
ಯಾದಗಿರಿ: ‘ವಡಗೇರಾ ಗ್ರಾಮ ಪಂಚಾಯಿತಿಯಲ್ಲಿ ಕಸ ವಿಲೇವಾರಿಗೆ ವಾಹನಗಳು ಕೊಡುತ್ತಿಲ್ಲ. ವಾಹನ ದುರಸ್ತಿಗೆ ಬಂದಿದೆ, ಪೆಟ್ರೋಲ್ ಇಲ್ಲ ಎಂದು ನೆಪ ಹೇಳಿ ತಲೆಯ ಮೇಲೆ ಕಸ ಹೊತ್ತುಕೊಂಡು ಹೋಗುವಂತೆ ಪಂಚಾಯಿತಿ ಬಿಲ್ ಕಲೆಕ್ಟರ್ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಪಂಚಾಯಿತಿಯ ಸ್ವಚ್ಛತಾ ಮಹಿಳಾ ಕಾರ್ಮಿಕರಾದ ಅಯ್ಯಮ್ಮ ಅವರು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ. ರಘು ಅವರ ಮುಂದೆ ಅಲವತ್ತುಕೊಂಡರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದ ಆಡಿಟೋರಿಯಂನಲ್ಲಿ ಬುಧವಾರ ಆಯೋಗದ ಅಧ್ಯಕ್ಷರೊಂದಿಗೆ ಸ್ವಚ್ಛತಾ ಕಾರ್ಮಿಕರು ಸಂವಾದ ನಡೆಯಿತು. ಪಟ್ಟಣ, ಪುರಸಭೆ, ನಗರಸಭೆ ಕಾರ್ಮಿಕರು ವೇತನ ವಿಳಂಬ, ವಸತಿ ಸಮಸ್ಯೆಗಳನ್ನು ಅಧ್ಯಕ್ಷರ ಗಮನಕ್ಕೆ ತಂದರೆ, ಗ್ರಾಮ ಪಂಚಾಯಿತಿಯ ಸ್ವಚ್ಛತಾ ಕಾರ್ಮಿಕರು ನಿತ್ಯ ತಾವು ಎದುರಿಸುತ್ತಿರುವ ತೊಂದರೆಗಳ ಪಟ್ಟಿಯನ್ನು ಅಧ್ಯಕ್ಷರ ಮುಂದಿಟ್ಟರು.
‘ಬೆಳಿಗ್ಗೆ 5 ಗಂಟೆಯಿಂದಲೇ ಸ್ವಚ್ಛತೆ ಕೆಲಸಕ್ಕೆ ಹೋಗುತ್ತೇವೆ. ಪಿಡಿಒ ಏನೂ ಹೇಳದೆ ಇದ್ದರೂ ಕಾರ್ಯದರ್ಶಿ ಬೆದರಿಕೆ ಹಾಕಿ ತಲೆಯ ಮೇಲೆ ಹೊತ್ತುಕೊಂಡು ಹೋಗುವಂತೆ ತಾಕೀತು ಮಾಡುತ್ತಾರೆ. ರಸ್ತೆಯ ಬದಿಯಲ್ಲಿ ಕಸಕ್ಕೆ ಬೆಂಕಿ ಹಚ್ಚಿದರೆ ಜನರು ಬೈಯುತ್ತಾರೆ. ಕಸ ಹೊತ್ತುಕೊಂಡು ಹೋಗಿ ಕೆರೆಯಲ್ಲಿ ಹಾಕುತ್ತೇವೆ’ ಎಂದರು.
‘ಬಳಿಚಕ್ರ ಗ್ರಾಮದ ಕೆಲವು ಪಂಚಾಯಿತಿ ಸದಸ್ಯರು ಕಸ ವಿಲೇವಾರಿ ಸಂಬಂಧ ನಮ್ಮನ್ನು ಹೊಡೆಯಲು ಬರುತ್ತಾರೆ. ಏಕಕಾಲದಲ್ಲಿ ತಮ್ಮ- ತಮ್ಮ ವಾರ್ಡ್‌ಗೆ ಬರುವಂತೆ ಜೋರು ಮಾಡಿ ಗಲಾಟೆ ಮಾಡುತ್ತಾರೆ' ಎಂದು ಸ್ವಚ್ಛತಾ ಕಾರ್ಮಿಕರೊಬ್ಬರು ಅಳಲು ತೋಡಿಕೊಂಡರು.
ಹಲ್ಲೆಗೆ ಯತ್ನಿಸಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಆಯೋಗದ ಸದಸ್ಯರು ಸೂಚಿಸಿದರು. ‘ದೂರು ಕೊಡುವಾಗ ಅಧಿಕಾರಿಗಳು ನಮ್ಮ ಜೊತೆಗೆ ನಿಲ್ಲಬೇಕಲ್ಲವಾ ಸರ್’ ಎಂದು ಪ್ರಶ್ನಿಸಿದರು.
‘ಗ್ರಾ.ಪಂ. ಸ್ವಚ್ಛತಾಗಾರರಿಗೆ ಆರೋಗ್ಯ ತಪಾಸಣೆ ಮಾಡಿಸಿಲ್ಲ. ಆಶ್ರಯ ಯೋಜನೆಯಡಿ ಮನೆಗಳನ್ನು ಕೇಳಿದರೆ ಸದಸ್ಯರ ಶಿಫಾರಸು ತರಲು ಹೇಳುತ್ತಾರೆ’ ಎಂದು ಸ್ವಚ್ಛತಾ ಕಾರ್ಮಿಕ ಮಹಾದೇವಪ್ಪ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿ. ರಘು, ‘ಆಶ್ರಯ ಮನೆಗಳ ಹಂಚಿಕೆಯಲ್ಲಿ ಸ್ವಚ್ಛತಾ ಸಿಬ್ಬಂದಿಗೂ ಆದ್ಯತೆ ಕೊಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಿವೇಶನ, ವಸತಿಗೆ ಮನವಿ: ಪಟ್ಟಣ, ಪುರಸಭೆ ಮತ್ತು ನಗರ ಸಭೆಗಳ ಬಹುತೇಕ ಕಾರ್ಮಿಕರು ಬಾಡಿಗೆಯ ಮನೆಯಲ್ಲಿ ವಾಸವಾಗಿದ್ದಾರೆ. ಕೆಲವರಿಗೆ ನಿವೇಶನವೂ ಇಲ್ಲ. ಸ್ಥಳೀಯ ಸಂಸ್ಥೆಗಳಿಂದ ನಿವೇಶನ, ವಸತಿ ವ್ಯವಸ್ಥೆ ಮಾಡಿಕೊಡುವಂತೆ ಪೌರಕಾರ್ಮಿಕರು ಕೋರಿದರು.
ಸಂವಾದದಲ್ಲಿ ಹೆಚ್ಚುವರಿ ಎಸ್‌ಪಿ ಧರಣೇಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಲಕ್ಷ್ಮಿಕಾಂತ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶರಣಬಸಪ್ಪ ಸೇರಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸುರಪುರ; 7 ತಿಂಗಳ ವೇತನ ಬಾಕಿ ‘
ಸುರಪುರ ನಗರಸಭೆಯ ಪೌರಕಾರ್ಮಿಕರ 7 ತಿಂಗಳ ವೇತನ ಬಾಕಿ ಇದೆ. ನಿತ್ಯ ಬೆಳಿಗ್ಗೆ ಉಪಹಾರವೂ ನೀಡುತ್ತಿಲ್ಲ ಮನೆಗಳೂ ಮಂಜೂರಾಗಿಲ್ಲ’ ಎಂದು ಪೌರ ಕಾರ್ಮಿಕರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಪಿ. ರಘು ‘ವೇತನ ಕೊಡದೆ ಇದ್ದರೆ ಬಡ ಕಾರ್ಮಿಕರು ಹೇಗೆ ಜೀವನ ನಡೆಸುತ್ತಾರಾ? ಕರ ವಸೂಲಿ ಮಾಡಿ ಕೊಡಲು ಏನು ಅಡ್ಡಿ’ ಎಂದು ಅಧಿಕಾರಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ನಗರಸಭೆ ಅಧಿಕಾರಿ ‘2–3 ವರ್ಷಗಳಲ್ಲಿನ 7 ತಿಂಗಳ ಸಂಬಳ ಬಾಕಿ ಇದೆ. ವಾರ್ಷಿಕ ₹ 2 ಕೋಟಿ ಬೇಡಿಕೆಯಲ್ಲಿ ಪ್ರತಿ ತಿಂಗಳು ₹ 20 ಲಕ್ಷ ಕರ ಸಂಗ್ರಹವಾಗುತ್ತದೆ. ಅದರಲ್ಲಿ ವಾಹನಗಳ ಡೀಸೆಲ್ ಇತರೆ ಕಾರ್ಯಗಳಿಗೆ ಖರ್ಚಾಗುತ್ತಿದೆ. ಬಾಕಿ ವೇತನ ಪಾವತಿಗೆ ವ್ಯವಸ್ಥೆ ಮಾಡುತ್ತೇವೆ’ ಎಂದರು.
ಸ್ಕ್ರಿಪ್ಟ್ ಸಿದ್ಧಪಡಿಸಿಕೊಂಡು ಬಂದಂತಿದೆ!
‘ಶಹಾಪುರ ಸುರಪುರ ಗುರುಮಠಕಲ್ ಕೆಂಭಾವಿಯಲ್ಲಿ ವಿಶ್ರಾಂತಿ ಗೃಹ ಇಲ್ಲ ಎಂದು ಅಧಿಕಾರಿಗಳು ವರದಿ ಕೊಟ್ಟಿದ್ದಾರೆ. ಆದರೆ ಪೌರಕಾರ್ಮಿಕರು ಇದೆ ಎನ್ನುತ್ತಿರುವುದು ನೋಡಿದರೆ ಮುಂಚಿತವಾಗಿ ಸ್ಕ್ರಿಪ್ಟ್ ಸಿದ್ಧ ಮಾಡಿಕೊಂಡು ಬಂದಂತೆ ಇದೆ’ ಎಂದು ಆಯೋಗದ ಸಂಶೋಧನಾಧಿಕಾರಿ ಮಹಾದೇವಸ್ವಾಮಿ ಹೇಳಿದರು
‘ಹೊರಗುತ್ತಿಗೆ ಕಾರ್ಮಿಕರಿಗೆ ಸಂಕಷ್ಟ ಪಾವತಿ ಕೊಡುವುದಿಲ್ಲ ಎಂದು ಬೇರೆ ಜಿಲ್ಲೆಗಳ ಪೌರಾಯುಕ್ತರು ಹೇಳಿದ್ದಾರೆ. ಆದರೆ ಇಲ್ಲಿನ ಅಧಿಕಾರಿಗಳು ಸಂಕಷ್ಟ ಪಾವತಿ ಕೊಡುತ್ತಿರುವುದಾಗಿ ಹೇಳುತ್ತಿದ್ದಾರೆ ಹೇಗೆ ಸಾಧ್ಯ’ ಎಂದು ಅಚ್ಚರಿ ವ್ಯಕ್ತಪಡಿಸಿದರು.
‘ಆರ್‌ಡಿಪಿಆರ್ ಸಚಿವರಿಗೆ ವರದಿ
ಸಲ್ಲಿಕೆ’ ‘ಗ್ರಾಮ ಪಂಚಾಯಿತಿ ಸ್ವಚ್ಛತಾ ಕಾರ್ಮಿಕರಿಗೆ ಬೆದರಿಕೆ ಹಾಕಿದ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಪಿಆರ್) ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೆ ತಂದು ವರದಿ ಸಹ ಸಲ್ಲಿಕೆ ಮಾಡುತ್ತೇನೆ’ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ. ರಘು ತಿಳಿಸಿದರು.
ಇಲ್ಲಿ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ‘ಇರುವ ವಾಹನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನಮ್ಮ ಕಾರ್ಮಿಕರು ಹೆದರಿಕೊಳ್ಳುತ್ತಿರುವುದಕ್ಕೆ ಅವರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಯಾರೂ ಹೆದರಬಾರದು. ಯಾವುದೇ ಮುಲಾಜಿಗೆ ಒಳಪಡದೆ ಯಾರೇ ಅಧಿಕಾರಿ ಇದ್ದರೂ ನೋಟಿಸ್ ಕೊಟ್ಟು ಪ್ರಕರಣ ದಾಖಲಿಸುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.