
ಶಹಾಪುರ: ‘ಜ.15ರಂದು ನಗರದಲ್ಲಿ ನಡೆಯುವ ಸಂಗಮೇಶ್ವರ ಹಾಗೂ ಬಲಭೀಮೇಶ್ವರ ಅವರ ಜೋಡಿ ಪಲ್ಲಕ್ಕಿ ಮೆರವಣಿಯಲ್ಲಿ ಭಕ್ತರು ಹಾಗೂ ಪೊಲೀಸ್ ಸಿಬ್ಬಂದಿ ಸಮನ್ವಯದಿಂದ ಕೆಲಸ ನಿರ್ವಹಿಸುವುದರ ಜತೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಹಕಾರ ಅಗತ್ಯವಾಗಿದೆ’ ಎಂದು ಶಹಾಪುರ ಠಾಣೆಯ ಪಿಐ ಎಸ್.ಎಂ. ಪಾಟೀಲ ತಿಳಿಸಿದರು.
ನಗರದ ಠಾಣೆಯಲ್ಲಿ ಸೋಮವಾರ ಸಂಕ್ರಾಂತಿ ಹಬ್ಬದ ಅಂಗವಾಗಿ ನಡೆದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
‘ಸಾರ್ವಜನಿಕ ಸಲಹೆ ಹಾಗೂ ಸೂಚನೆಗಳನ್ನು ಪಾಲಿಸಲಾಗುವುದು. ಅನವಶ್ಯಕವಾಗಿ ಸುಳ್ಳು ಸುದ್ದಿ ಹರಡುವ ಹಾಗೂ ಗೊಂದಲಕ್ಕೆ ಆಸ್ಪದ ನೀಡಬಾರದು. ಎಚ್ಚರಿಕೆ ಹಾಗೂ ಜಾಗೃತರಾಗಿರಬೇಕು. ಹಬ್ಬವನ್ನು ನಾವೆಲ್ಲರೂ ಸಂಭ್ರಮದಿಂದ ಆಚರಿಸಬೇಕು. ಕಾನೂನು ಸುವ್ಯವಸ್ಥೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ’ ಎಂದರು.
‘ಹಬ್ಬದ ದಿನದಂದು ಮದ್ಯಪಾನ ನಿಷೇಧಿಸಿ. ದೇವರ ದರ್ಶನ ಪಡೆಯಲು ಆಗಮಿಸುವ ಮಹಿಳೆಯರ ಹಾಗೂ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಬ್ಯಾರಿಕೇಡ್ ಅಳವಡಿಸಿ. ಇನ್ನಷ್ಟು ಪೊಲೀಸ್ ಸಿಬ್ಬಂದಿಯನ್ನು ಆಯಾ ಪ್ರದೇಶದಲ್ಲಿ ನಿಯೋಜಿಸಿ. ಸುರಕ್ಷತೆಯ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಸಿ.ಸಿ ಕ್ಯಾಮರ್ ಅಳವಡಿಸಿ. ಕರ್ಕಶ ಶಬ್ದ ಸಾರುವ ಪೀಪೀ ನಿಷೇಧಿಸಬೇಕು’ ಎಂದು ಸಭೆಯಲ್ಲಿ ಭಾಗವಹಿಸಿದ ಸಾರ್ವಜನಿಕರು ಪೊಲೀಸರಿಗೆ ನೀಡಿದ ಸಲಹೆ ನೀಡಿದರು.
ಠಾಣೆಯ ಪಿಎಸ್‌ಐ ಶ್ಯಾಮಸುಂದರ ನಾಯಕ, ನಗರದ ಮುಖಂಡರಾದ ಸಯ್ಯದ ಮುಸ್ತಾಫ್ ದರ್ಬಾನ್, ಮಹಾದೇವಪ್ಪ ಸಾಲಿಮನಿ, ಗುಂಡಪ್ಪ ತುಂಬಿಗಿ, ಶರಣು ದೋರನಹಳ್ಳಿ, ಸುಧಾಕರ ಗುಡಿ, ವಿಜಯಕುಮಾರ ಎದುರುಮನೆ, ಬಸವರಾಜ ಆನೇಗುಂದಿ ಹಾಗೂ ವ್ಯಾಪಾರಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.