ADVERTISEMENT

ಕೆಂಭಾವಿ | ರಸ್ತೆಯುದ್ದಕ್ಕೂ ತಗ್ಗುದಿನ್ನೆ; ಸಂಚಾರ ಸಂಕಟ

ಪವನ ಕುಲಕರ್ಣಿ
Published 17 ಆಗಸ್ಟ್ 2025, 7:14 IST
Last Updated 17 ಆಗಸ್ಟ್ 2025, 7:14 IST
   

ಕೆಂಭಾವಿ: 6 ಕಿ.ಮೀ ವಾಹನ ಕ್ರಮಿಸಲು ಹೆಚ್ಚೆಂದರೆ 10 ನಿಮಿಷ ಬೇಕಾತ್ತದೆ. ಆದರೆ ಕೆಂಭಾವಿಯಿಂದ ಯಡಿಯಾಪುರ ಗ್ರಾಮಕ್ಕೆ ತಲುಪಲು ಅರ್ಧ ಗಂಟೆಗೂ ಹೆಚ್ಚುಕಾಲ ಬೇಕು. ರಸ್ತೆಯುದ್ದಕ್ಕೂ ತಗ್ಗು ದಿನ್ನೆಗಳಿದ್ದು, ಅಲ್ಲಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ವಾಹನಗಳು ಕುಂಟುತ್ತಾ ಸಾಗಬೇಕಾಗಿದ್ದು, ಇದರಿಂದ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ರಸ್ತೆಗಳ ಮೇಲಿನ ಗುಂಡಿಗಳನ್ನು ತಪ್ಪಿಸಲು ಹೋಗಿ ವಾಹನ ಸವಾರರು ಅಪಘಾತಗಳಿಗೆ ತುತ್ತಾಗಿದ್ದಾರೆ. ಗುಂಡಿಗಳನ್ನು ಸರಿಪಡಿಸುವಂತೆ ಜನರು ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ.

‘ಈ ಮಾರ್ಗದ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ತಪ್ಪಿದ್ದಲ್ಲ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದು ಬೈಕ್‌, ಆಟೊ, ಕಾರು, ಸೈಕಲ್, ಟ್ರ್ಯಾಕ್ಟರ್ ಸೇರಿದಂತೆ ಹಲವು ವಾಹನಗಳ ಸವಾರರಿಗೆ ನುಂಗಲಾರದ ತುತ್ತಾಗಿದೆ. ನಿತ್ಯ ಶಾಲಾ ವಾಹನಗಳು ಬೆಳಿಗ್ಗೆ ಸಂಜೆ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪಲು ಆಗುತ್ತಿಲ್ಲ’ ಎಂದು ಚಾಲಕ ಮಂಜು ಹೇಳುತ್ತಾರೆ.

ADVERTISEMENT

ಮಳೆ ಬಂದರಂತೂ ವಾಹನ ಸವಾರರ ಪಾಡು ಹೇಳದಂತಾಗಿದೆ. ರಸ್ತೆಯುದ್ದಕ್ಕೂ ಅಕ್ಕ ಪಕ್ಕದಲ್ಲಿ ಜಾಲಿಗಿಡಗಳು ಬೆಳೆದಿದ್ದು ರಸ್ತೆ ಮಾಯವಾಗುತ್ತದೆ.

ಈ ರಸ್ತೆಯು 6 ಕಿ.ಮೀ. ಇದ್ದು 3 ಕಿ.ಮೀ ಶಹಾಪುರ ಮತಕ್ಷೇತ್ರದಲ್ಲಿ ಬರುತ್ತಿದ್ದರೆ ಇನ್ನುಳಿದಿದ್ದು, ಸುರಪುರ ಮತಕ್ಷೇತ್ರಕ್ಕೆ ಒಳಪಡುತ್ತದೆ. ಹೀಗಾಗಿ ಈ ರಸ್ತೆ ಯಾವ ಶಾಸಕರು ಮಾಡಿಸಬೇಕೆಂಬುದೇ ತಿಳಿಯದಂತಾ ಗಿದೆ. ಅದೇನೆ ಇರಲಿ ಹಾಳಾಗಿರುವ ರಸ್ತೆಯನ್ನು ದುರಸ್ತಿಗೊಳಿಸುವುದು ಜನಪ್ರತಿನಿಧಿಗಳ ಕೆಲಸವಾಗಿದ್ದು, ಈ ಬಗ್ಗೆ ಇಬ್ಬರೂ ಶಾಸಕರು ಮುತುವರ್ಜಿ ವಹಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಸ್ತೆಯು ಸಂಪೂರ್ಣ ಹಾಳಾಗಿದೆ. ಮಳೆ ಬಂದರಂತೂ ವಾಹನ ಚಾಲಕರು ಅಂದಾಜಿನ ಮೇಲೆ ವಾಹನ ಚಲಾಯಿಸುವಂತಾಗಿದೆ. ಶೀಘ್ರದಲ್ಲಿ ರಸ್ತೆ ದುರಸ್ತಿಗೊಳಿಸಬೇಕು
ವೈ.ಟಿ.ಪಾಟೀಲ, ಕಾಂಗ್ರೆಸ್ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.