
ಹುಣಸಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ವಿವಿಧೆಡೆ ಹಾನಿಯಾಗಿದೆ. ತಾಲ್ಲೂಕಿನ ಹನುಮಸಾಗರ ಗ್ರಾಮದಲ್ಲಿ ಸುಮಾರು 90ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿದ್ದು, ಎರಡು ಆಡು ಮರಿ ಸಾವನ್ನಪ್ಪಿದೆ. 10ಕ್ಕೂ ಹೆಚ್ಚು ಕುರಿ ಮತ್ತು ಆಡು ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ.
ಹುಣಸಗಿ ಪಟ್ಟಣದ ಹಿರೇಹಳ್ಳದಿಂದ ದೇವಪುರವರೆಗಿನ ಹಳ್ಳ ತುಂಬಿ ಹರಿಯುತ್ತಿದೆ. ದೇವಪುರ.ಜೆ ಹಾಗೂ ಮಧ್ಯದ ಹಳ್ಳ ತುಂಬಿ ಹರಿಯುತ್ತಿದೆ. ಹುಣಸಗಿ ಹಳ್ಳದ ಪಕ್ಕದಲ್ಲಿರುವ ಜಮೀನುಗಳಿಗೆ ನೀರು ನುಗ್ಗಿದೆ.
ತಾಲ್ಲೂಕಿನ ಹೆಬ್ಬಾಳ ಕೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯ ಮೇಲೆ ನೀರು ತುಂಬಿ ಹರಿಯುತ್ತಿದೆ. ಗೆದ್ದಲಮರಿ ಬಲಶೆಟ್ಟಿಹಾಳ ಮಧ್ಯದ ಸೇತುವೆ ಜಲಾವೃತವಾಗಿದ್ದು, ಇದರಿಂದ ಸಂಜೆವರೆಗೂ ಗೆದ್ದಲಮರಿ ಬಲಶೆಟ್ಟಿಹಾಳ ಸಂಪರ್ಕ ಕಡಿತಗೊಂಡಿದೆ. ಅಲ್ಲಲ್ಲಿ ರಸ್ತೆ ಕೊಚ್ಚಿಹೋಗಿದೆ.
ತಾಲ್ಲೂಕಿನ ಜುಮಾಲಪುರ ತಾಂಡಾದಲ್ಲಿ ಟೋಪಣ್ಣ ಎಂಬುವರಿಗೆ ಸೇರಿದ ಆಕಳು ಕರುವಿನ ಮೇಲೆ ಪತ್ರಾಸ್ ಮೇಲಿನ ಕಲ್ಲು ಬಿದ್ದು ಮೃತಪಟ್ಟಿದೆ.
ಸ್ಥಳಕ್ಕೆ ಉಪತಹಶೀಲ್ದಾರ್ ಕಲ್ಲಪ್ಪ ಜಂಜಿನಗಡ್ಡಿ ಹಾಗೂ ಗ್ರಾಮ ಆಡಳಿತ ಅಧಿಕಾರಿ ಪರಶುರಾಮ ಸೇರಿದಂತೆ ಇತರರು ಆಯಾ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಡೇಕಲ್ಲ, ಬರದೇವನಾಳ, ರಾಯನಗೋಳ, ಮಾರಲಬಾವಿ, ರಾಜವಾಳ ಸೇರಿದಂತೆ ಇತರ ಗ್ರಾಮಗಲ್ಲಿ ಸುಮಾರು 23ಕ್ಕೂ ಹೆಚ್ಚು ಮನೆಗಳು ಬಿದ್ದಿವೆ. ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗುತ್ತಿದೆ ಎಂದು ಕಂದಾಯ ನಿರಿಕ್ಷಕ ರವಿಕುಮಾರ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.