ಗುರುಮಠಕಲ್: ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯದ ಯಾವುದೇ ವ್ಯಕ್ತಿಗೆ ತೊಂದರೆ, ಸಮಸ್ಯೆಗಳಾದರೆ ಅವರ ರಕ್ಷಣೆಗೆ ನಮ್ಮ ಪೊಲೀಸ್ ಇಲಾಖೆ ಆದ್ಯತೆ ನೀಡಲಿದ್ದು, ನಿಮ್ಮ ರಕ್ಷಣೆಗೆ ನಾವು ಸದಾ ಸಿದ್ಧ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಭರವಸೆ ನೀಡಿದರು.
ಪಟ್ಟಣದ ಹರಿಜನವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಕಾನೂನಿನಲ್ಲಿ ರಕ್ಷಣೆಯಿದೆ. ಅದರೆ ಜತೆಗೆ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ನಿಮ್ಮೆಲ್ಲರ ಸಹಕಾರ ಅಗತ್ಯ’ ಎಂದರು.
‘ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಪೊಲೀಸ್ ಇಲಾಖೆಯೊಡನೆ ನಿಲ್ಲಬೇಕು. ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡಬೇಕು. ಬೈಕ್ ಸವಾರರು ಕಡ್ಡಾಯ ಹೆಲ್ಮೆಟ್ ಧರಿಸಿ, ರಸ್ತೆಯ ನಿಯಮ ಪಾಲಿಸಿ, ನಿಮ್ಮ ಸುತ್ತಲಿನ ಪರಿಸರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದರೆ ಶೀಘ್ರ ಪೊಲೀಸ್ ಇಲಾಖೆಗೆ ಮಾಹಿತಿ ಹಂಚಿಕೊಳ್ಳಿ’ ಎಂದು ಮನವಿ ಮಾಡಿದರು.
‘ಮನೆ-ಮನೆಗೆ ಪೊಲೀಸ್ ಮೂಲಕ ಪೊಲೀಸ್ ಸಿಬ್ಬಂದಿಗೆ ಕೂಡಲೇ ಸಮಸ್ಯೆ, ಅಪರಾಧಿಕ ಕೃತ್ಯಗಳ ಮಾಹಿತಿ ನೀಡಲು ಮತ್ತು ಪೊಲೀಸ್ ಸಹಾಯ ಪಡೆಯುವ ಅನುಕೂಲಕ್ಕಾಗಿ ಆಯಾ ಬಡಾವಣೆಗಳಲ್ಲಿ ವಾಟ್ಸ್ಆ್ಯಪ್ ಗ್ರೂಪ್ ರಚಿಸಲಾಗುತ್ತಿದೆ. ಜತೆಗೆ ಎಲ್ಲರಿಗೂ ಬೀಟ್ ಪೊಲೀಸ್ ಮತ್ತು ಅಧಿಕಾರಿಗಳ ಸಂಪರ್ಕದ ಮಾಹಿತಿ ಪೋಸ್ಟರ್ ಅಂಟಿಸಲಾಗುತ್ತಿದೆ’ ಎಂದು ತಿಳಿಸಿದರು.
ಪಿಐ ವೀರಣ್ಣ ದೊಡ್ಡಮನಿ, ತಾಲ್ಲೂಕು ಪಂಚಾಯಿತಿ ಇಒ ಅಂಬರೀಶ ಪಾಟೀಲ, ಗ್ರೇಡ್-2 ತಹಶೀಲ್ದಾರ್ ನರಸಿಂಹಸ್ವಾಮಿ, ಎಎಸ್ಐ ಭೀಮಶಪ್ಪ ಖಾನಾಗಡ್ಡ, ಪೊಲೀಸ್ ಇಲಾಖೆಯ ಶರಣಪ್ಪ ಪಸಾರ್, ಶಿವರಾಮರೆಡ್ಡಿ, ಶ್ರೀಶೈಲ, ರಾಜುಗೌಡ, ಡಿಎಸ್ಎಸ್‌ನ ಮರೆಪ್ಪ, ಲಾಲಪ್ಪ ತಲಾರಿ, ಪುರಸಭೆ ಸದಸ್ಯ ಬಾಬು ತಲಾರಿ, ಭೀಮಶಪ್ಪ ಗುಡಿಸೆ, ಹಣಮಂತ ಶನಿವಾರಂ, ಅಶೋಕ ಶನಿವಾರಂ, ಅನಂತಪ್ಪ ಮುಕುಡಿ, ಮಾಣಿಕಪ್ಪ ಮುಕುಡಿ, ರಂಗಸ್ವಾಮಿ ಕೊಂಕಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.