ADVERTISEMENT

ಯಾದಗಿರಿ | ಬೇಗುದಿ ಹೆಚ್ಚಿಸಿದ ಆಂತರಿಕ ವರ್ಗಾವಣೆ

ಬಿ.ಜಿ.ಪ್ರವೀಣಕುಮಾರ
Published 7 ಡಿಸೆಂಬರ್ 2023, 4:22 IST
Last Updated 7 ಡಿಸೆಂಬರ್ 2023, 4:22 IST
ಯಾದಗಿರಿ ನಗರ ಪೊಲೀಸ್ ಠಾಣೆ
ಯಾದಗಿರಿ ನಗರ ಪೊಲೀಸ್ ಠಾಣೆ   

ಯಾದಗಿರಿ: ಜಿಲ್ಲೆಯಲ್ಲಿ ಆಡಳಿತಾತ್ಮಕ ಹಿತದೃಷ್ಟಿಯ ನೆಪವಾಗಿಟ್ಟುಕೊಂಡು ಜಿಲ್ಲೆಯ ವಿವಿಧ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ 20ಕ್ಕೂ ಹೆಚ್ಚು ಸಿಬ್ಬಂದಿಯನ್ನು ವರ್ಗಾವಣೆಗೊಳಿಸಿರುವುದು ಅಂತರಿಕ ಬೇಗುದಿ ಹೆಚ್ಚಿಸಿದೆ. ವರ್ಗಾವಣೆಗೆ ಪೊಲೀಸರು ಬೇಸರ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಅಕ್ಕಿ ನಾಪತ್ತೆ ಪ್ರಕರಣ, ಕೋಳಿ ಪಂದ್ಯ, ಇಸ್ಪೀಟ್‌, ಮಟ್ಕಾ, ಅಕ್ರಮ ಮರಳು ಸಾಗಣಿಕೆ ಪ್ರಕರಣಗಳು ಸದ್ದು ಮಾಡುತ್ತಿರುವಾಗ ರಾಜಕೀಯ ಪ್ರಭಾವದಿಂದ ಕೆಲ ಪೊಲೀಸ್ ಸಿಬ್ಬಂದಿ ವರ್ಗಾವಣೆ ಮಾಡಿಸಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.

ಹೊಸ ಸರ್ಕಾರ ರಚನೆಯಾದ ನಂತರ ವರ್ಗಾವಣೆ ಸಹಜ. ಆದರೆ, ಐದು ತಿಂಗಳ ನಂತರ ವರ್ಗಾವಣೆ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ADVERTISEMENT

‘ಈಗ ವರ್ಗಾವಣೆಯ ಸಮಯವಲ್ಲ. ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದ್ದೇವೆ. ವರ್ಗಾವಣೆಗೊಂಡರೆ ಕುಟುಂಬ ಸಮೇತ ಸ್ಥಳ ನಿಯೋಜನೆ ಠಾಣೆಗೆ ತೆರಳಿ ವರದಿ ಸಲ್ಲಿಸಬೇಕು. ನಮಗೆ ಕರ್ತವ್ಯ ನಿರ್ವಹಿಸುತ್ತಿರುವ ಠಾಣೆಯಲ್ಲಿ ಅವಧಿ ಮುಕ್ತಾಯವಾಗಿಲ್ಲ. ಆದರೆ, ವರ್ಗಾವಣೆಯ ಆದೇಶ ಪತ್ರದಲ್ಲಿ ಸ್ವಂತ ಕೋರಿಕೆ ಮೇರೆಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದು ನಮಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ’ ಎಂದು ಪೊಲೀಸ್ ಸಿಬ್ಬಂದಿ ಯೊಬ್ಬರು ನೋವು ತೋಡಿಕೊಂಡರು.

ಅಲ್ಲದೆ ಈ ಮೊದಲು ಠಾಣೆಯಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿಯೇ ಮತ್ತೆ ಅಲ್ಲಿಗೆ ರಾಜಕೀಯ ಪ್ರಭಾವಿಗಳ ಶಿಫಾರಸಿನ ಮೇಲೆ ಬಂದಿದ್ದಾರೆ. ಅದರಂತೆ ಜಿಲ್ಲೆಯ ಎಲ್ಲ ಪೊಲೀಸ್‌ ಠಾಣೆಗಳಲ್ಲಿ ಕೆಲ ಪೊಲೀಸ್ ಸಿಬ್ಬಂದಿ ಶಿಫಾರಸ್ಸಿನ ಮೇಲೆ ಆಗಮಿಸಿದ್ದಾರೆ ಪೊಲೀಸ್ ಸಿಬ್ಬಂದಿ ಒಬ್ಬರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಹಲವು ಠಾಣೆಗಳ ಮೇಲಧಿಕಾರಿಗಳು ಸಿಬ್ಬಂದಿಯನ್ನು ವರ್ಗಾವಣೆಗೆ ಶಿಫಾರಸು ಮಾಡಿದ್ದರಿಂದ ಆಡಳಿತಾತ್ಮಕ ದೃಷ್ಟಿಯಿಂದ ಸ್ಥಳ ಬದಲಾವಣೆ ಮಾಡಲಾಗಿದೆ
ಜಿ.ಸಂಗೀತಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಯಾವ ಹಂತದ ಸಿಬ್ಬಂದಿ ವರ್ಗಾವಣೆ?

ಸಿವಿಲ್‌ ಹೆಡ್‌ ಕಾನ್‌ಸ್ಟೆಬಲ್‌ (ಸಿಎಚ್‌ಸಿ) ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ (ಎಎಸ್‌ಐ) ಸಿವಿಲ್‌ ಪೊಲೀಸ್‌ ಕಾನ್‌ಸ್ಟೆಬಲ್‌ (ಸಿಪಿಸಿ) ಸೇರಿದಂತೆ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ‘ಸಂಬಂಧಪಟ್ಟ ಠಾಣಾಧಿಕಾರಿಗಳು ವರ್ಗಾವಣೆಗೊಂಡ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಪಿಸಿ ಸೇರಿದಂತೆ ಕರ್ತವ್ಯದಿಂದ ಬಿಡುಗಡೆ ಮಾಡಿ ಯಾವುದೇ ಸೇರಿಕೆ ಕಾಲ ಉಪಯೋಗಿಸಿಕೊಳ್ಳದೆ ಪೊಲೀಸ್ ಠಾಣೆಯ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸೂಚಿಸಿ ಕಳಿಸಿ ಕೊಡಬೇಕು. ಸ್ವಂತಕ್ಕೆ ಕೋರಿಕೆ ಮೇರೆಗೆ ವರ್ಗಾವಣೆ ಆಗಿದ್ದರಿಂದ ಪ್ರಯಾಣ ಭತ್ಯೆ/ ಸೇರುವಿಕೆ ಕಾಲ ಪಡೆಯಲು ಅರ್ಹ ಇರುವುದಿಲ್ಲ. ಅದರಂತೆ ಈ ಸಿಬ್ಬಂದಿ ಕರ್ತವ್ಯದಿಂದ ಬಿಡುಗಡೆಯಾದ ಕರ್ತವ್ಯಕ್ಕೆ ವರದಿ ಮಾಡಿಕೊಂಡ ಬಗ್ಗೆ ಕಚೇರಿಗೆ ಪಾಲನಾ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚಿಸಿದ್ದಾರೆ.

ಎಲ್ಲಿಂದ ಎಲ್ಲಿಗೆ?

ಹಲವು ಪೊಲೀಸ್‌ ಕಾನ್‌ಸ್ಟೆಬಲ್‌ಗಳನ್ನು ಜಿಲ್ಲೆಯ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ವರ್ಗಾವಣೆ ಮಾಡಲಾಗಿದೆ. ಉದಾಹರಣೆಗೆ ನಾರಾಯಣಪುರದಿಂದ ಗುರುಮಠಕಲ್‌ ಗುರುಮಠಕಲ್‌ನಿಂದ ನಾರಾಯಣಪುರ ವಡಗೇರಾರದಿಂದ ಕೋಡೆಕಲ್‌ ಕೋಡೆಕಲ್‌ನಿಂದ ಯಾದಗಿರಿ ಗ್ರಾಮೀಣ ಶಹಾಪುರದಿಂದ ಸೈದಾಪುರ ಸುರಪುರದಿಂದ ಕೆಂಭಾವಿ ಸಂಚಾರ ಠಾಣೆ ಡಿಎಸ್‌ಬಿ ಘಟಕ ಡಿಪಿಒ ಈ ರೀತಿಯಾಗಿ ಹಲವರಿಗೆ ಸ್ಥಳ ಬದಲಾವಣೆ ಮಾಡಲಾಗಿದೆ. ಇದರಿಂದ ಕೆಲವರಿಗೆ ಸಹಜವಾಗಿ ಅಸಮಾಧಾನ ಉಂಟಾಗಿದೆ. ಕೆಲವರಿಗೆ ಇಷ್ಟ ಇಲ್ಲದಿದ್ದರೂ ವರದಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.