ಸುರಪುರ: ಸಹಕಾರ ಸಂಘಗಳ ಮೂಲಕ ವ್ಯವಹರಿಸಲು ರೈತರ ನಾಡಿ ಮಿಡಿತವಾಗಿರುವ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ (ಕೆವೈಡಿಸಿಸಿ ಬ್ಯಾಂಕ್) ಶಾಖೆ ಸುರಪುರ ನಗರದಲ್ಲಿ ಮಾತ್ರ ಇದ್ದು, ಪ್ರತಿ ನಿತ್ಯ ಗ್ರಾಹಕರ ನೂಕು ನುಗ್ಗಲು ಸಾಮಾನ್ಯವಾಗಿದೆ.
ಬ್ಯಾಂಕ್ ತೆರೆಯವುದಕ್ಕೆ ಮುಂಚೆಯೇ ಗ್ರಾಹಕರ ಉದ್ದನೆಯ ಸಾಲು ಇರುತ್ತದೆ. 90 ಕಿ.ಮೀ ದೂರದ ನಾರಾಯಣಪುರದಿಂದಲೂ ರೈತಾಪಿ ಗ್ರಾಹಕರು ಬ್ಯಾಂಕಿಗೆ ಬರುತ್ತಾರೆ. ತಮ್ಮ ಕೆಲಸ ಮಾಡಿಸಿಕೊಳ್ಳಲು ಅವರು ಪರದಾಡುವ ದೃಶ್ಯ ಕಂಡು ಬರುತ್ತಿದೆ.
ಸುರಪುರ ಮತ್ತು ಹುಣಸಗಿ ತಾಲ್ಲೂಕುಗಳು ಸುರಪುರದ ನಗರದ ಡಿಸಿಸಿ ಬ್ಯಾಂಕಿನ ವ್ಯಾಪ್ತಿಗೆ ಒಳಪಡುತ್ತವೆ. ಎರಡೂ ತಾಲ್ಲೂಕುಗಳಲ್ಲಿ 43 ಪ್ರಾಥಮಿಕ ಗ್ರಾಹಕರ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಈ ಸಹಕಾರ ಸಂಘಗಳಲ್ಲಿ ಒಂದು ಲಕ್ಕಕ್ಕೂ ಹೆಚ್ಚು ರೈತರು ಸದಸ್ಯತ್ವ ಹೊಂದಿದ್ದಾರೆ. ಈ ಎಲ್ಲ ರೈತರಿಗೆ ಸಾಲ ನೀಡುವುದು ಸೇರಿದಂತೆ ಇತರ ಕೃಷಿ ಚಟುವಟಿಕೆಗಳನ್ನು ಉತ್ತೇಜಿಸಲು ನಗರದ ಡಿಸಿಸಿ ಬ್ಯಾಂಕ್ ಮೇಲೆ ಅವಲಂಬನೆ ಇದೆ. ನಿತ್ಯವೂ 43 ಸಂಘಗಳ ಮುಖ್ಯ ಕಾರ್ಯ ನಿರ್ವಾಹಕರು ಬ್ಯಾಂಕಿಗೆ ಬರುತ್ತಾರೆ.
ಬ್ಯಾಂಕಿನಲ್ಲಿ 36 ಸಾವಿರ ಖಾತೆದಾರರು ಇದ್ದಾರೆ. ಅಲ್ಲದೇ ಗೃಹಲಕ್ಷ್ಮಿ, ಅನ್ನಭಾಗ್ಯ, ವೃದ್ಧಾಪ್ಯ ಸೇರಿದಂತೆ ವಿವಿಧ ವೇತನಗಳು, ಪರಿಹಾರ ಸೇರಿದಂತೆ ಸರ್ಕಾರ ಎಲ್ಲ ಯೋಜನೆಗಳ ಫಲಾನುಭವಿಗಳ ಬಹುತೇಕ ಖಾತೆಗಳು ಈ ಬ್ಯಾಂಕಿನಲ್ಲಿ ಇವೆ.
ನಿತ್ಯ 500ಕ್ಕೂ ಹೆಚ್ಚು ಓಚರ್‌ಗಳ ವಹಿವಾಟು ನಡೆಯುತ್ತದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಗ್ರಾಹಕರು ಬರುವುದರಿಂದ ಸ್ಥಳದ ಕೊರತೆಯೂ ಇದೆ. ಗ್ರಾಹಕರು ಬ್ಯಾಂಕಿನ ಹೊರಗಡೆಯೂ ಕಾಯುವಂತಾಗಿದೆ.
ಕೇವಲ 6 ಜನ ಸಿಬ್ಬಂದಿ ಇಷ್ಟೊಂದು ವ್ಯವಹಾರ, ಖಾತೆ ನಿಯಂತ್ರಿಸಲು ಕಷ್ಟ ಸಾಧ್ಯ. ಇನ್ನಷ್ಟು ಸಿಬ್ಬಂದಿ ಮತ್ತು ದೊಡ್ಡ ಕಟ್ಟಡದ ಅವಶ್ಯಕತೆ ಇದೆ. ಸಂಜೆವರೆಗೆ ಕಾಯ್ದರೂ ಗ್ರಾಹಕರು ತಮ್ಮ ಕೆಲಸವಾಗದೆ ವಾಪಸ್ ಹೋಗುವ ಪ್ರಸಂಗಗಳು ನಡೆದಿವೆ.
ಯಾದಗಿರಿ ಜಿಲ್ಲೆಯಾಗಿ 14 ವರ್ಷ ಕಳೆದರೂ ಸಹಕಾರ ಬ್ಯಾಂಕ್‍ನ ಕೇಂದ್ರ ಕಚೇರಿ ಕಲಬುರಗಿಯಲ್ಲಿಯೇ ಇದೆ. ಯಾದಗಿರಿಯ ಜಿಲ್ಲೆಯ ಆರು ತಾಲ್ಲೂಕುಗಳೂ ಕಲಬುರಗಿ ಕಚೇರಿಗೆ ಒಳಪಡುತ್ತವೆ. ಆದ್ದರಿಂದ ಈ ಬ್ಯಾಂಕಿಗೆ ಕೆವೈಡಿಸಿಸಿ (ಕಲಬುರಗಿ ಮತ್ತು ಯಾದಗಿರಿ) ಬ್ಯಾಂಕ್ ಎಂದು ಕರೆಯಲಾಗುತ್ತದೆ. ಇದರಿಂದ ವ್ಯವಹಾರಕ್ಕೆ ತೊಂದರೆಯಾಗುತ್ತಿದೆ. ಯಾದಗಿರಿ ಜಿಲ್ಲೆಗೆ ಪ್ರತ್ಯೇಕ ಕೇಂದ್ರ ಕಚೇರಿ ಮಂಜೂರು ಮಾಡಬೇಕೆನ್ನುವ ಕೂಗು ಜೋರಾಗಿಯೇ ಇದೆ.
ಗ್ರಾಹಕರ ಸಂಖ್ಯೆ ಅಧಿಕವಾಗಿರುವುದರಿಂದ ಮತ್ತು ಸಂಘಗಳಿಗೆ ಸದಸ್ಯರಾಗಿರುವ ರೈತರ ಸಂಖ್ಯೆಯೂ ಅಧಿಕವಾಗಿರುವುದರಿಂದ ಗ್ರಾಹಕರ ದಟ್ಟಣೆ ನಿಯಂತ್ರಿಸಲು ಹುಣಸಗಿ ಮತ್ತು ಕೆಂಭಾವಿಗಳಲ್ಲಿ ಡಿಸಿಸಿ ಬ್ಯಾಂಕ್‍ಗಳ ಶಾಖೆ ತೆರೆಯಬೇಕೆಂಬುದು ಗ್ರಾಹಕರು ಮತ್ತು ರೈತರ ಆಗ್ರಹ.
43 - ಪ್ರಾಥಮಿಕ ಸಹಕಾರ ಸಂಘಗಳು 1 ಲಕ್ಷ - ಸಂಘಗಳ ಸದಸ್ಯತ್ವ ಹೊಂದಿರುವ ರೈತರು 36 ಸಾವಿರ - ಡಿಸಿಸಿ ಬ್ಯಾಂಕಿನಲ್ಲಿರುವ ಖಾತೆಗಳು
ತಾಲ್ಲೂಕಿನ ಕರಡಕಲ್‍ದಿಂದ ಸುರಪುರಕ್ಕೆ ಆಗಮಿಸಿ ಬ್ಯಾಂಕಿನಲ್ಲಿ ವ್ಯವಹರಿಸುವುದು ತೊಂದರೆಯಾಗಿದೆ. ಕೆಂಭಾವಿಯಲ್ಲಿ ಶಾಖೆ ತೆರೆಯಬೇಕುಬಂದೇನವಾಜ ಗ್ರಾಹಕ ಕರಡಕಲ್
ರೈತರ ಖಾತೆಯ ಜತೆಗೆ ಸರ್ಕಾರಿ ಯೋಜನೆಗಳ ಫಲಾನುಭವಿಗಳ ಖಾತೆಗಳು ಅಧಿಕ ಸಂಖ್ಯೆಯಲ್ಲಿರುವುದರಿಂದ ಸೇವೆ ನೀಡುವಲ್ಲಿ ವ್ಯತ್ಯಯ ಉಂಟಾಗುತ್ತಿದೆಶಿವಲಿಂಗಪ್ಪ ವೆಂಕಟಗಿರಿ ವ್ಯವಸ್ಥಾಪಕ
ನಬಾರ್ಡ್ ಮಾನದಂಡಗಳ ಪ್ರಕಾರ ಯಾದಗಿರಿ ಜಿಲ್ಲೆಗೆ ಪ್ರತ್ಯೇಕ ಕೇಂದ್ರ ಕಚೇರಿ ಮತ್ತು ಶಾಖೆಗಳನ್ನು ತೆರೆಯುವ ಅರ್ಹತೆ ಕೆವೈಡಿಸಿಸಿ ಬ್ಯಾಂಕಿಗೆ ಇಲ್ಲ.ಬಾಪುಗೌಡ ಪಾಟೀಲ ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.