ADVERTISEMENT

ಯಾದಗಿರಿ: ಗಣಿತ ಶಿಕ್ಷಕನಿಂದ ಮೊಬೈಲ್‌ ಕ್ಯಾಂಟೀನ್‌

ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ

ಪವನ ಕುಲಕರ್ಣಿ
Published 19 ಆಗಸ್ಟ್ 2020, 19:31 IST
Last Updated 19 ಆಗಸ್ಟ್ 2020, 19:31 IST
ಕೆಂಭಾವಿ ಪಟ್ಟಣದ ಯಡಿಯಾಪುರ ರಸ್ತೆಯಲ್ಲಿ ಬಾಲಾಜಿ ಕ್ಯಾಂಟೀನ್‍ನಲ್ಲಿ ಶಿಕ್ಷಕ ಸಂತೋಷ
ಕೆಂಭಾವಿ ಪಟ್ಟಣದ ಯಡಿಯಾಪುರ ರಸ್ತೆಯಲ್ಲಿ ಬಾಲಾಜಿ ಕ್ಯಾಂಟೀನ್‍ನಲ್ಲಿ ಶಿಕ್ಷಕ ಸಂತೋಷ   

ಕೆಂಭಾವಿ: ಪಟ್ಟಣದಲ್ಲಿ ಗಣಿತ ಶಿಕ್ಷಕರೊಬ್ಬರು ಕೊರೊನಾ ಸಂಕಷ್ಟದಿಂದ ಜೀವನೋಪಾಯಕ್ಕಾಗಿ ಬೇರೆ ದಾರಿ ಕಾಣದೆ ಬೀದಿ ಬದಿಯಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಶಾಲೆಯ ಮಕ್ಕಳನ್ನು ಕರೆತರಲೆಂದು ಖರೀದಿಸಿದ ‘ಟಾಟಾ ಮ್ಯಾಜಿಕ್’ ವಾಹನ ಈಗ ಮೊಬೈಲ್‌ ಕ್ಯಾಂಟೀನ್‌ ನಡೆಸಲು ಬಳಕೆ ಆಗುತ್ತಿದೆ.

ಪಟ್ಟಣದ ಪ್ರತಾಪಗಿರಿ ವೆಂಕಟಸುಬ್ಬಯ್ಯ ಶಾಸ್ತ್ರೀ (ಪಿವಿಎಸ್) ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಹಾಗೂ ಗಣಿತ ಶಿಕ್ಷಕ ಸಂತೋಷ ಹೋಟೆಲ್ ಉದ್ಯಮದತ್ತ ಮುಖ ಮಾಡಿದ ಶಿಕ್ಷಕ.

ಐದು ತಿಂಗಳ ಹಿಂದೆಯಷ್ಟೇ ಮಕ್ಕಳಿಗೆ ಗಣಿತದ ಲೆಕ್ಕ ಬಿಡಿಸಿಕೊಡುತ್ತಿದ್ದ ಇವರು ಇದೀಗ ರಸ್ತೆಯಲ್ಲಿ ಇಡ್ಲಿ ಬಂಡಿ ಶುರುವಿಟ್ಟುಕೊಂಡು ಆರ್ಥಿಕ ಸಂಕಷ್ಟದಿಂದ ಪಾರಾಗಲು ಹಾಗೂ ಬದುಕಿನ ಹೊಸ ಭರವಸೆಯನ್ನೂ ಕಂಡುಕೊಂಡಿದ್ದಾರೆ.

ADVERTISEMENT

ಹಳೆ ಬಸ್ ನಿಲ್ದಾಣದ ಹತ್ತಿರ ಯಡಿಯಾಪುರ ರಸ್ತೆಯಲ್ಲಿ ‘ಬಾಲಾಜಿ ಕ್ಯಾಂಟೀನ್‌’ ಶುರು ಮಾಡಿ ಇಡ್ಲಿ, ವಡೆ, ಪೂರಿ, ವ್ಯಾಪಾರ ನಡೆಸುತ್ತಿದ್ದಾರೆ.

15 ವರ್ಷಗಳ ಕಾಲ ಸಾಕಷ್ಟು ವಿದ್ಯಾರ್ಥಿಗಳಿಗೆ ಗಣಿತವನ್ನು ಕಲಿಸಿರುವ ಸಂತೋಷ ಅವರು, ಯಾರು ಏನೇ ಅಂದುಕೊಂಡರೂ ಪರವಾಗಿಲ್ಲ ಎಂದು ಬೀದಿ ಬದಿ ಹೋಟೆಲ್ ಉದ್ಯಮಕ್ಕೆ ಕೈ ಹಾಕಿದ್ದಾರೆ. ‘ದಾರಿ ಕಾಣದೆ ಕುಳಿತಿದ್ದಾಗ ಹೋಟೆಲ್ ಉದ್ಯಮದ ಯೋಚನೆ ಬಂತು. ದುಡಿಯಲು ಕೆಲಸ ಯಾವುದಾದರೂ ಏನು? ಎಂದು ಗೌರವಕ್ಕೆ ಅಂಜದೆ ಹೋಟಲ್‌ ಉದ್ಯಮಕ್ಕೆ ಮುಂದಾದೆ’ ಎಂದು ತುಂಬು ಸಂಸಾರದ ಹೊಣೆ ಹೊತ್ತಿರುವ ಸಂತೋಷ ‘ಪ್ರಜಾವಾಣಿ’ಗೆ ತಿಳಿಸಿದರು.

ಅನುದಾನರಹಿತ ಪಿವಿಎಸ್ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆ ಅಂದರೆ ಈ ಭಾಗದಲ್ಲಿ ಬಡವರ ಶಾಲೆಯೆಂದೇ ಫೇಮಸ್ಸು. 1 ರಿಂದ 5ನೇ ತರಗತಿಯವರೆಗೆ ಕಳೆದ 15 ವರ್ಷಗಳಿಂದ ಶಾಲೆ ನಡೆಸುತ್ತ ಬಂದಿರುವ ಇವರ ಸಂಸ್ಥೆಯಲ್ಲಿ ಬಡ ಮಕ್ಕಳಿಗೆ ಅತೀ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.