ADVERTISEMENT

ಗಣಿತ ಪರೀಕ್ಷೆ: ‘ಹಳೆ ಪ್ರಶ್ನೆಪತ್ರಿಕೆ’ ವಿತರಣೆ!

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 19:30 IST
Last Updated 30 ಜೂನ್ 2020, 19:30 IST
ಹಳೆ ಪಠ್ಯಕ್ರಮದ ಪ್ರಶ್ನೆ ಪತ್ರಿಕೆ
ಹಳೆ ಪಠ್ಯಕ್ರಮದ ಪ್ರಶ್ನೆ ಪತ್ರಿಕೆ   

ಕೆಂಭಾವಿ (ಯಾದಗಿರಿ ಜಿಲ್ಲೆ): ಪಟ್ಟಣದಲ್ಲಿ ಜೂನ್‌ 27ರಂದು ನಡೆದ ಗಣಿತ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ನಾಲ್ವರು ವಿದ್ಯಾರ್ಥಿನಿಯರು ಹಾಗೂ ಒಬ್ಬ ವಿದ್ಯಾರ್ಥಿಗೆ ಹಳೆ ಪಠ್ಯಕ್ರಮದ ಪ್ರಶ್ನೆಪತ್ರಿಕೆ ನೀಡಲಾಗಿದೆ.

ಈ ಐವರೂ ಹೊಸದಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುತ್ತಿದ್ದರು.

‘ನಾವು ಕೆಂಭಾವಿ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿಯರು. ನಮಗೆ 2018ನೇ ಸಾಲಿನ ಗಣಿತ ಪಠ್ಯಕ್ರಮದ ಪ್ರಶ್ನೆ ಪತ್ರಿಕೆ ನೀಡಲಾಗಿತ್ತು. ಅರ್ಧದಷ್ಟು ಪ್ರಶ್ನೆಗಳಿಗೆ ಉತ್ತರಿಸಿದಾಗ ಅದು ಗಮನಕ್ಕೆ ಬಂತು. ಮೇಲ್ವಿಚಾರಕರ ಗಮನಕ್ಕೆ ತಂದೆವು. ಪ್ರಯೋಜನವಾಗಲಿಲ್ಲ. ಭವಿಷ್ಯದ ಚಿಂತೆ ಕಾಡುತ್ತಿದೆ’ ಎಂದು ವಿದ್ಯಾರ್ಥಿನಿಯರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಹಳೆ ಪ್ರಶ್ನೆಪತ್ರಿಕೆ ಕೊಟ್ಟು ಅಧಿಕಾರಿಗಳು ಗೊಂದಲ ಸೃಷ್ಟಿಸಿದ್ದಾರೆ. ಇದರಿಂದ ನಮ್ಮ ಮಕ್ಕಳಿಗೆ ತೊಂದರೆಯಾಗಿದೆ. ಕೂಡಲೇ ಪರೀಕ್ಷೆ ನಡೆಸಬೇಕು ಮತ್ತು ಹಳೆ ಪಶ್ನೆಪತ್ರಿಕೆ ನೀಡಿ ಬೇಜವಾಬ್ದಾರಿ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಪೋಷಕರು ಒತ್ತಾಯಿಸಿದ್ದಾರೆ.

‘ಕೆಂಭಾವಿ ಪರೀಕ್ಷಾ ಕೇಂದ್ರಗಳಲ್ಲಿ ಅವಾಂತರ ನಡೆದದ್ದು ಗಮನಕ್ಕೆ ಬಂದಿದೆ. ಬದಲಿ ಪ್ರಶ್ನೆಪತ್ರಿಕೆ ನೀಡಿದ ಬಗ್ಗೆ ಸಂಬಂಧಿಸಿದ ಮೇಲ್ವಿಚಾರಕರಿಗೆ ನೋಟಿಸ್‌ ಜಾರಿ ಮಾಡಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಸುರಪುರ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನ ಓಲೇಕಾರ ಪ್ರತಿಕ್ರಿಯಿಸಿದರು.

‘ಕೆಂಭಾವಿಯಲ್ಲಿ ಹಳೆ ಪ್ರಶ್ನೆಪ‍ತ್ರಿಕೆ ನೀಡಿರುವ ಬಗ್ಗೆ ದೂರುಗಳು ಬಂದಿದ್ದು, ಪರಿಶೀಲಿಸುತ್ತಿದ್ದೇವೆ. ಮೇಲ್ವಿಚಾರಕರಿಂದ ತಪ್ಪಾಗಿದ್ದರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರ್ಗಿ ವಲಯದ ಹೆಚ್ಚುವರಿ ಆಯುಕ್ತನಲಿನ್ ಅತುಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.