
ಯಾದಗಿರಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ ಮಂಗಳವಾರ ಸಂಪನ್ನಗೊಂಡಿತು.
ಸಚಿವ ಸತೀಶ ಜಾರಕಿಹೊಳಿ ಅವರ ಮನವಿ ಮೇರೆಗೆ ಬೆಳಗಾವಿಯಲ್ಲಿ 6ನೇ ವೈಜ್ಞಾನಿಕ ಸಮ್ಮೇಳನ ನಡೆಸುವ ನಿರ್ಣಯ ಕೈಗೊಳ್ಳಲಾಯಿತು.
ಸಂಚಾರಿ ಡಿಜಿಟಲ್ ತಾರಾಲಯ, ಇಸ್ರೊ ಮತ್ತು ವಾಯುಪಡೆಯ ಸಂಚಾರಿ ಡಿಜಿಟಿಲ್ ವಾಹನಗಳು ವಿದ್ಯಾರ್ಥಿಗಳಲ್ಲಿ ಖಗೋಳ ವಿಜ್ಞಾನದ ಕೌತುಕವನ್ನು ಬಿತ್ತಿ, ವಿಜ್ಞಾನ ಕಲಿಕೆಗೆ ಆಸಕ್ತಿ ಮೂಡಿಸಿದವು. ಗೋಷ್ಠಿಗಳನ್ನು ಬದಿಗಿರಿಸಿ ಸರತಿ ಸಾಲಿನಲ್ಲಿ ನಿಂತು ವೀಕ್ಷಣೆ ಮಾಡಿದರು.
ಕಲ್ಯಾಣದ ನೆಲದಲ್ಲಿ ಮೌಢ್ಯ ಮತ್ತು ಕಂದಾಚಾರಗಳು ಅಳಿದು, ವೈಚಾರಿಕತೆ ಮತ್ತು ವಿಜ್ಞಾನ ಜತೆಯಾಗಿ ಸಾಗಲಿ ಎಂಬ ಆಶಯ ವ್ಯಕ್ತವಾಯಿತು. ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಪವಾಡಗಳ ಅನಾವರಣದ ಪ್ರಾತ್ಯಕ್ಷಿಕೆಯೂ ಜರುಗಿತು. ಸಂವಿಧಾನ– ಸಂವೇದ, ಕಂಚಾರ, ವಿಜ್ಞಾನ ದೀವಿಗೆ, ರೈತರ ಎದುರಿಸುತ್ತಿರುವ ಸಮಸ್ಯೆಗಳ ಚರ್ಚೆಗೂ ವೇದಿಕೆಯಾಯಿತು.
ಸಾಧಕರಿಗೆ ಪ್ರೋತ್ಸಾಹಿಸಲು ಜೀವಮಾನ ಸಾಧನಾ, ವಿಶಿಷ್ಟ ಸೇವಾ, ರಾಜ್ಯಮಟ್ಟದ ಡಾ.ಎಚ್.ಎನ್ ಹಾಗೂ ಚೈತನ್ಯ ಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.