
ಕೆಂಭಾವಿ: ಗ್ರಾಮೀಣ ಭಾಗದಲ್ಲಿ ಕ್ರೀಡೆಗೆ ಪ್ರೊತ್ಸಾಹ ದೊರಕುವುದು ವಿರಳ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆ ಮನೆ ಕೆಲಸ ಸೇರಿದಂತೆ ಅನೇಕ ಅಡೆ ತಡೆಗಳ ನಡುವೆ ಸಾಕಷ್ಟು ಗ್ರಾಮೀಣ ಪ್ರತಿಭೆಗಳು ಕ್ರೀಡಾ ಕ್ಷೇತ್ರದಲ್ಲಿ ಮಿಂಚಿವೆ. ಈ ಪೈಕಿ ಕೆಂಭಾವಿ ಪಟ್ಟಣದ ವಿದ್ಯಾರ್ಥಿ ಸತೀಶ ಭಜಂತ್ರಿ ಕೂಡಾ ಒಬ್ಬರು.
ಶಹಾಪುರ ತಾಲ್ಲೂಕಿನ ಬೇವಿನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಜ್ಞಾನ ವಿಭಾಗದ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಸತೀಶ ಅವರು ಚೆಸ್, ಪುಟ್ಬಾಲ್, ಕುಸ್ತಿ ಪಂದ್ಯಗಳಲ್ಲಿ ರಾಜ್ಯ ಮಟ್ಟದವರೆಗೂ ಸಾಧನೆ ಮಾಡಿ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ.
ಪ್ರಾಥಮಿಕ ಹಂತದಿಂದಲೂ ಪಾಠದ ಜೊತೆಗೆ ಕ್ರೀಡೆಯಲ್ಲಿ ತೊಡಗಿಕೊಂಡಿರುವ ಸತೀಶ, ಚೆಸ್ ವಿಭಾಗದಲ್ಲಿ 3 ಬಾರಿ ಜಿಲ್ಲಾ ಮಟ್ಟ, 2 ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ಇತ್ತೀಚೆಗೆ ಬೆಂಗಳೂರು ನಗರದಲ್ಲಿ ನಡೆದ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿಯೂ ಭಾಗವಹಿಸುವ ಮೂಲಕ ತನ್ನ ಪ್ರತಿಭೆಯನ್ನು ತೋರಿಸಿದ್ದಾನೆ.
ಇನ್ನೂ ಎಸ್‌ಎಸ್‌ಎಲ್‌ಸಿ ವೇಳೆ ಬಾಗಲಕೋಟೆ ಜಿಲ್ಲೆಯ ಮುಧೋಳನಲ್ಲಿ ರಾಜ್ಯ ಮಟ್ಟದ ಕುಸ್ತಿ ಪಂದ್ಯದಲ್ಲಿಯೂ ಯಾದಗಿರಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಕೀರ್ತಿಯು ಇವರಿಗೆ ಸಲ್ಲುತ್ತದೆ. ಪುಟಬಾಲ್ ಕ್ರೀಡೆಯಲ್ಲಿ ಸಹಿತ ರಾಜ್ಯ ಮಟ್ಟ, ವಾಲಿಬಾಲ್ ನಲ್ಲಿ ಜಿಲ್ಲಾ ಮಟ್ಟ ಹೀಗೆ ಹತ್ತು ಹಲವು ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನಾರ್ಹ ಸಾಧನೆಗೈದಿದ್ದಾರೆ.
ಬಡ ಕುಟುಂಬದಲ್ಲಿ ಬೆಳೆದು ಕ್ರೀಡೆಯಲ್ಲಿ ರಾಜ್ಯ ಮಟ್ಟದವರೆಗೂ ಸಾಧನೆ ಮಾಡಿರುವುದಲ್ಲದೆ ಓದಿನಲ್ಲಿಯೂ ಕೂಡಾ ಹಿಂದೆ ಬಿದ್ದಿಲ್ಲ. ಬಹುಮುಖ ಪ್ರತಿಭೆಯಾಗಿರುವ ಸತೀಶ ಭಜಂತ್ರಿ ಹೀಗೆ ರಾಷ್ಟ್ರ ಮಟ್ಟದವರೆಗೂ ಸಾಧಿಸುವಂತಾಗಲಿ. ಇದಕ್ಕೆ ಬೇಕಾದ ಸವಲತ್ತು ಇಲಾಖೆಗಳು ನೀಡಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ.
ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಪ್ರೊತ್ಸಾಹಿಸುವ ವೇದಿಕೆಗಳು ಲಭಿಸಿದಾಗ ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯ. ಹೀಗಾಗಿ ಜಿಲ್ಲಾಡಳಿತ ಇಂತಹ ವಿದ್ಯರ್ಥಿಗಳಿಗೆ ತರಬೇತಿ ನೀಡಬೇಕಿದೆಸಂಜೀವರಾವ ಕುಲಕರ್ಣಿ ಸಾಮಾಜಿಕ ಚಿಂತಕರು
6 ನೇ ತರಗತಿಯಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಾ ಎಲ್ಲಾ ಕ್ರೀಡೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ರಾಜ್ಯ ಮಟ್ಟದವರೆಗೂ ಜಿಲ್ಲೆಯನ್ನು ಪ್ರತಿನಿಧಿಸಿರುವುದು ನಿಜಕ್ಕೂ ಹೆಮ್ಮೆ ವಿಷಯಚನ್ನಬಸಪ್ಪ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ
Quote -
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.