ವಡಗೇರಾ: ತಾಲ್ಲೂಕಿನ ಹಾಲಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡ್ಡೆಸೂಗುರು ಗ್ರಾಮದಲ್ಲಿ ಭೀಮಾ ನದಿಯಿಂದ ನೀರು ಪೂರೈಕೆ ಮಾಡುವ ಪೈಪ್ ಹಾಳಾಗಿರುವದರಿಂದ ಗ್ರಾಮಸ್ಥರು ನೀರಿಗಾಗಿ ಪರದಾಡುತ್ತಿದ್ದಾರೆ.
ಗಡ್ಡೆಸೂಗುರು ಗ್ರಾಮಕ್ಕೆ ಈ ಹಿಂದೆ ಭೀಮಾ ನದಿಯಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಗ್ರಾಮಸ್ಥರು ನದಿ ನೀರನ್ನು ಕುಡಿಯಲು, ಬಟ್ಟೆ ತೊಳೆಯಲು ಉಪಯೋಗಿಸುತ್ತಿದ್ದರು.
ಕಳೆದ ಹಲವು ದಿನಗಳಿಂದ ಭೀಮಾ ನದಿಯಿಂದ ಸರಬರಾಜು ಮಾಡುವ ನೀರಿನ ಪೈಪ್ ಒಡೆದಿದ್ದರಿಂದ ನೀರು ಪೂರೈಕೆ ಸ್ಥಗಿತವಾಗಿದೆ. ಮಹಿಳೆಯರು ಖಾಲಿ ಕೋಡಗಳನ್ನು ಹಿಡಿದುಕೊಂಡು ನೀರಿಗಾಗಿ ಅಲೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಹಣ ಇದ್ದವರು ಟ್ಯಾಂಕರ್ ನೀರು ಖರೀದಿ ಮಾಡಿ ಮನೆಗಳಿಗೆ ನೀರು ತರುತ್ತಿದ್ದಾರೆ. ಬಡವರು ಭೀಮಾನದಿಗೆ ತೆರಳಿ ನೀರು ತರುವ ಅನಿವಾರ್ಯತೆ ಇದೆ.
ಗ್ರಾಮದಲ್ಲಿ ಇರುವ ಬಹುತೇಕ ಬೋರ್‌ವೆಲ್ ನೀರು ಲವಣಾಂಶದಿಂದ ಕೂಡಿರುವುದರಿಂದ ಗ್ರಾಮಸ್ಥರು ಆ ನೀರನ್ನು ಬಟ್ಟೆ ಒಗೆಯಲು ಹಾಗೂ ಇನ್ನಿತರ ಕೆಲಸಗಳಿಗೆ ಬಳಕೆ ಮಾಡುತ್ತಾರೆ. ಮಹಿಳೆಯರು ಈ ನೀರು ಪಡೆಯಲು ಹರಸಾಹಸ ಪಡುತ್ತಿದ್ದಾರೆ.
ಸಿಹಿ ನೀರಿಗಾಗಿ 1 ಕಿ.ಮೀ ನಡೆಯಬೇಕು: ಸಿಹಿ ನೀರಿಗಾಗಿ ಗ್ರಾಮಸ್ಥರು ಗಡ್ಡೆಸೂಗುರು ಗೇಟ್ ಬಳಿಯ ಬೇರ್‌ವೆಲ್‌ಗೆ ಬರಬೇಕು. ಅಲ್ಲಿಂದ ಮಹಿಳೆಯರು ತಲೆ, ಸೊಂಟದ ಮೇಲೆ ಒಂದೊಂದು ಕೊಡ ಇಟ್ಟುಕೊಂಡು ಚುನಾಯಿತ ಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾ ನೀರು ತರುತ್ತಾರೆ.
ಶಾಲಾ ಬಾಲಕರು ಸಹ ತ್ರಿಚಕ್ರ ವಾಹನದಲ್ಲಿ ಕೊಡಗಳನ್ನು ತುಂಬಿಕೊಂಡು ತಳ್ಳುತ್ತಾ ನೀರು ತುರುವುದು ಸಾಮಾನ್ಯ ದೃಶ್ಯವಾಗಿದೆ.
ಗಡ್ಡೆಸೂಗುರು ಗ್ರಾಮದಲ್ಲಿ ಸುಮಾರು ₹1 ಕೋಟಿ ರೂಪಾಯಿಗಳ ವೆಚ್ಚದಲ್ಲಿ 317 ಮನೆಗಳಿಗೆ ನೀರನ್ನು ಸರಬರಾಜು ಮಾಡಬೇಕು. ಜಲ ಜೀವನ್ ಮಿಷನ್ ಅಡಿ ಮನೆ ಮನೆಗೆ ಗಂಗೆ ಎಂಬ ಯೋಜನೆಗೆ 2023ರ ಮಾರ್ಚ್‌ನಲ್ಲಿ ಸರ್ಕಾರ ಕಾರ್ಯಾದೇಶ ನೀಡಿದೆ. ಕಾಮಗಾರಿ ಪೂರ್ಣವಾಗಿ ವರ್ಷಗಳೇ ಕಳೆದದರೂ ಒಂದೇ ಒಂದು ಹನಿ ನೀರು ಮನೆಗಳಿಗೆ ಸರಬರಾಜು ಆಗಿಲ್ಲ.
ಸಮಸ್ಯೆಗೆ ಸ್ಪಂದಿಸಿದ ಇಒ: ಸಮಸ್ಯೆ ಗಮನಕ್ಕೆ ಬಂದ ತಕ್ಷಣ ವಡಗೇರಾ ತಾ.ಪಂ ಇಒ ಮಲ್ಲಿಕಾರ್ಜುನ ಸಂಗ್ವಾರ ಗ್ರಾಮಕ್ಕೆ ಬೇಟಿ ಕೊಟ್ಟು ಖಾಸಗಿ ವ್ಯಕ್ತಿಯೊಬ್ಬರ ಬಾವಿಯಿಂದ ನೀರು ಸರಬರಾಜು ಮಾಡಲು ಕ್ರಮ ಕೈಗೊಂಡಿದ್ದಾರೆ.
ಗಡ್ಡೆಸೂಗುರ ಗ್ರಾಮದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕಾದರೆ ಭೀಮಾ ನದಿಯಿಂದ ಸರಬರಾಜು ಮಾಡುವ ಪೈಪ್‌ಗಳನ್ನು ದುರಸ್ತಿ ಮಾಡಬೇಕು ಎನ್ನುವುದು ಗ್ರಾಮಸ್ಥರ ಮಾತು.
ನೀರು ಹೊತ್ತು ಸಾಕ್ಯಾಗದ. ಕನ್ಯಾ ಕೇಳಾಕ್ ಹೋದರ ‘ನಿಮ್ಮ ಊರಾಗ ಕುಡ್ಯಾಕ ನೀರಿಲ್ಲ ಕನ್ಯಾ ಕೊಟ್ಟರ ನೀರ್ ಹೊತ್ತ ಸಾಯಬೇಕ್. ಕನ್ಯಾ ಕೊಡಲ್ಲ’ ಅಂತ ಹೇಳತಾರುಮಹೇಬೂಬಿ ಗಡ್ಡೆಸೂಗುರು
ಭೀಮಾ ನದಿಯಿಂದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಈಗಾಗಲೇ ಸಂಬಂಧಪಟ್ಟ ಜೆಇ ಜತೆ ಮಾತನಾಡಲಾಗಿದೆ. ಗದ್ದೆಗಳಲ್ಲಿ ಭತ್ತ ಇರುವದರಿಂದ ಸಮಸ್ಯೆಯಾಗಿದೆ. 15 ದಿನಗಳಲ್ಲಿ ಭತ್ತಕಟಾವು ಆಗುತ್ತದೆ. ಬಳಿಕ ಪೈಪ್‌ಲೈನ್ ಕಾಮಗಾರಿ ಆರಂಭಿಸಲಾಗುವುದುಮಲ್ಲಿಕಾರ್ಜುನ ಸಂಗ್ವಾರ ತಾ.ಪಂ ಇಒ ವಡಗೇರಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.