ADVERTISEMENT

ವಚನಗಳು ಸಾಹಿತ್ಯದ ತಾಯಿಬೇರು: ಅಪ್ಪಾರಾವ ಅಕ್ಕೋಣಿ

‘ಶರಣ ಶ್ರೇಷ್ಠರು’ ಕೃತಿ ಬಿಡುಗಡೆ ಸಮಾರಂಭ

​ಪ್ರಜಾವಾಣಿ ವಾರ್ತೆ
Published 6 ಮೇ 2019, 9:09 IST
Last Updated 6 ಮೇ 2019, 9:09 IST
ಯಾದಗಿರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಶರಣ ಶ್ರೇಷ್ಠರು’ ಕೃತಿ ಬಿಡುಗಡೆ ಮಾಡಲಾಯಿತು
ಯಾದಗಿರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಶರಣ ಶ್ರೇಷ್ಠರು’ ಕೃತಿ ಬಿಡುಗಡೆ ಮಾಡಲಾಯಿತು   

ಯಾದಗಿರಿ: ವಚನ ಸಾಹಿತ್ಯ ಕನ್ನಡ ಸಾಹಿತ್ಯದ ತಾಯಿಬೇರು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ.ಪ್ರದೀಪ ಕುಮಾರ ಹೆಬ್ರಿ ರಚಿಸಿರುವ ‘ಶರಣ ಶ್ರೇಷ್ಠರು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಶರಣರು ರಚಿಸಿದ ವಚನಗಳು ಸರಳವಾಗಿದ್ದವು. ಅವು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುತ್ತಿದ್ದವು. ಜಗತ್ತಿನ ಎಲ್ಲ ಕ್ರಾಂತಿಗಳಿಗಿಂತ ವಚನ ಕ್ರಾಂತಿ ಶ್ರೇಷ್ಠ ಎಂದು ಅಭಿಪ್ರಾಯಪಟ್ಟರು.

ADVERTISEMENT

ವಚನಕಾರರು ಕೇವಲ ಬೋಧನೆ ಮಾಡಲಿಲ್ಲ. ನುಡಿದಂತೆ ನಡೆದರು. ಆದರೆ, ಇಂದು ನಡೆ, ನುಡಿ ಒಂದೇ ಆಗಿರುವವರು ಸಿಗುವುದು ಕಷ್ಟ ಎಂದರು.

ಪ್ರಸ್ತುತ ದಿನಗಳಲ್ಲಿ ಮಠಗಳು ಶಾಲೆ, ಕಾಲೇಜುಗಳನ್ನು ಕಟ್ಟುವ ಅಗತ್ಯವಿಲ್ಲ. ಬದಲಿಗೆ ಧರ್ಮದ ಮಾರ್ಗದಲ್ಲಿ ನಡೆಯುವಂತೆ ಜನರಿಗೆ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.

ಶಾಸಕ ನಾಗನಗೌಡ ಕಂದಕೂರ ಮಾತನಾಡಿ, ಪುಸ್ತಕಗಳನ್ನು ಖರೀದಿಸಿ ಓದುವುದರಿಂದ ಸಾಹಿತಿಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಓದುವುದರಿಂದ ಏಕಾಗ್ರತೆ ಸಾಧಿಸಬಹುದು ಎಂದರು.

ಇಂದಿನ ಆಧುನಿಕ ತಂತ್ರಜ್ಞಾನಗಳ ಭರಾಟೆಯಲ್ಲಿಯೂ ಪುಸ್ತಕ ಓದುವವರ ಸಂಖ್ಯೆ ಕಡಿಮೆ ಆಗಿಲ್ಲ ಎಂಬುದು ಸಮಾಧಾನಕರ ಸಂಗತಿ ಎಂದು ಅಭಿಪ್ರಾಯಪಟ್ಟರು.

ಶರಣರು ತಮ್ಮ ಅನುಭವಗಳನ್ನು ವಚನಗಳ ಮೂಲಕ ದಾಖಲಿಸಿದರು. ಕಾಯಕ, ದಾಸೋಹಕ್ಕೆ ಶರಣರು ಮಹತ್ವ ನೀಡಿದರು. ಶರಣರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ವಚನಗಳನ್ನು ಮಕ್ಕಳಿಗೆ ತಿಳಿಸುವ ಅಗತ್ಯವಿದೆ. ಇದರಿಂದ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಡಾ.ಪ್ರದೀಪಕುಮಾರ್ ಹೆಬ್ರಿ ಮಾತನಾಡಿ, ವಚನಗಳು ಸಾಹಿತ್ಯದ ರತ್ನಗಳಾಗಿವೆ. ಅವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯ ಇದೆ ಎಂದರು.

ಶರಣ ಸಂಸ್ಕೃತಿ ಈ ನೆಲದ ಶ್ರೇಷ್ಠ ಸಂಸ್ಕೃತಿ ಆಗಿದೆ. ವಚನಗಳಲ್ಲಿ ಮಾನವೀಯ ಮೌಲ್ಯಗಳು ಅಡಗಿವೆ. ಎಲ್ಲ ಶಾಲೆಗಳು, ಗ್ರಾಮ ಪಂಚಾಯಿತಿಗಳಿಗೆ ವಚನಗಳ ಕೃತಿಯನ್ನು ನೀಡಬೇಕು ಎಂದು ಹೇಳಿದರು.

ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿದರೆ ಅದು ಬದುಕಿನುದ್ದಕ್ಕೂ ಅವರನ್ನು ಕಾಪಾಡುತ್ತದೆ. ಆ ಸಂಸ್ಕಾರ ವಚನಗಳನ್ನು ಓದುವುದರಿಂದ ಸಿಗುತ್ತದೆ. ಶರಣರು ಶ್ರೇಷ್ಠರು ಎಂದು ಹೇಳುವ ಬದಲು ಅವರ ಶ್ರೇಷ್ಠವಾದ ವಚನಗಳನ್ನು ಓದಬೇಕು ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಪ್ಪ ಎಸ್.ಹೊಟ್ಟಿ, ಚಂದ್ರಕಾಂತ ಕರದಳ್ಳಿ, ಲಿಂಗಣ್ಣ ಪಡಶೆಟ್ಟಿ, ರಾಜನಗೌಡ ಮುದ್ನಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.