
ಯಾದಗಿರಿ ನಗರದಲ್ಲಿ ಜಿಲ್ಲಾ ಈಜುಕೊಳವನ್ನು ಔತಣಕೂಟಕ್ಕಾಗಿ ಅಲಂಕರಿಸಿದ್ದು
ಯಾದಗಿರಿ: ಇಲ್ಲಿನ ಜಿಲ್ಲಾ ಕ್ರೀಡಾ ಸಂಕೀರ್ಣ ಆವರಣದಲ್ಲಿನ ಜಿಲ್ಲಾ ಈಜುಕೊಳ್ಳವನ್ನು ಕ್ರೀಡಾಕೂಟದ ಅಂಗವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು (ಆರ್‌ಡಿಪಿಆರ್) ಶುಕ್ರವಾರ ತಡರಾತ್ರಿವರೆಗೆ ಔತಣಕೂಟಕ್ಕೆ ಬಳಕೆ ಮಾಡಿಕೊಂಡಿದೆ.
ಆರ್‌ಡಿಪಿಆರ್ ಇಲಾಖೆಯು ಜಿಲ್ಲಾ ಕ್ರೀಡಾಂಗಣದಲ್ಲಿ ನೌಕರರ ಕ್ರೀಡಾಕೂಟ ಆಯೋಜಿಸಿದ್ದು, ರಾತ್ರಿಯ ಔತಣಕೂಟಕ್ಕಾಗಿ ಈಜುಕೊಳವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ನೀರಿನಲ್ಲಿ ತಾತ್ಕಾಲಿಕ ಮೋಟಾರ್ ಇರಿಸಿ ಕಾರಂಜಿ ಸೃಷ್ಟಿಸಲಾಗಿತ್ತು. ನೀರಿನಲ್ಲಿ ಬಲೂನ್‌ಗಳನ್ನು ಹಾಕಿ, ಕೊಳದ ಬದಿಯಲ್ಲಿ ಹತ್ತಾರು ಟೇಬಲ್‌ಗಳು ಹಾಗೂ ಕುರ್ಚಿಗಳನ್ನು ಹಾಕಿ ರೆಸಾರ್ಟ್ ಮಾದರಿಗೆ ಪರಿವರ್ತಿಸಲಾಗಿತ್ತು.
‘ರಾತ್ರಿ 8ರ ಸುಮಾರಿಗೆ ಶುರುವಾದ ಔತಣಕೂಟವು ರಾತ್ರಿ 1 ಗಂಟೆವರೆಗೆ ನಡೆದಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿದ್ದರು. ಅಧಿಕಾರಿಗಳ ಕೆಲವು ಕುಟುಂಬ ಸದಸ್ಯರೂ ಬಂದಿದ್ದರು. ಕೊಳದ ಬಲಬದಿಯಲ್ಲಿ ಚಿಕ್ಕ ವೇದಿಕೆ ನಿರ್ಮಿಸಿದ್ದು, ಔತಣಕೂಟದ ಜೊತೆಗೆ ಸಂಗೀತ ಕಾರ್ಯಕ್ರಮವು ನಡೆದಿತ್ತು’ ಎಂದು ಔತಣಕೂಟದಲ್ಲಿ ಭಾಗಿಯಾಗಿದ್ದ ಕಾರ್ಮಿಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಎರಡೂ ಕೊಳಗಳ ನಡುವೆ ಮಡಿಕೆಗಳು, ವಿದ್ಯುತ್ ಲೈಟ್‌ಗಳನ್ನು ಇರಿಸಿ ಹೊಗೆ ಬರುವಂತೆ ಮಾಡಲಾಗಿದೆ. ಇಡೀ ಕೊಳವೆ ಅಲಂಕರಿಸಲು ಎರಡು ದಿನಗಳಾಗಿದೆ. ಕಳೆದ ಬಾರಿಯೂ ಇದೇ ರೀತಿಯಾಗಿ ಔತಣಕೂಟ ಆಯೋಜನೆ ಮಾಡಲಾಗಿತ್ತು’ ಎಂದರು.
ಕ್ರೀಡಾಪಟುಗಳ ಆಕ್ಷೇಪ: ಕ್ರೀಡಾಪಟುಗಳಿಗಾಗಿ ನಿರ್ಮಿಸಿರುವ ಸಾರ್ವಜನಿಕ ಈಜುಕೊಳವನ್ನು ಪರಿವರ್ತಿಸಿ, ತಡರಾತ್ರಿವರೆಗೆ ಪಾರ್ಟಿಗೆ ಬಳಸಿದ್ದು ಖಂಡನೀಯ. ಈಜುಕೊಳ ಗಲೀಜಾದರೆ ವೃತ್ತಿಪರ ಕ್ರೀಡಾಪಟುಗಳಿಗೆ ತೊಂದರೆ ಆಗುತ್ತದೆ ಎಂದು ಕ್ರೀಡಾಪಟುಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಸ್ನಾಯುಗಳ ಬಲವರ್ಧನೆಗೆ ಕ್ರೀಡಾಪಟುಗಳಿಗೆ ಈಜು ಅವಶ್ಯ. ನಿತ್ಯ ತೆರೆದಿರಬೇಕು ಎಂಬ ನಿಯಮವಿದೆ. ಸರಿಯಾದ ವ್ಯವಸ್ಥೆ ಇಲ್ಲವೆಂದು ಬಾಗಿಲು ಹಾಕಿರುತ್ತಾರೆ. ಬೇಸಿಗೆಯ ಕೆಲವು ದಿನಗಳ ಮಾತ್ರ ತೆರೆದಿರುತ್ತಾರೆ. ಅಧಿಕಾರಿಗಳು ತಮ್ಮ ಆಸ್ತಿಯಂತೆ ಬಳಸಿಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು’ ಎನ್ನುತ್ತಾರೆ ಕ್ರೀಡಾಪಟು ಲೋಕೇಶ ರಾಠೋಡ್.
ಈ ಬಗ್ಗೆ ಪ್ರತಿಕ್ರಿಯೆಗೆ ಅಧಿಕಾರಿಗಳು ಲಭ್ಯವಾಗಲಿಲ್ಲ.