ರಸಕ್ತ ಗಣರಾಜ್ಯೋತ್ಸವದಂದು ನಾಗಪುರದಿಂದ ಮೊದಲಬಾರಿ ಸೈಕ್ಲಿಂಗ್ ಆರಂಭಿಸಿ, 7 ತಿಂಗಳಲ್ಲಿ 21,250 ಕಿ.ಮೀ. ಜಾಗೃತಿ ಕಾರ್ಯವನ್ನು ಮುಗಿಸಿದ್ದೇನೆ. ಅದರಿಂದ ಸ್ವಲ್ಪ ಸಮಾಧಾನವೆನ್ನಿಸಿತು. ಮತ್ತೆ ಸೆಪ್ಟೆಂಬರ್ ಮೊದಲವಾರದಿಂದ ಎರಡನೇ ಸವಾರಿ ಕೈಗೊಂಡಿದ್ದೇನೆ ಎಂದು ತಿಳಿಸಿದರು.

ನಾಗಪುರದಿಂದ ಬುಂದಿಯಾ, ತುಂಸರ್, ಚತ್ತೀಸಘಡ, ರಾಯಪುರ, ಸಂಬಲ್ಪುರ, ವಿಶಾಖಪಟ್ಟಣ, ಚನ್ನೈ, ರಾಮೇಶ್ವರಂ, ಕನ್ಯಾಕುಮಾರಿ, ಮಂಡಿ, ಸೇಲಂ, ಕೊಯ್ಯಿಕುರಂ, ಕೊಚ್ಚಿ, ಮೈಸೂರು, ಊಟಿ, ಉಡುಪಿ, ಹೈದರಾಬಾದ್ ಮೂಲಕ ಗುರುಮಠಕಲ್ ತಲುಪಿದ್ದೇನೆ. ಮುಂದೆ ವಿಜಯಪುರ, ಹುಬ್ಬಳ್ಳಿ, ಗೋವಾ, ಅಂಕೋಲಾ, ಸೋಲಾಪುರ ಮೂಲಕ ನಾಗಪುರ ಸೇರುವ ಯೋಜನೆಯಿದೆ. ನಶಾಮುಕ್ತ ಭಾರತ, ಪರಿಸರ ಮಾಲಿನ್ಯದ ಪರಿಣಾಮಗಳು, ಬೇಟಿ ಬಚಾವೋ-ಪಡಾವೋ, ಸ್ವಚ್ಛ ಭಾರತ, ಮರಗಳನ್ನು ಉಳಿಸಿ-ಬೆಳಸಿ ಎಂದು ಜಾಗೃತಿ ಮೂಡಿಸುತ್ತೇನೆ ಎಂದರು.

ಹೀಗೆ ಸಂಚರಿಸುವಾಗಿನ ಖರ್ಚಿನ ಕುರಿತು ಕೇಳಿದ ಪ್ರಶ್ನೆಗೆ 'ಸಮಾನ ಮನಸ್ಸಿನ ಜನರು ಒಂದಿಷ್ಟು ಊಟ ನೀಡುತ್ತಾರೆ. ನೀರೂ ಸಿಗುತ್ತದೆ. ಕೆಲವರು ದಾರಿಯಲ್ಲಿನ ಖರ್ಚಿಗೆಂದು ₹ 200 ವರೆಗೂ ನೀಡಿದ್ದಿದೆ. ಅಷ್ಟು ಸಾಕಲ್ಲವೇ? ಎಂದು ಪ್ರತಿಕ್ರಿಯಿಸಿದರು.

ಆಸಕ್ತ ಯುವಕರು ಅವರೊಂದಿಗೆ ಮಾತನಾಡಲು, ಜತೆ ಸೇರಲು ಅಥವಾ ಸಹಕಾರ ನೀಡಲು ಬಯಸಿದರೆ ದೀಲೀಪ ಭರತ ಮಲಿಕ್(ಮೊ.93723 88458)ರನ್ನು ಸಂಪರ್ಕಿಸಬಹುದು.

*

ಯುವಕರು ತಮ್ಮ ದೇಹವನ್ನು ದುಶ್ಚಟಗಳಿಂದ ರಕ್ಷಿಸಿ, ಆರೊಗ್ಯವಾಗಿರುವಂತೆ ಎಚ್ಚರ ವಹಿಸುವುದೂ ಸಹ ನಮ್ಮ ದೇಶಕ್ಕೆ ಮಾಡುವ ಕನಿಷ್ಠ ಮಟ್ಟದ ದೇಶ ಸೇವೆ. ಜನತೆ ರೋಗಪೀಡಿತವೆಂದರೆ ದೇಶವೂ ರೋಗ ಪೀಡಿತವೆಂದರ್ಥ.
–ದಿಲೀಪ ಭರತ ಮಾಲಿಕ, ಸೈಕಲ್ ಸವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.