ADVERTISEMENT

ವೇದಾಂತದ ಮೆದುಳು, ಇಸ್ಲಾಂ ದೇಹ ಅವಶ್ಯ: ಪ್ರವಚನಕಾರ ಲಾಲ್ ಹುಸೇನ್ ಕಂದಗಲ್

ಪೈಗಂಬರ್ ಮುಹಮ್ಮದ್ ಸೀರತ್ ಅಭಿಯಾನ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 7:01 IST
Last Updated 14 ಸೆಪ್ಟೆಂಬರ್ 2025, 7:01 IST
ಯಾದಗಿರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶಾಂತವೀರ ಗುರು ಮುರಘರಾಜೇಂದ್ರ ಸ್ವಾಮೀಜಿ ಮಾತನಾಡಿದುರ. ಗಣ್ಯರು ಉಪಸ್ಥಿತರಿದ್ದರು
ಯಾದಗಿರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶಾಂತವೀರ ಗುರು ಮುರಘರಾಜೇಂದ್ರ ಸ್ವಾಮೀಜಿ ಮಾತನಾಡಿದುರ. ಗಣ್ಯರು ಉಪಸ್ಥಿತರಿದ್ದರು   

ಯಾದಗಿರಿ: ‘ಭಾರತಕ್ಕೆ ವೇದಾಂತದ ಮೆದುಳು, ಇಸ್ಲಾಂನ ದೇಹದ ಅಗತ್ಯವಿದೆ ಎಂದು ಸ್ವಾಮಿ ವಿವೇಕಾನಂದರು ಹೇಳಿರುವುದು ಪ್ರಸ್ತುತ ದಿನಗಳಲ್ಲಿ ದೇಶಕ್ಕೆ ಬೇಕಾಗಿದೆ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು’ ಎಂದು ಪ್ರವಚನಕಾರ ಲಾಲ್ ಹುಸೇನ್ ಕಂದಗಲ್ ಹೇಳಿದರು.

ಇಲ್ಲಿನ ಈಡನ್ ಗಾರ್ಡನ್‌ ಫಂಕ್ಷನ್ ಹಾಲ್‌ನಲ್ಲಿ ಶನಿವಾರ ಜಮಾತೆ ಇಸ್ಲಾಮಿ ಹಿಂದ್ ಜಿಲ್ಲಾ ಘಟಕವು ಪೈಗಂಬರ್ ಮುಹಮ್ಮದ್ ಸೀರತ್ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಸಿರತ್ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬ್ರಿಟಿಷರು ಒಡೆದು ಆಳುವ ನೀತಿಯನ್ನು ಅನುಸರಿಸಿ ನಮ್ಮನ್ನು 200 ವರ್ಷಗಳ ಕಾಲ ಆಳಿದ್ದರು. ಸ್ವಾತಂತ್ರ್ಯದ ಬಳಿಕ ಅಧಿಕಾರಕ್ಕೆ ಬಂದ ನಮ್ಮವರೂ ಅದೇ ಮಾರ್ಗದಲ್ಲಿ ಸಾಗುತ್ತಿದ್ದಾರೆ. ಜಾತಿ, ಧರ್ಮಗಳ ನಡುವಿನ ಒಗ್ಗಟ್ಟು ಅವರಿಗೆ ಬೇಕಾಗಿಲ್ಲ. ಹೀಗಾಗಿ, ದೇಶದಲ್ಲಿ ಸಹಸ್ರಾರು ಕೋಮುಗಲಭೆಗಳು, ಜಾತಿ ಗಲಭೆಗಳು ನಡೆದಿವೆ. ಅವುಗಳ ಲಾಭ ಯಾವುದೇ ಜಾತಿ, ಧರ್ಮಕ್ಕೆ ಆಗಿಲ್ಲ. ಬದಲಿಗೆ ರಾಜಕೀಯ ಪಕ್ಷಗಳಿಗೆ ಆಗಿದೆ’ ಎಂದರು.

ADVERTISEMENT

‘ಪ್ರವಾದಿಗಳ, ದಾರ್ಶನಿಕರ ನೈತಿಕ ಹಾಗೂ ಮಾನವೀಯ ಮೌಲ್ಯಗಳಲ್ಲಿ ಯಾರೂ ತಾರತಮ್ಯ ಮಾಡಬಾರದು. ಎಲ್ಲರಲ್ಲಿ ವಿಶ್ವಾಸ ಇರಿಸಿ, ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಹೃದಯವಂತಿಕೆ ನಮ್ಮಲ್ಲಿ ಬರಬೇಕು. ಉನ್ನತ ವಿಚಾರಗಳನ್ನು ಒಪ್ಪಿಕೊಂಡು ಪ್ರಜ್ಞೆಯೊಂದಿಗೆ ಒಗ್ಗೂಡಿ ಬಾಳಬೇಕು’ ಎಂದು ಹೇಳಿದರು.

‘ಪುರುಷರಿಗಿಂತ ಮಹಿಳೆಯರು ಮೂರು ಪಟ್ಟು ಶ್ರೇಷ್ಠವೆಂದ ಪ್ರವಾದಿ ಪೈಗಂಬರರು, ತಾಯಿಯನ್ನು ಕಡೆಗಣಿಸಿದರೆ ಸ್ವರ್ಗ ಸಿಗುವುದಿಲ್ಲ ಎಂದು ಬೋಧಿಸಿದ್ದರು. ಪ್ರವಾದಿಗಳು ಮಸೀದಿಗಳನ್ನು ಕಟ್ಟಿಸಿದವರು ಶ್ರೇಷ್ಠ ಎನ್ನಲಿಲ್ಲ. ನಡೆ ಹಾಗೂ ನಾಲಿಗೆಯಿಂದ ಮತ್ತೊಬ್ಬರಿಗೆ ನೋವುಂಟು ಮಾಡದಂತೆ ಬದುಕಿ ಎಂಬ ಸರಳ ಸಂದೇಶವನ್ನು ಸಾರಿದ್ದರು’ ಎಂದರು.

ಗುರುಮಠಕಲ್ ಖಾಸಾ ಮಠದ ಶಾಂತವೀರ ಗುರು ಮುರಘರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ಅಂಬೇಡ್ಕರ್ ಅವರು ಧರ್ಮಗಳನ್ನು ಮನೆಗಳಲ್ಲಿ ಆಚರಣೆ ಮಾಡಿ, ಮನೆಯಿಂದ ಹೊರಗಡೆ ಬಂದು ಸಂವಿಧಾನದಡಿಯಲ್ಲಿ ಬದುಕಬೇಕು ಎಂದಿದ್ದರು. ಮನೆಯಿಂದ ಹೊರಗೆ ಬಂದ ಬಳಿಕ ನಾವೆಲ್ಲರೂ ಸಾರ್ವತ್ರಿಕರಾಗುತ್ತೇವೆ. ಹೀಗಾಗಿ, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಘನತೆ ಮತ್ತು ಗೌರವಕ್ಕೆ ಧಕ್ಕೆ ಆಗುವಂತಹ ಆಚರಣೆಗಳನ್ನು ಮಾಡಬಾರದು’ ಎಂದು ಹೇಳಿದರು.

‌ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಲಲಿತಾ ಅನಪುರ, ಡಾನ್ ಬಾಸ್ಕೊಶಿಕ್ಷಣ ಸಂಸ್ಥೆಯ ನಿರ್ದೇಶಕ ಫಾದರ್ ಸಾಜಿ ಜಾರ್ಜ್, ತಂಜಿಮುಲ್ ಮುಸ್ಲಿಮಿನ ಬೈತುಲ್ ಮಾಲ್ ಜಿಲ್ಲಾ ಅಧ್ಯಕ್ಷ ಗುಲಾಮ್ ಸಮದಾನಿ ಮುಸಾ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಚನ್ನಪ್ಪಗೌಡ ಮೊಸಂಬಿ, ಡಿಎಸ್‌ಎಸ್‌ ಮುಖಂಡ ಮರೆಪ್ಪ ಚಟ್ಟೆರ್‌ಕರ್, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಅಧ್ಯಕ್ಷ ಗುಂಡಪ್ಪ ಕಲಬುರಗಿ ಉಪಸ್ಥಿತರಿದ್ದರು.

ಪ್ರವಾದಿ ಜಗತ್ತಿಗೆ ಬಂದಿದ್ದು ಪರಿವರ್ತನೆಯ ಹರಿಕಾರರಾಗಿ. ಹೆಣ್ಣಿಗೆ ಸಮಾನತೆ ತಂದುಕೊಟ್ಟು ಶ್ರೀಮಂತಿಕೆಯಲ್ಲಿ ಬಡವರು ನಿರ್ಗತಿಕರಿಗೆ ಹಕ್ಕಿದೆ ಎಂದು ಪ್ರತಿಪಾದಿಸಿದ್ದರು
ಲಾಲ್ ಹುಸೇನ್ ಕಂದಗಲ್  ಪ್ರವಚನಕಾರ

‘ಸಮಾಜದ ಮುಖಂಡರು ತಪ್ಪು ತಿದ್ದಲಿ’

‘ಸಾರ್ವತ್ರಿಕ ಸ್ಥಳದಲ್ಲಿ ರಕ್ತಪಾತಕ್ಕೆ ಎಡೆಮಾಡಿಕೊಡದೆ ಐಕ್ಯತೆ ಮತ್ತು ಕೋಮುಸೌಹಾರ್ದತೆಯಿಂದ ಬಾಳಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಐಕ್ಯತೆಗೆ ವಿಷಬೀಜ ಬಿತ್ತುವುದನ್ನೇ ಹೆಚ್ಚಾಗಿ ಕಾಣುತ್ತಿದ್ದೇವೆ. ಅದರ ಬಗ್ಗೆ ಜಾಗೃತಿ ವಹಿಸಬೇಕು. ಯಾರು ಏನೆ ಮಾಡಿದರೂ ಐಕ್ಯತೆ ಒಡೆಯಬಾರದು. ತಪ್ಪು ಮಾಡಿದವರನ್ನು ಆಯಾ ಸಮಾಜದ ಮುಖಂಡರೇ ತಿದ್ದುವ ಕೆಲಸ ಮಾಡಬೇಕಿದೆ’ ಎಂದು  ಶಾಂತವೀರ ಗುರು ಮುರಘರಾಜೇಂದ್ರ ಸ್ವಾಮೀಜಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.