ಕೆಂಭಾವಿ: ತುಮಕೂರು ಜಿಲ್ಲೆಯ ಮೂಲದ ಯುವ ಹವ್ಯಾಸಿ ಕಲಾವಿದರೊಬ್ಬರು ರಾಜ್ಯದ ವಿವಿಧೆಡೆ ಅಯೋಧ್ಯ ನಗರದ ರಾಮಮಂದಿರದ ಮಾದರಿಯನ್ನು ಸಾಮಾನ್ಯ ಜನರಿಗೂ ತೋರಿಸುವ ಕಾಯಕದಲ್ಲಿ ತೊಡಗಿದ್ದಾರೆ.
ಹವ್ಯಾಸಿ ಕಲಾವಿದ ಹಾಗೂ ಅಧ್ಯಾತ್ಮ ಚಿಂತಕ ವಿನಯರಾಮ ಹಳೆಮನೆ ಅವರು, ಥರ್ಮಾಕೋಲ್ ಬಳಸಿ ಅಯೋಧ್ಯೆಯ ಶ್ರೀರಾಮಮಂದಿರದ ಮಾದರಿಯ ಪ್ರತಿಕೃತಿಯನ್ನು ಇಲ್ಲಿನ ಕೆಂಭಾವಿಯ ಉತ್ತರಾದಿ ಮಠದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಟ್ಟಿದ್ದಾರೆ.
ವಿನಯರಾಮ ಹಳೆಮನೆ ಅವರು ರಾಜ್ಯದ ವಿವಿಧ ಭಾಗದ 79 ಕಡೆ ಮಂದಿರದ ಪ್ರತಿಕೃತಿಯನ್ನು ಪ್ರದರ್ಶನಕ್ಕೆ ಇಟ್ಟಿದ್ದು, ಸದ್ಯ ಕೆಂಭಾವಿಯ ಉತ್ತರಾದಿ ಮಠದ ಸಮುದಾಯ ಭವನದಲ್ಲಿನ ಪ್ರದರ್ಶನವು 80ನೇಯದ್ದಾಗಿದೆ. ರಾಮನವಮಿಯಾದ ಏ.6 ರಂದು ಪ್ರದರ್ಶನ ಕೊನೆಗೊಳ್ಳಲಿದೆ.
80 ಕೆ.ಜಿ ಥರ್ಮಾಕೋಲ್, ಟೂತ್‍ಪೀಕ್, ಅಕ್ರಾಲಿಕ ವಾಟರ್ ಪೇಂಟ್, ಗುಂಡುಪಿನ್ ಹಾಗೂ ಫೆವಿಕಲ್ ಬಳಸಿ ನಿರ್ಮಿಸಿರುವ ಮಂದಿರವು ವಿದ್ಯುತ್ ದೀಪಗಳ ಅಲಂಕಾರಗಳಿಂದ ಕಂಗೊಳಿಸುತ್ತಿದೆ. ರಾಜ್ಯದ ವಿವಿಧೆಡೆ ಒಟ್ಟು 108 ಕಡೆ ಪ್ರತಿಕೃತಿ ಪ್ರದರ್ಶಿಸುವ ಗುರಿ ಹೊಂದಿರುವ ವಿನಯರಾಮ ಹಳೆಮನೆ ಅವರು, ಸ್ವಂತ ಖರ್ಚಿನಲ್ಲಿ ಎಲ್ಲೆಡೆ ಪ್ರದರ್ಶನಕ್ಕೆ ಇಡುತ್ತಿದ್ದಾರೆ.
ಅಯೋಧ್ಯೆಯ ಮಂದಿರದಂತೆಯೇ ಮೂರು ಮಹಡಿ ರಚಿಸಿದ್ದು, ನೆಲಮಹಡಿಯಲ್ಲಿ ಬಾಲರಾಮನ ಮೂರ್ತಿ, ಆರಂಭದಲ್ಲಿ ರಾಮ-ಸೀತೆ, ಭರತ-ಲಕ್ಷ್ಮಣ ಹಾಗೂ ಹನುಮನ ಚಿಕ್ಕ ಮೂರ್ತಿಗಳನ್ನು ಅಳವಡಿಸಿದ್ದಾರೆ. ಆಕರ್ಷಕವಾದ ಪ್ರತಿಕೃತಿಯ ಮಾದರಿಯು ಗಮನ ಸೆಳೆಯುತ್ತಿದೆ. ನಿತ್ಯ ಮುಂಜಾನೆ ಮತ್ತು ಸಂಜೆ ಪ್ರತಿಕೃತಿ ಪ್ರದರ್ಶನಗೊಳ್ಳುತ್ತಿದ್ದು,ಸಾರ್ವಜನಿಕರು ಇದನ್ನು ವೀಕ್ಷಿಸಬಹುದಾಗಿದೆ.
‘ಮಕ್ಕಳು ಮತ್ತು ವಯೋವೃದ್ಧರು ಅಯೋಧ್ಯೆಗೆ ಹೋಗಿ ಬರಲು ಕಷ್ಟವಾಗುತ್ತದೆ. ಹೀಗಾಗಿ ಹಿರಿಯರಿಗೆ ಅನುಕೂಲವಾಗಲು ರಾಮನ ಆದರ್ಶ ಚಿಂತನೆ ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ಜನರಿಗೆ ಪ್ರೇರಣೆ ನೀಡಲು ನಿರಂತರ ಪಯಣ ಮಾಡುತ್ತಿದ್ದೇನೆ. ಊಟ, ವಸತಿ ವ್ಯವಸ್ಥೆ ಮಾಡಿದರೆ ಸಾಕು ಎಲ್ಲಿಗಾದರೂ ರಾಮಮಂದಿರದ ಪ್ರತಿಕೃತಿಯೊಂದಿಗೆ ಹಾಜರಾಗುತ್ತಾನೆ’ ಎನ್ನುತ್ತಾರೆ ವಿನಯರಾಮ ಹಳೆಮನೆ.
ಹೆಚ್ಚಿನ ಮಾಹಿತಿಗೆ ವಿನಯರಾಮ ಹಳೆಮನೆ ಅವರ ಮೊ. 95382 57357 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.