ADVERTISEMENT

ಯಾದಗಿರಿ | ಮನರೇಗಾ ಉಳಿಸಿ ಆಂದೋಲನ; ಕಾಂಗ್ರೆಸ್‌ನಿಂದ ಒಂದು ದಿನ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 8:08 IST
Last Updated 24 ಜನವರಿ 2026, 8:08 IST
<div class="paragraphs"><p>ಯಾದಗಿರಿ ನಗರದಲ್ಲಿ ಶನಿವಾರ ಕಾಂಗ್ರೆಸ್ ಮುಖಂಡರು ಮನರೇಗಾ ಉಳಿಸಿ ಆಂದೋಲನ ಅಂಗವಾಗಿ ಉಪವಾಸ ಸತ್ಯಾಗ್ರಹ ನಡೆಸಿದರು</p></div>

ಯಾದಗಿರಿ ನಗರದಲ್ಲಿ ಶನಿವಾರ ಕಾಂಗ್ರೆಸ್ ಮುಖಂಡರು ಮನರೇಗಾ ಉಳಿಸಿ ಆಂದೋಲನ ಅಂಗವಾಗಿ ಉಪವಾಸ ಸತ್ಯಾಗ್ರಹ ನಡೆಸಿದರು

   

ಯಾದಗಿರಿ: ಯುಪಿಎ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ (ಮನರೇಗಾ) ಮರು ಜಾರಿಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ 'ಮನರೇಗಾ ಉಳಿಸಿ ಆಂದೋಲನದ ಒಂದು ದಿನ ಉಪವಾಸ ಸತ್ಯಾಗ್ರಹ'ವನ್ನು ನಗರದಲ್ಲಿ ಶನಿವಾರ ನಡೆಸಲಾಯಿತು.

ನಗರದ ಗಾಂಧಿ‌ ವೃತ್ತದಲ್ಲಿ ಶಾಸಕರು, ಮುಖಂಡರು, ಕಾರ್ಯಕರ್ತರು ಜಮಾಯಿಸಿದರು.‌ ಮಹಾತ್ಮ ಗಾಂಧಿಯವರ ಭಾವಚಿತ್ರಗಳನ್ನು ಹಿಡಿದು 'ವಿಬಿ-ಜಿ ರಾಮ್ ಜಿ' ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 'ಬೇಡ ಬೇಡ ನಮಗೆ ವಿಬಿ ರಾಮಜೀ, ಬೇಕು ಬೇಕು ನಮಗೆ ಗಾಂಧಿ', 'ಕೂಲಿ ಕಾರ್ಮಿಕರ ರಕ್ಷಣೆಗೆ ಬೇಕು ಮನರೇಗಾ', 'ಮನರೇಗಾ ಉಳಿಸಿ'... ಎಂಬ ನಾಮಫಲಕಗಳನ್ನು ಪ್ರದರ್ಶಿಸಿದರು.

ADVERTISEMENT

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರ ಬಸರೆಡ್ಡಿ ಅನಪುರ ಮಾತನಾಡಿ, 'ಗ್ರಾಮೀಣ ವಿಕಾಸ ಗುರಿಯೊಂದಿಗೆ ಯುಪಿಎ ಸರ್ಕಾರವು ಮನರೇಗಾ ಯೋಜನೆಯನ್ನು ಜಾರಿಗೆ ತಂದಿತ್ತು. ಗ್ರಾಮಗಳಿಗೆ ಬೇಕಾದ ಕಾಮಗಾರಿಗಳನ್ನು ಆಯಾ ಗ್ರಾಮಗಳೇ ನಿರ್ಧರಿಸುವಂತಹ‌ ಅಧಿಕಾರವನ್ನು ಸಹ ನೀಡಿತ್ತು. ಈಗ ಎನ್‌ಡಿಎ ಸರ್ಕಾರವು ಮನರೇಗಾ ಯೋಜನೆಯ ಮೂಲ ಉದ್ದೇಶಗಳನ್ನು ತೆಗೆದುಹಾಕಿದೆ. ಗ್ರಾಮಗಳಿಗೆ ಬೇಕಾದ ಕಾಮಗಾರಿಗಳನ್ನು ದೆಹಲಿಯಲ್ಲಿ ಕುಳಿತವರು ನಿರ್ಧಾರಿಸುವಂತೆ ಮಾಡಿದೆ. ಗ್ರಾಮಗಳ ಅಗತ್ಯ ಹಾಗೂ ಆದ್ಯತೆಗಳಿಗೆ ಅವಕಾಶವೇ ಇಲ್ಲದಂತೆ ಮಾಡಿದೆ' ಎಂದರು.

'ಈ ಹಿಂದೆ ಮನರೇಗಾ ಯೋಜನೆಯಡಿ ಕೇಂದ್ರ ಸರ್ಕಾರವೇ ಶೇ 90 ರಷ್ಟು ಅನುದಾನ ನೀಡುತ್ತಿತ್ತು. ಆದರೆ, ಹೊಸ ಯೋಜನೆಯ ಅಡಿ ಶೇ 60:40 ಅನುಪಾತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನ ನೀಡಬೇಕು ಎಂಬ ನಿಯಮ ಸೇರಿಸಲಾಗಿದೆ. ಇದರಿಂದ ರಾಜ್ಯಗಳ ಮೇಲೆ ಆರ್ಥಿಕ ಹೊರೆಯಾಗಲಿದೆ' ಎಂದು ಕಿಡಿಕಾರಿದರು.

ಮುಖಂಡ ನೀಲಕಂಠ ‌ಬಡಿಗೇರ ಮಾತನಾಡಿ, 'ದೇಶದ ಸಂವಿಧಾನವನ್ನು ಅಭದ್ರ ಮಾಡುವ ಹುನ್ನಾರ ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್ ಜಾರಿಗೆ ತಂದಿರುವ ಜನಪರವಾದ ಯೋಜನೆಗಳ ಹೆಸರುಗಳನ್ನು ಬದಲಾವಣೆ ಮಾಡುವುದೇ ಬಿಜೆಪಿಯ ಸಾಧನೆಯಾಗಿದೆ' ಎಂದರು.

ಮುಖಂಡ ಶರಣಪ್ಪ ಮಾನೇಗಾರ ಮಾತನಾಡಿ, 'ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಆಸೆಯ ಸಾಕಾರಗೊಳಿಸಲು ರಾಜೀವ್ ಗಾಂಧಿ ಅವರು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದರು. ಅದರ ಮುಂದುವರಿದ ಭಾಗವಾಗಿ ಮನರೇಗಾ ಯೋಜನೆಯನ್ನು ಯುಪಿಎ ಸರ್ಕಾರ ಜಾರಿಗೆ ತಂದು, ಗ್ರಾಮಗಳಿಗೆ ಇನ್ನಷ್ಟು ಬಲ ತುಂಬಿತ್ತು. ಈಗ, ಬಿಜೆಪಿ ಸರ್ಕಾರ ಗ್ರಾಮಗಳಿಗೆ ನೀಡಿದ್ದ ಅಧಿಕಾರವನ್ನು ಕಿತ್ತುಕೊಳ್ಳಲು ಹೊರಟಿದೆ. ಇದಕ್ಕೆ ಕಾಂಗ್ರೆಸ್ ಪಕ್ಷವು ಅವಕಾಶ ನೀಡುವುದಿಲ್ಲ. ಮನರೇಗಾ ಉಳಿಸಿ ಆಂದೋಲನವನ್ನು ಪ್ರತಿಯೊಬ್ಬ ಕೂಲಿಕಾರನಿಗೆ ಮುಟ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ' ಎಂದು ಹೇಳಿದರು.

ಉಪವಾಸ ಸತ್ಯಾಗ್ರಹದಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ವಕ್ತಾರ ಸ್ಯಾಮ್ಸನ್ ಮಾಳಿಕೇರಿ, ಮುಖಂಡರಾದ ಸಾಯಿಬಣ್ಣ ಬೋರಬಂಡ, ಭೀಮರಾಯ ಠಾಣಗುಂದಿ, ಅಲಂ ಪಟೇಲ್, ಮಲ್ಲಮ್ಮ ಕೊರೂರು, ಬಸವರಾಜ ದಳಪತಿ, ಚನ್ನಕೇಶವ ಬಾಣತಿಹಾಳ ಸೇರಿದಂತೆ ಹಲವಾರು ಪಾಲ್ಗೊಂಡಿದ್ದರು.