
ಯಾದಗಿರಿ: ಎಐ ಆಧಾರಿತವಾಗಿ ಔಷಧಿಗಳ ವಿತರಣೆ, ಸ್ಮಾರ್ಟ್ ಸಿಟಿ ನಿರ್ಮಾಣ, ರಾಕೆಟ್ ಉಡಾವಣೆ, ಮಳೆ ನೀರು ಸಂಗ್ರಹ, ಹನಿ ನೀರಾವರಿ ಪದ್ಧತಿ, ಸೈನಿಕರಿಗೆ ಹೈಟೆಕ್ ರಕ್ಷಾ ಕವಚ, ರಸ್ತೆಯಲ್ಲಿ ಓಡಾಡುವ ವಾಹನಗಳಿಂದ ವಿದ್ಯುತ್ ಉತ್ಪಾದನೆ ಮಾದರಿ ಹೀಗೆ ವಿಧ ವಿಧವಾದ ಮಾದರಿಗಳನ್ನು ಮುಂದಿಟ್ಟುಕೊಂಡು ಹರಳು ಉರಿದಂತೆ ಅವುಗಳ ಬಗ್ಗೆ ವಿವರಣೆ ಕೊಡುತ್ತಾ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಅನಾವರಣಗೊಳಿಸಿದರು.
ಈ ದೃಶ್ಯಗಳು ಕಂಡುಬಂದಿದ್ದು ಹೊಸ ಕೋರ್ಟ್ ಮುಂಭಾಗದ ಕನ್ನಡ ಭವನದಲ್ಲಿನ ರಾಜ್ಯ ಮಟ್ಟದ ಯುವಜನೋತ್ಸವದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ. ಎಂಜಿನಿಯರಿಂಗ್, ಮೆಡಿಕಲ್, ವಿಜ್ಞಾನ, ವಾಣಿಜ್ಯ ಹಾಗೂ ಕೃಷಿ ವಿದ್ಯಾರ್ಥಿಗಳೇ ಕಂಡುಹಿಡಿದ ಸಾಧನಗಳು ಹಾಗೂ ತಂತ್ರಜ್ಞಾನ ಆವಿಷ್ಕಾರಗಳು ಭವನದ ಒಳ– ಹೊರಗು ಆವರಿಸಿಕೊಂಡಿದ್ದವು.
ನೂರಾರು ಸಂಖ್ಯೆಯಲ್ಲಿ ಪೋಷಕರು, ನಾನಾ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಬರುತ್ತಿದ್ದಂತೆ ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ವಿಶ್ಲೇಷಣೆ ಮಾಡಿ ವೀಕ್ಷಕರಿಗೆ, ನೋಡುಗರಿಗೆ ಸರಳವಾಗಿ ಅರ್ಥೈಸುತ್ತಿದ್ದರು. ತಮ್ಮ ಆವಿಷ್ಕಾರದ ಬಗ್ಗೆ ಭರವಸೆಯಿಂದ ವಿವರಿಸುತ್ತಿದ್ದ ವಿದ್ಯಾರ್ಥಿಗಳನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದ ಪೋಷಕರು, ಉಪನ್ಯಾಸಕರು ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದರು. ಅವರಲ್ಲಿ ಕೆಲವರು ತಮ್ಮ ಅಭಿಪ್ರಾಯಗಳನ್ನು ನೋಟ್‌ಬುಕ್‌ನಲ್ಲಿ ದಾಖಲಿಸಿದ್ದರು.
ಸ್ಮಾರ್ಟ್‌ಸಿಟಿ ಪರಿಕಲ್ಪನೆಯಡಿ ಅಗ್ನಿ ಅನಾಹುತದ ಬಗ್ಗೆ ಮುನ್ನೆಚ್ಚರಿಕೆ ನೀಡುವ ಸೆನ್ಸರ್, ಬಹುಮಹಡಿ ಕಟ್ಟಡದ ಮೇಲೆ ಹೆಲಿಕಾಪ್ಟರ್ ನಿಲುಗಡೆ, ವಾಹನಗಳ ಸಂಚಾರದಿಂದ ವಿದ್ಯುತ್ ಉತ್ಪಾದನೆ, ಭೂಕಂಪ ಸೂಚನೆಯ ಗಂಟೆ, ಮನೆ ರಕ್ಷಣೆಯ ಲೇಸರ್ ಅಲಾರಾಂ, ಅತ್ಯಾಧುನಿಕ ಕೃಷಿ ಪದ್ಧತಿಗಳು, ನೀರಿನ ಮಿತ ಬಳಕೆಯ ತಂತ್ರಗಳು, ಕಲ್ಲು, ಮರಳು ಬಳಸಿ ಕಡಿಮೆ ವೆಚ್ಚದಲ್ಲಿ ನೀರು ಶುದ್ಧೀಕರಣ ಮಾಡುವ ಮಾದರಿಗಳನ್ನು ವಿದ್ಯಾರ್ಥಿಗಳೇ ಅಭಿವೃದ್ಧಿಪಡಿಸಿದ್ದರು.
ನೀರಿನ ಸಂರಕ್ಷಣೆ, ಕಾರ್ಖಾನೆ–ಹೋಟೆಲ್, ವಸತಿಗಳ ತ್ಯಾಜ್ಯನಿರ್ವಹಣೆ, ಸುಸ್ಥಿರ ನಗರ ನಿರ್ಮಾಣ, ಎರಡು ಚಕ್ರದ ಮೇಲೆ ಎತ್ತರದ ಕಂಬಗಳನ್ನು ಜೋಡಿಸಿ ಅದರ ಮೇಲೆ ಗೋಪುರ ಆಕಾರದ ಪ್ರಯಾಣಿಕ ವಾಹನ ನಿರ್ಮಿಸಿ ಟ್ರಾಫಿಕ್ ಸಮಸ್ಯೆ ನಿಯಂತ್ರಣ, ಸಾವಯವ ಬೇಸಾಯದಿಂದ ಜನ ಸಾಮಾನ್ಯರಿಗೆ ದೊರಕುವ ಲಾಭ, ರಾಕೆಟ್ ಉಡಾವಣೆ, ವಾಯು ಮಾಲಿನ್ಯ ನಿಯಂತ್ರಣದ ಕ್ರಮಗಳು, ಸೋಲಾರ್ ಟ್ರ್ಯಾಕಿಂಗ್ ಸಿಸ್ಟಮ್ ಸೇರಿದಂತೆ ನಾನಾ ಬಗೆಯ ಮಾದರಿಗಳ ಪ್ರದರ್ಶನವು ಆಕರ್ಷಕವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.