ಆಲಮಟ್ಟಿ ಜಲಾಶಯ
ಆಲಮಟ್ಟಿ: ನೆರೆಯ ತೆಲಂಗಾಣ ರಾಜ್ಯವು ನಾರಾಯಣಪುರ ಜಲಾಶಯದಿಂದ 5 ಟಿಎಂಸಿ ಅಡಿ ನೀರನ್ನು ಕೃಷಿಗೆ ಹಾಗೂ ಕುಡಿಯುವ ನೀರಿಗಾಗಿ ರಂಗಾರೆಡ್ಡಿ ಜಿಲ್ಲೆಯಲ್ಲಿನ ಜುರಾಲಾ ಅಣೆಕಟ್ಟೆಗೆ ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.
ಈ ಸಂಬಂಧ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ನೀರಿನ ಸಂಗ್ರಹ, ಲಭ್ಯತೆ, ಜೂನ್‌ವರೆಗೂ ಬಳಕೆಯ ಬಗ್ಗೆ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರು ಎರಡೂ ಜಲಾಶಯಗಳ ಅಧಿಕಾರಿಗಳಿಗೆ ಮಾಹಿತಿ ಕೇಳಿದ್ದಾರೆ.
ನೀರಿನ ಲಭ್ಯತೆ: ಸದ್ಯ ಆಲಮಟ್ಟಿ ಜಲಾಶಯದಲ್ಲಿ 42.892 ಟಿಎಂಸಿ ಅಡಿ. ನಾರಾಯಣಪುರ ಜಲಾಶಯದಲ್ಲಿ 13.22 ಟಿಎಂಸಿ ಅಡಿ ಸೇರಿ 56.112 ಟಿಎಂಸಿ ಅಡಿ ನೀರು ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಸಂಗ್ರಹಿತ ನೀರಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳ ಜಾಲಕ್ಕೆ ಮಾರ್ಚ್ 23ರವರೆಗೆ ವಾರಾಬಂಧಿ ಪದ್ಧತಿಗೆ ಒಳಪಟ್ಟು ಇನ್ನೂ 23 ದಿನಗಳ ಕಾಲ ನೀರು ಹರಿಸಬೇಕಿದೆ. ಅಷ್ಟು ದಿನಗಳ ಕಾಲ ನೀರು ಹರಿಸಲು 22 ಟಿಎಂಸಿ ಅಡಿ ನೀರು ಅಗತ್ಯವಿದೆ. 34 ಟಿಎಂಸಿ ಅಡಿ ನೀರು ಉಳಿಯುತ್ತದೆ. ಅದರಲ್ಲಿ ಜೂನ್‌ವರೆಗೂ ಕುಡಿಯುವ ನೀರು, ಭಾಷ್ಪಿಕರಣ, ವಿವಿಧ ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ನೀರು ಪೂರೈಕೆ (ಕೂಡಗಿ, ಯರಮರಸ್, ರಾಯಚೂರು, ಬಳ್ಳಾರಿ ಮೊದಲಾದ ಉಷ್ಣ ವಿದ್ಯುತ್ ಸ್ಥಾವರ), ಕೆರೆಗಳ ಭರ್ತಿ ಮತ್ತಿತರ ಬಳಕೆಗೆ 34 ಟಿಎಂಸಿ ಅಡಿ ನೀರು ಅಗತ್ಯ ಎಂದು ಹೇಳಿದರು.
ಜತೆಗೆ ಬೇಸಿಗೆಯಲ್ಲಿ ವಿವಿಧ ಕಡೆ ಕುಡಿಯುವ ನೀರಿನ ಕೊರತೆ ಉಂಟಾದರೆ ಮತ್ತೆ ಕಾಲುವೆಗಳ ಜಾಲದ ಮೂಲಕ ನೀರು ಹರಿಸಬೇಕಾಗುತ್ತದೆ. ಇಲ್ಲವೇ ಕೆಲ ಬೆಳೆ ಒಣಗುವ ಭೀತಿ ಆವರಿಸುತ್ತದೆ, ಅದಕ್ಕೂ ನೀರು ಒದಗಿಸುವ ಸ್ಥಿತಿ ಬರುತ್ತದೆ. ಹೀಗಾಗಿ ಜಲಾಶಯದಲ್ಲಿ ನೀರಿನ ಕೊರತೆ ಎದುರಾಗಲಿದೆ. ತೆಲಂಗಾಣಕ್ಕೆ ಸದ್ಯದ ಸ್ಥಿತಿಯಲ್ಲಿ ನೀರೊದಗಿಸುವುದು ಕಷ್ಟ ಸಾಧ್ಯ ಎಂದರು.
ನೀರಾವರಿಗೆ ನೀರೊದಗಿಸಲು ಅಸಾಧ್ಯ ಆದರೆ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾದರೇ ಅನಿವಾರ್ಯ ಕಾರಣಗಳಿಂದ ನೀರು ಹರಿಸಬಹುದು, ನಾರಾಯಣಪುರ ಜಲಾಶಯದಿಂದ ಯರಮರಸ್, ಶಕ್ತಿ ನಗರಗಳ ಉಷ್ಣ ವಿದ್ಯುತ್ ಸ್ಥಾವರಗಳಿಗೆ ನೀರು ಹರಿಸುವ ವೇಳೆ ತೆಲಂಗಾಣವೂ ನೀರು ಪಡೆಯುವ ಸಾಧ್ಯತೆಯಿದೆ ಎಂದರು.
ಇದೇ ಮೊದಲಲ್ಲ: 2019 ರಲ್ಲಿ 2 ಟಿಎಂಸಿ ಅಡಿ ಮತ್ತು 2024 ರಲ್ಲಿ 1.35 ಟಿಎಂಸಿ ಅಡಿ ನೀರು ಕುಡಿಯುವ ನೀರಿಗಾಗಿ ತೆಲಂಗಾಣಕ್ಕೆ ಹರಿಸಲಾಗಿದೆ. ನೆರೆಯ ರಾಜ್ಯಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸಿದಾಗ ಪರಸ್ಪರ ರಾಜ್ಯಗಳು ಸಹಾಯ ಮಾಡುವುದು ವಾಡಿಕೆ, ಆದರೆ ನೀರಾವರಿಗಾಗಿ ನೀರು ಹರಿಸಲು ಅಸಾಧ್ಯ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಕರಣ ಹಿಂಪಡೆಯಲಿ
ಅವಳಿ ಜಿಲ್ಲೆಯ ಬೆಳೆಗಳಿಗೆ ಸಮರ್ಪಕ ನೀರು ಒದಗಿಸಿಲ್ಲ. ಇನ್ನು ತೆಲಂಗಾಣಕ್ಕೆ ನೀರು ಪೂರೈಸುವುದಕ್ಕೆ ವಿರೋಧವಿದೆ ಎಂದು ರೈತ ಮುಖಂಡ ಅರವಿಂದ ಕುಲಕರ್ಣಿ ಹೇಳಿದರು.
ಗೊತ್ತಾಗದಂತೆ ನೀರು ಹರಿಸಿದರೆ ಹೋರಾಟ ನಡೆಸಬೇಕಾಗುತ್ತದೆ. ಎರಡೂ ರಾಜ್ಯಗಳಲ್ಲಿ ಒಂದೇ ಸರ್ಕಾರವಿದ್ದು, ಆ ಆಧಾರದ ಮೇಲೆ ನೀರು ಬಿಡಬಾರದು. ಹೀಗಾಗಿ ಜಲಾಶಯದ ಹೊರಹರಿವಿನ ಮೇಲೆ ನಿಗಾ ಇರಿಸಲಾಗುವುದು ಎಂದು ಅವರು ತಿಳಿಸಿದರು.
ಕೃಷ್ಣಾ ನ್ಯಾಯಾಧಿಕರಣ ಪ್ರಾಧಿಕಾರ-2 ತೀರ್ಮಾನದ ವಿರುದ್ಧ ತೆಲಂಗಾಣ ಸುಪ್ರಿಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿ ಸಲ್ಲಿಸಿ ಆಲಮಟ್ಟಿ ಜಲಾಶಯ ಎತ್ತರವಾಗದಂತೆ ತಡೆಗಟ್ಟಿದೆ. ಪ್ರಕರಣ ಹಿಂಪಡೆದು ಆಲಮಟ್ಟಿ ಜಲಾಶಯ ಎತ್ತರಕ್ಕೆ ಸಹಕಾರ ನೀಡಿದರೆ, ಸಮುದ್ರಕ್ಕೆ ವ್ಯರ್ಥವಾಗಿ ಹರಿಯುವ ನೀರನ್ನು ಆಲಮಟ್ಟಿಯಲ್ಲಿ ಸಂಗ್ರಹಿಸಿ, ನೀರಿನ ಲಭ್ಯತೆ, ಅಗತ್ಯತೆ ಅನುಗುಣ ಬೇಕಾದರೆ ತೆಲಂಗಾಣಕ್ಕೆ ನೀರು ಹರಿಸಬಹುದು. ಮೊದಲು ಎಸ್‌ಎಲ್‌ಪಿ ಹಿಂದಕ್ಕೆ ಪಡೆಯಬೇಕು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.