
ವಡಗೇರಾ: ಪಟ್ಟಣದಲ್ಲಿ ಆದಿ ದೇವತೆ ಅಂಭಾಮಹೇಶ್ವರಿಯ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಮಧ್ಯೆ ಅತ್ಯಂತ ಅದ್ದೂರಿಯಾಗಿ ಜರುಗಿತು.
ಮೂರು ವರ್ಷಕ್ಕೊಮ್ಮೆ ಜರುಗುವ ಈ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರದಿಂದಲೇ ದೇವಾಲಯದ ಸಮಿತಿಯವರು ಸಕಲ ಸಿದ್ದತೆ ಆರಂಭಿಸಿದ್ದರು. ಸೋಮವಾರ ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ಹಲವಾರು ಪೂಜಾ ಕೈಂಕರ್ಯಗಳನ್ನು ನಡೆಸಿ ರಾತ್ರಿ ದೇವಿಯ ಮೂರ್ತಿಯನ್ನು ಗರ್ಭಗುಡಿಯಿಂದ ದೇವಸ್ಥಾನದ ಆವರಣಕ್ಕೆ ತಂದು ಪ್ರತಿಷ್ಠಾಪಿಸಿ ರಾತ್ರಿಯಿಡಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು.
ನಂತರ ಮಂಗಳವಾರ ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ 9 ಗಂಟೆಗೆ ದೇವಿಯ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಡೊಳ್ಳು, ಹಲಗೆ ಸೇರಿದಂತೆ ಇನ್ನೀತರ ಮಂಗಲ ವಾದ್ಯಗಳ ಮೂಲಕ ಗಂಗಾಸ್ನಾನಕ್ಕೆ ತೆಗೆದುಕೊಂಡು ಹೋಗಲಾಯಿತು.
ಅಲ್ಲಿ ಗಂಗಾ ಮಾತೆಗೆ ಪೂಜೆ ಸಲ್ಲಿಸಿದ ನಂತರ ದೇವಿಯ ಮೂರ್ತಿಗೆ ಗಂಗಾಸ್ನಾನ ಮಾಡಿಸಿ ವಿವಿಧ ಪೂಜೆಗಳನ್ನು ನೆರವೇರಿಸಿ ಅಲ್ಲಿಂದ ಮರಳಿ ಪಟ್ಟಣಕ್ಕೆ ಭವ್ಯ ಮೆರವಣಿಗೆ ಮೂಲಕ ದೇವಿಯ ಮೂರ್ತಿಯನ್ನು ದೇವಸ್ಥಾನಕ್ಕೆ ತಂದು ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಯಿತು.
ನಂತರ ಇಳೆಯವರ ಮನೆಯಿಂದ ಕುಂಭ, ಕಳಶ ತಂದು ವಿಶೇಷ ಪೂಜೆಗಳನ್ನು ಸಲ್ಲಿಸಿದ ನಂತರ ದೇವಿಗೆ ಉಡಿ ತುಂಬಿ ನೈವೇದ್ಯ ಸಲ್ಲಿಸಿದ ಮೇಲೆ ಸಾರ್ವಜನಿಕರಿಗೆ ಉಡಿ ತುಂಬಲು ನೈವೇದ್ಯ ಸಲ್ಲಿಸಲು ಅವಕಾಶ ಮಾಡಿ ಕೊಡಲಾಯಿತು.
ಇದಕ್ಕೂ ಮುಂಚೆ ಮೆರವಣಿಗೆಯಲ್ಲಿ ಯುವಕರು, ಮುಖಂಡರು, ದೇವಿಯ ರಥವನ್ನು ಎಳೆಯುತ್ತಾ ದೇವಿಯ ಜಯಘೋಷ ಕೂಗುತ್ತಾ, ಡೊಳ್ಳು ಹಾಗೂ ತಮಟೆ ವಾದ್ಯಗಳಿಗೆ ಹೆಜ್ಜೆ ಹಾಕುತ್ತಾ ಭಕ್ತರು ಭಕ್ತಿ ಪರಾಕಾಷ್ಠೆಯನ್ನು ತೋರಿದರು.
ದೇವಿಯ ಜಾತ್ರೆಯು ಮೂರು ವರ್ಷಕ್ಕೊಮ್ಮೆ ನಡೆಯುವುದರಿಂದ ಪಟ್ಟಣವಷ್ಟೆ ಅಲ್ಲದೇ ಆಂದ್ರ, ತೆಲಂಗಾಣ ಮಹಾರಾಷ್ಟ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಬಂದಂತ ಅಪಾರ ಪ್ರಮಾಣದ ಭಕ್ತರು ದೇವಿಯ ದರ್ಶನ ಪಡೆಯಲು ಕಿಕ್ಕಿರಿದು ಸೇರಿದ್ದರು.
ಜಾತ್ರೆಯಲ್ಲಿ ಅಹಿತಕರ ಘಟನೆಗಳು ಜರುಗದಂತೆ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡಲು ಪಿಎಸ್ಐ ಮಹೇಬೂಬ ಅಲಿ ನೇತೃತ್ವದಲ್ಲಿ ಸೂಕ್ತ ಪೊಲೀಸ ಬಂದೋಬಸ್ತ್ ಮಾಡಲಾಗಿತ್ತು.
ಜಾತ್ರೆಯ ನಿಮಿತ್ತ ರಕ್ತದಾನ ಶಿಬಿರ
ಜಾತ್ರೆಯ ಅಂಗವಾಗಿ ಗೆಳೆಯರ ಬಳಗ ಹಾಗೂ ವೈದ್ಯಕೀಯ ವಿಜ್ಞಾನ ಸಂಸ್ಥೆ ರಕ್ತ ನಿಧಿ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಸುಮಾರು 50 ಕ್ಕೂ ಹೆಚ್ಚಿನ ಯುವಕರು ರಕ್ತದಾನ ಮಾಡಿದರು. ಇದರಲ್ಲಿ ತಾಪಂ ಇಒ ಮಲ್ಲಿಕಾರ್ಜುನ ಸಂಗ್ವಾರ ಪಿಎಸ್‌ಐ ಮಹೇಬೂಬು ಅಲಿ ರಕ್ತದಾನ ಮಾಡಿ ಯುವಕರಿಗೆ ಮಾದರಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.