ಯಾದಗಿರಿ: ನಗರದ ಹೃದಯಭಾಗವಾದ ಮಹಾತ್ಮಗಾಂಧಿ ವೃತ್ತದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆಗೆ ನೆರಳು ಆಶ್ರಯ ಸಿಕ್ಕಿದೆ.
ಮಾಜಿ ಮುಖ್ಯಮಂತ್ರಿ ದಿ.ವೀರೇಂದ್ರ ಪಾಟೀಲ ಅವರು 1970ರ ದಶಕದಲ್ಲಿ ಈ ಗಾಂಧಿ ಮೂರ್ತಿ ಅನಾವರಣ ಮಾಡಿದ್ದರು. ಮಳೆ, ಬಿಸಿಲಿಗೆ ಮೈಯೊಡ್ಡಿದ್ದ ಮಹಾತ್ಮಗಾಂಧಿ ಮೂರ್ತಿ ಸ್ಥಾಪನೆ ಸ್ಥಳದಲ್ಲಿ ಈಗ ಆಕರ್ಷಕ ಕಾಮಗಾರಿ ನಡೆದಿದೆ.
ಸಮಾರಂಭಗಳು ಆದಾಗ, ಪ್ರತಿಭಟನೆಗಳು ನಡೆದಾಗ ಗಾಂಧೀಜಿ ಜನ್ಮದಿನ, ಪುಣ್ಯ ಸ್ಥರಣೆ ದಿನದಂದು ಮೂರ್ತಿಯನ್ನು ತೊಳೆದು ಪೂಜೆ ಮಾಡಿ ಹೂವಿನ ಹಾರ ಹಾಕುವ ವಾಡಿಕೆ ಇತ್ತು.
ನಗರದ ಸೌಂದರ್ಯೀಕರಣದ ಭಾಗವಾಗಿ ಸ್ಥಳೀಯ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರ ಇಚ್ಛಾಶಕ್ತಿಯಿಂದ ₹15 ಲಕ್ಷ ವೆಚ್ಚದಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ ಕಾಮಗಾರಿ ನಡೆದು ಇನ್ನೇನು ಆನಾವರಣಕ್ಕೆ ಸಿದ್ಧವಾಗಿದೆ.
ಗಾಂಧಿ ವೃತ್ತದ ಸುತ್ತಲೂ ಕಂಬಗಳನ್ನು ನೆಟ್ಟು ಆ ಮೂಲಕ ಮೇಲ್ಭಾಗದಲ್ಲಿ ಯೂರೋಪ್ ದೇಶದಲ್ಲಿ ಸಿದ್ಧವಾಗುವ ಡಾಂಬರ್ ರೂಫ್ (ಸಿಂಗಲ್ಸ್) ಮುಚ್ಚಲಾಗಿದೆ. ಸುತ್ತಲೂ ಸ್ಟೀಲ್ ಗ್ರೀಡ್ ಅಳವಡಿಸಲಾಗಿದೆ. ರಾತ್ರಿ ಹೊತ್ತು ಬಣ್ಣದ ನೀರಿನ ಕಾರಂಜಿ ಬೆಳಗಲಿದೆ. ವೃತ್ತದಲ್ಲಿ ಹೈಮಾಸ್ಟ್ ದೀಪ ಅಳವಡಿಸಿದ್ದು, ಕಟ್ಟೆಯ ಸುತ್ತಲೂ ಗ್ರೈನೆಟ್ ಕಲ್ಲು ಹಾಸಲಾಗಿದೆ.
ಬೇರೆ ವೃತ್ತಗಳೂ ಅಭಿವೃದ್ಧಿಯಾಗಲಿ: ಮಹಾತ್ಮ ಗಾಂಧಿ ವೃತ್ತ ಅಭಿವೃದ್ಧಿಯಾದಂತೆ ನಗರದಲ್ಲಿರುವ ಬೇರೆ ವೃತ್ತಗಳೂ ಅಭಿವೃದ್ಧಿಯಾಗಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಕನಕದಾಸ ವೃತ್ತ, ಸರ್ದಾರ್ ವಲ್ಲಭಭಾಯಿ ವೃತ್ತ, ಮಹರ್ಷಿ ವಾಲ್ಮೀಕಿ ವೃತ್ತ, ಬಾಬು ಜಗಜೀವನರಾಂ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿರುವ ವೃತ್ತಗಳು ವಿದ್ಯುತ್ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳು ನಡೆಯಲಿ ಎಂದು ನಗರದ ಜನತೆಯ ಆಶಯವಾಗಿದೆ.
ಆಕರ್ಷಣೆ ಕೇಂದ್ರವಾಗಲಿರುವ ಮಹಾತ್ಮ ಗಾಂಧಿ ವೃತ್ತ ₹15 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಂಡ ಸುಸಜ್ಜಿತ ಕಾಮಗಾರಿ ಗಾಂಧಿ ತಾತಾನ ಮೂರ್ತಿಗೆ ಕಾರಂಜಿ ನೀರಿನ ಲೈಟಿಂಗ್
ಕೆಕೆಆರ್‌ಡಿಬಿ ಅನುದಾನದಲ್ಲಿ ಮಹಾತ್ಮ ಗಾಂಧಿ ವೃತ್ತದಲ್ಲಿ ಸುಸಜ್ಜಿತ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ನೇತಾಜಿ ಶಾಸ್ತ್ರಿ ವೃತ್ತಗಳ ಅಭಿವೃದ್ಧಿಗೂ ಅನುದಾನ ನಿಗದಿ ಪಡಿಸಲಾಗಿದೆಚನ್ನಾರೆಡ್ಡಿ ಪಾಟೀಲ ತುನ್ನೂರು ಶಾಸಕ
ನಗರದ ಮಹಾತ್ಮ ಗಾಂಧಿ ವೃತ್ತಕ್ಕೆ ತನ್ನದೇ ಆದ ಚರಿತ್ರೆ ಇದ್ದು ಶಾಸಕರು ವೃತ್ತ ಅಭಿವೃದ್ಧಿ ಕಾಮಗಾರಿ ಮಾಡಿರುವುದು ಅಭಿನಂದನೀಯ ಕಾರ್ಯಅಯ್ಯಣ್ಣ ಹುಂಡೇಕಾರ್ ಹಿರಿಯ ನಾಗರಿಕ
‘₹15 ಲಕ್ಷ ವೆಚ್ಚದಲ್ಲಿ ಕಾಮಗಾರಿ’
ಈ ಮೊದಲು ನಗರದ ನೇತಾಜಿ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲು ನಿರ್ಧರಿಸಲಾಗಿತ್ತು. ಅಲ್ಲಿ ಸ್ಥಳಾವಕಾಶ ಕಡಿಮೆ ಇರುವ ಕಾರಣ ಮಹಾತ್ಮ ಗಾಂಧಿ ವೃತ್ತದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಶಾಸಕ ಚನ್ನಾರೆಡ್ಡಿ ಪಾಟೀಲ ಅವರು ನೇತಾಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ವೃತ್ತಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದು ಎರಡು ವೃತ್ತಗಳಲ್ಲಿ ₹15 ಲಕ್ಷ ವೆಚ್ಚದಲ್ಲಿ ಕಾಮಗಾರಿ ಮಾಡಲಾಗುವುದು. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಎನ್ನುತ್ತಾರೆ ನಿರ್ಮಿತಿ ಕೇಂದ್ರದ ಎಂಜಿನಿಯರ್ ನಾಗೇಶ ಕುಲಕರ್ಣಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.