ADVERTISEMENT

ಮಣ್ಣು ಪರೀಕ್ಷೆಗೆ ರೈತರ ನಿರಾಸಕ್ತಿ: ಸ್ವಯಂಪ್ರೇರಿತರಾಗಿ ಮುಂದೆ ಬರಲು ಹಿಂದೇಟು

ಫಲವತ್ತತೆ ನೋಡಿ ಬೆಳೆಗಳ ಬಿತ್ತನೆ, ಆರೈಕೆ ಸಹಾಯ

ಮಲ್ಲಿಕಾರ್ಜುನ ನಾಲವಾರ
Published 3 ಜನವರಿ 2026, 6:54 IST
Last Updated 3 ಜನವರಿ 2026, 6:54 IST
ಯಾದಗಿರಿ ನಗರದ ಮಣ್ಣು ಆರೋಗ್ಯ ಕೇಂದ್ರ
ಯಾದಗಿರಿ ನಗರದ ಮಣ್ಣು ಆರೋಗ್ಯ ಕೇಂದ್ರ   

ಯಾದಗಿರಿ: ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಧರ್ಮಗಳನ್ನು ವಿಶ್ಲೇಷಿಸಿ ಮಣ್ಣಿನ ಆರೋಗ್ಯವನ್ನು ಪತ್ತೆ ಮಾಡುವ ಮಣ್ಣಿನ ಪರೀಕ್ಷೆಗೆ ಬಹುತೇಕ ರೈತರು ಆಸಕ್ತಿ ತೋರಿಸುತ್ತಿಲ್ಲ.

ಕೃಷಿ ಪ್ರಧಾನವಾದ ಯಾದಗಿರಿ ಜಿಲ್ಲೆಯ ಲಕ್ಷಾಂತರ ರೈತರು ಮುಂಗಾರು ಹಂಗಾಮಿನಲ್ಲಿ 4.16 ಲಕ್ಷ ಹೆಕ್ಟೇರ್ ಹಾಗೂ ಹಿಂಗಾರು ಹಂಗಾಮಿನಲ್ಲಿ 49,909 ಹೆಕ್ಟೇರ್‌ ಪ್ರದೇಶದಲ್ಲಿ ನಾನಾ ಬಗೆಯ ಬೆಳೆಗಳ ಬಿತ್ತನೆ ಮಾಡುತ್ತಾರೆ. ಆದರೆ, ಮಣ್ಣು ಪರೀಕ್ಷೆಗೆ ಸ್ವಯಂ ಪ್ರೇರಿತರಾಗಿ ಮುಂದೆ ಬರುವವರು ಸಂಖ್ಯೆ ಎರಡಂಕಿಯೂ ದಾಟುತ್ತಿಲ್ಲ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ರಾಜ್ಯವಲಯ ಮಣ್ಣು ಆರೋಗ್ಯ ಅಭಿಯಾನ, ಮಣ್ಣು ಆರೋಗ್ಯ ಮತ್ತು ಫಲವತ್ತತೆ ಕಾರ್ಯಕ್ರಮದಂತಹ ವಿವಿಧ ಯೋಜನೆಗಳಡಿ ಉಚಿತ ಹಾಗೂ ಕನಿಷ್ಠ ದರದಲ್ಲಿ ಮಣ್ಣಿನ ಪರೀಕ್ಷೆ ನಡೆಸಲಾಗುತ್ತದೆ. ಕೃಷಿ ಅಧಿಕಾರಿಗಳು ತಾವೇ ಗುರಿಹಾಕಿಕೊಂಡು ಮಣ್ಣು ಪರೀಕ್ಷೆ ಮಾಡಿ, ವರದಿಯನ್ನು ರೈತರಿಗೆ ಕೊಟ್ಟರೂ ಅದರಲ್ಲಿ ಏನು ಬಂದಿದೆ ಎಂಬುದನ್ನು ನೋಡದಷ್ಟು ನಿರ್ಲಕ್ಷ್ಯವಿದೆ.

ADVERTISEMENT

2025–26ರಲ್ಲಿ ಕೃಷಿ ಇಲಾಖೆಯು ಮಣ್ಣಿನ ಆರೋಗ್ಯ ಪತ್ತೆಗಾಗಿ 8,250 ಮಾದರಿ ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿತ್ತು. ಹಾಕಿಕೊಂಡ ಗುರಿಗಿಂತ 2,292 ಹೆಚ್ಚು ಕಲೆಹಾಕಿ ಅಂದರೆ, 10,542 ಪರೀಕ್ಷೆಗಳನ್ನು ಮಾಡಿ ಮಣ್ಣನ್ನು ವಿಶ್ಲೇಷಣೆಗೆ ಒಳಪಡಿಸಿದೆ. ಆದರೆ, ಸ್ವಯಂ ಪ್ರೇರಿತರಾಗಿ ತಮ್ಮ ಜಮೀನಿನ ಮಣ್ಣು ಪರೀಕ್ಷೆಗೆ ಒಳಪಡಿಸುವಂತೆ ಕೇಳಿಕೊಂಡು ಬಂದವರು 23 ರೈತರು ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ತೋಟಗಾರಿಕೆ ಹೊಲಗಳಲ್ಲಿ ಪ್ರತಿ ವರ್ಷ ಮತ್ತು ಒಣ ಹಾಗೂ ನೀರಾವರಿ ಜಮೀನುಗಳಲ್ಲಿ ಮೂರು ವರ್ಷಕ್ಕೆ ಒಮ್ಮೆಯಾದರು ಮಣ್ಣು ಪರೀಕ್ಷೆ ಮಾಡಿಸಬೇಕು. ಇದರಿಂದ ಮಣ್ಣಿನ ಆರೋಗ್ಯ ಹೇಗಿದೆ? ನಿಖರವಾಗಿ ಮಣ್ಣಿನಲ್ಲಿ ಇರುವ ಪೋಷಕಾಂಶಗಳ ಪ್ರಮಾಣ ಎಷ್ಟು? ನೀರು ಹಿಡಿದಿಟ್ಟುಕೊಳ್ಳವ ಸಾಮರ್ಥ್ಯ ಯಾವ ಮಟ್ಟದಲ್ಲಿದೆ ಎಂಬುದು ತಿಳಿದುಕೊಳ್ಳಬಹುದು.

‘ಮಣ್ಣಿನ ಬಗ್ಗೆ ಕಾಳಜಿ ಮತ್ತು ಅರಿವು ಇದ್ದವರು ತಾವೇ ಮಾದರಿಗಳನ್ನು ತೆಗೆದುಕೊಂಡು ಬಂದು ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಅಂತಹ ರೈತರ ಸಂಖ್ಯೆ 23ರಷ್ಟಿದೆ. ನಾವೇ ಕಡಿಮೆ ಮಾದರಿಯನ್ನು ಕಲೆಹಾಕಿರುವ ಗ್ರಾಮ ಪಂಚಾಯಿತಿಗಳ ಜಮೀನುಗಳನ್ನು ಆಯ್ಕೆ ಮಾಡಿಕೊಂಡು ಪರೀಕ್ಷಿಸುತ್ತೇವೆ. ಪರೀಕ್ಷೆಯ ವರದಿಯ ಕಾರ್ಡ್‌ಗಳನ್ನು ರೈತರ ಕೈಗಿಟ್ಟರೂ ಅದರಲ್ಲಿ ಏನಿದೆ, ಆಗಿರುವ ಶಿಫಾರಸು ಏನು ಎಂಬುದನ್ನು ಕಣ್ಣಾಯಿಸುವುದಿಲ್ಲ’ ಎನ್ನುತ್ತಾರೆ ಕೃಷಿ ಇಲಾಖೆ ಕಚೇರಿಯ ರವಿಕುಮಾರ್.

‘ಅನಾವಶ್ಯಕ ಖರ್ಚು ನಿಯಂತ್ರಣ’

‘ಒಂದು ಬೆಳೆ ಚೆನ್ನಾಗಿ ಬೆಳೆದು ಒಳ್ಳೆಯ ಇಳುವರಿ ಕೊಡಬೇಕಾದರೆ ಆ ಮಣ್ಣನಲ್ಲಿ 16ರಿಂದ 17 ಬಗೆಯ ಪೋಷಕಾಂಶಗಳು ಇರಬೇಕು. ಮಣ್ಣಿನ ಪರೀಕ್ಷೆಯಿಂದ ಯಾವೆಲ್ಲ ಪೋಷಕಾಂಶಗಳಿಲ್ಲ ಎಂಬುದನ್ನು ತಿಳಿದು ಮಣ್ಣಿನ ಅಗತ್ಯಕ್ಕೆ ತಕ್ಕಷ್ಟು ಗೊಬ್ಬರ ಔಷಧಿ ಕೊಟ್ಟು ಖರ್ಚು ನಿಯಂತ್ರಿಸಬಹುದು’ ಎಂದು ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಣ್ಣು ಪರೀಕ್ಷೆಯನ್ನು ಮಾಡಿಸದೆ ಯಾವ ಬೆಳೆಗೆ ಎಷ್ಟು ಗೊಬ್ಬರ ಹಾಕಬೇಕು ಎಷ್ಟು ಲೀಟರ್ ಔಷಧಿ ಸಿಂಪರಣೆ ಮಾಡಬೇಕು ಎಂಬುದನ್ನು ಬಹುತೇಕ ರೈತರಿಗೆ ತಿಳಿಯುತ್ತಿಲ್ಲ. ₹ 2000 ಖರ್ಚು ಮಾಡುವಲ್ಲಿ ₹ 10 ಸಾವಿರ ಖರ್ಚು ಮಾಡಿ ಆರ್ಥಿಕ ಹೊರೆಯನ್ನು ಅನುಭವಿಸುತ್ತಿದ್ದಾರೆ. ರೈತರು ಮಣ್ಣಿಗೂ ಜೀವವಿದೆ ಎಂಬುದನ್ನು ಅರಿತು ಮಣ್ಣಿನ ಆರೋಗ್ಯ ಕಾಪಾಡುವತ್ತ ಗಮನಹರಿಸಬೇಕು’ ಎನ್ನುತ್ತಾರೆ.