ಹುಣಸಗಿ: ಪಟ್ಟಣದಲ್ಲಿ ಏಳು ದಶಕಗಳಿಂದಲೂ ಕಾರ್ಯನಿರ್ವಹಿಸುತ್ತಿರುವ ಅಂಚೆ ಕಚೇರಿಗೆ ಸಿಬ್ಬಂದಿ ಕೊರತೆ ಎದುರಾಗಿದೆ.
ಕೆಲ ವರ್ಷಗಳ ಹಿಂದೆ ಇಲ್ಲಿ ಪೋಸ್ಟ್ ಮಾಸ್ಟರ್ ಹಾಗೂ ಇಬ್ಬರು ಸಹಾಯಕರು ಕಚೇರಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ, ಸದ್ಯ ಇಲಾಖೆ ಒಬ್ಬರನ್ನು ಮಾತ್ರ ಕೆಲಸಕ್ಕೆ ನಿಯೋಜಿಸಿದೆ. ಇದರಿಂದಾಗಿ ಎರಡು ಕೌಂಟರ್‌ಗಳನ್ನು ನಿಭಾಯಿಸಲು ಹರಸಾಹಸ ಪಡುವಂತಾಗಿದೆ.
ನಾಲ್ಕೈದು ವರ್ಷಗಳಿಂದಲೂ ಈ ಸಮಸ್ಯೆ ಇದೆ. ಆದರೂ ಹಿರಿಯ ಅಧಿಕಾರಿಗಳು ಏಕೆ ಕ್ರಮ ವಹಿಸುತ್ತಿಲ್ಲ ಎಂದು ಪಟ್ಟಣದ ನಾಗರಿಕರು ಪ್ರಶ್ನಿಸುತ್ತಾರೆ.
‘ಪಟ್ಟಣ ಸೇರಿದಂತೆ ಎಲ್ಲೆಡೆ ಅಂಚೆ ಇಲಾಖೆ ಎಂದರೆ ಗೌರವ ಹಾಗೂ ವಿಶ್ವಾಸ. ಇದರಿಂದಾಗಿ ಹೆಚ್ಚಿನ ಜನರು ಇಂದಿಗೂ ತಮ್ಮ ಆರ್ಥಿಕ ಹಾಗೂ ಕಾಗದ ಪತ್ರ ವ್ಯವಹಾರವನ್ನು ಅಂಚೆ ಕಚೇರಿಯಲ್ಲಿ ಮಾಡುತ್ತಾ ಬಂದಿದ್ದಾರೆ’ ಎಂದು ಗ್ರಾಹಕ ಕಿರಣ ಮಠದ ಹೇಳುತ್ತಾರೆ.
‘ಈ ಕಚೇರಿ ಆರ್ಥಿಕ ಹಾಗೂ ಪತ್ರ ವ್ಯವಹಾರಕ್ಕೆ ಮಾತ್ರ ಸೀಮಿತವಾಗದೇ ಸಾಮಾನ್ಯ ಜನರ ವಿವಿಧ ಸೇವೆಗೆ ಬದ್ಧವಾಗಿದೆ. ಆದರೆ, ಸಿಬ್ಬಂದಿ ಕೊರತೆ ಏಕೆ ನೀಗಿಸುತ್ತಿಲ್ಲ’ ಎಂಬುದು ಗ್ರಾಹಕ ನಾಗರಾಜ ರೇಶ್ಮಿ ಅವರ ಪ್ರಶ್ನೆ.
ಹುಣಸಗಿ ತಾಲ್ಲೂಕು ಕೇಂದ್ರವಾಗಿದೆ. ಇಲ್ಲಿ ‘ಬಿ’ ದರ್ಜೆಯ ಉಪ ಅಂಚೆ ಕಚೇರಿ ಇದೆ. ಇದರ ಅಡಿಯಲ್ಲಿ ವಜ್ಜಲ, ಮಾಳನೂರು, ಕೋಳಿಹಾಳ, ಶ್ರೀನಿವಾಸಪುರ ಸೇರಿ ಇತರ ಏಳು ಶಾಖಾ ಕಚೇರಿಗಳು ಬರುತ್ತವೆ. ಈ ಶಾಖಾ ಕಚೇರಿಗಳಲ್ಲಿಯೂ ಆನ್‌ಲೈನ್ ಸೇವೆ ಚಾಲ್ತಿಯಲ್ಲಿದೆ.
ಹುಣಸಗಿಯಲ್ಲಿ ನಿತ್ಯವೂ ಎರಡೂ ಕೌಂಟರ್‌ನಲ್ಲಿ ಆನ್‌ಲೈನ್‌ನಲ್ಲಿಯೇ ಸೇವೆ ಒದಗಿಸಬೇಕು. ತಾಲ್ಲೂಕಿನ ರಾಜನಕೋಳುರ, ಕೊಡೇಕಲ್ಲ ಹಾಗೂ ನಾರಾಯಣಪುರದಲ್ಲಿ ಸಿ ದರ್ಜೆ ಉಪ ಅಂಚೆ ಕಚೇರಿಗಳಿವೆ. ನಿತ್ಯವೂ ನೂರಾರು ಪತ್ರಗಳು ಹಾಗೂ ನೋಂದಾಯಿತ ಪತ್ರಗಳು ಹಾಗೂ ಪಾರ್ಸೆಲ್‌ಗಳು ಬರುತ್ತವೆ. ಅವುಗಳನ್ನು ನಿರ್ವಹಿಸುವುದು ಮತ್ತು ಗ್ರಾಹಕರಿಗೆ ತ್ವರಿತ ಸೇವೆ ನೀಡಲು ವಿಳಂಬವಾಗುತ್ತಿದೆ ಎಂದು ಕೆಲ ಗ್ರಾಹಕರ ದೂರಾಗಿದೆ.
‘ನಿತ್ಯ ಬೆಳಿಗ್ಗೆ 9 ಗಂಟೆಗೆ ಬಂದು ಸಂಜೆ 7 ಗಂಟೆಯವರೆಗೂ ಕೆಲಸ ನಿರ್ವಹಿಸುತ್ತಿರುವುದಾಗಿ’ ಇಲ್ಲಿನ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ವೀರೇಶ ಅಂಗಡಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.